More

    ಕಳಸಾ-ಬಂಡೂರಿಗೆ 2000 ಕೋ. ರೂ. ನೀಡಿ

    ಹುಬ್ಬಳ್ಳಿ: ಮಾರ್ಚ್ 5ರಂದು ಮಂಡಿಸಲಿರುವ 2020-21ನೇ ಸಾಲಿನ ರಾಜ್ಯ ಬಜೆಟ್​ನಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆಗೆ 2000 ಕೋಟಿ ರೂ. ಹಂಚಿಕೆ ಮಾಡಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ, ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧಿಕರಣದ ಐತೀರ್ಪ ಅನುಷ್ಠಾನಗೊಳಿಸಲು ಗೆಜೆಟ್ ಅಧಿಸೂಚನೆ ಹೊರಡಿಸಲು ಸವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಲು ತಯಾರಿ ಮಾಡಬೇಕು ಎಂದರು.

    ಸವೋಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ಕೋರಲಾಗುವುದು ಎಂದು ಗೋವಾ ಸಿಎಂ ಪ್ರಮೋದ ಸಾವಂತ ಹೇಳಿದ್ದಾರೆ. ತಕ್ಷಣ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ತರಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರ ಕೇಂದ್ರ ಜಲಶಕ್ತಿ ಸಚಿವರ ಬಳಿ ಸರ್ವಪಕ್ಷಗಳ ನಿಯೋಗ ಒಯ್ಯಬೇಕು ಎಂದು ಆಗ್ರಹಿಸಿದರು.

    ರಾಜ್ಯದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಗೋವಾದ ಕ್ಯಾಸಿನೋದಂಥ ಜೂಜು ಅಡ್ಡೆಗಳನ್ನು ಸ್ಥಾಪಿಸುವುದಾಗಿ ಸಚಿವ ಸಿ.ಟಿ. ರವಿ ಹೇಳಿರುವುದು ಸರಿಯಲ್ಲ. ಹಿಂದೊಮ್ಮೆ ಅಬಕಾರಿ ಸಚಿವರು ಮನೆ ಮನೆಗೆ ಹೋಗಿ ಸರಾಯಿ ಮಾರಾಟ ಮಾಡುತ್ತೇವೆ ಎಂದಿದ್ದರು. ಮಾತೆತ್ತಿದರೆ ಸಂಸ್ಕೃತಿ, ಸಂಸ್ಕಾರ ಎನ್ನುವ ಬಿಜೆಪಿಯವರಿಗೆ ಇದು ಶೋಭೆ ತರುವಂಥದ್ದಲ್ಲ. ರಾಜ್ಯದಲ್ಲಿ ಕ್ಯಾಸಿನೋಗೆ ಪ್ರೋತ್ಸಾಹ ಕೊಡುವಂಥ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ ಎಂದು ರಾಜ್ಯ ಸರ್ಕಾರ ತಕ್ಷಣ ಸ್ಪಷ್ಟನೆ ನೀಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದರು.

    ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರ ಬಳಿ 1.07 ಲಕ್ಷ ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ. ಇದರರ್ಥ ರಾಜ್ಯ ಸರ್ಕಾರ ಚಲನಶೀಲತೆ ಕಳೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಕಡತ ಬಾಕಿ ಉಳಿಯುವುದರಿಂದ ಭ್ರಷ್ಟಾಚಾರ, ಶೋಷಣೆ ಹೆಚ್ಚುತ್ತದೆ. ನ್ಯಾಯ ವಿಳಂಬವಾಗುತ್ತದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕಡತ ವಿಲೇವಾರಿಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಂಎಲ್​ಸಿ ಶ್ರೀನಿವಾಸ ಮಾನೆ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ವಸಂತ ಲದವಾ, ಸದಾನಂದ ಡಂಗನವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts