More

    ನೀರಿಗೆ ನಿಧಿ, ನಗರಕ್ಕೆ ಪ್ಯಾಕೇಜ್ ಸಿಗಲಿ

    ಹುಬ್ಬಳ್ಳಿ: ಜನ-ಜಾನುವಾರುಗಳ ಬಳಕೆಗೆ, ವಿಶಾಲ ಕೃಷಿ ಕ್ಷೇತ್ರಕ್ಕೆ, ಕೈಗಾರಿಕೆಗಳಿಗೆ.. ಹೀಗೆ ದೊಡ್ಡ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇರುವ ಧಾರವಾಡ ಜಿಲ್ಲೆಗೆ ಸ್ವಂತದ್ದಾದ ನದಿ ಇಲ್ಲ. ಪಕ್ಕದ ಜಿಲ್ಲೆಯ ಮಲಪ್ರಭಾ ನದಿ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಲಪ್ರಭೆಯ ಒಡಲು ಸಮೃದ್ಧಿಯಾಗಲು ಕಳಸಾ-ಬಂಡೂರಿ ಯೋಜನೆ ಜಾರಿ ಮಾಡುವುದು ದಶಕಗಳ ಭರವಸೆಯಾಗಿ ಉಳಿದಿದೆ. 2021-22ರ ಆಯವ್ಯಯದಲ್ಲಿ ಈ ಯೋಜನೆಗಾಗಿ ಕನಿಷ್ಠ ಸಾವಿರ ಕೋಟಿ ರೂ. ಅನುದಾನವನ್ನು ಇಡಿ ಧಾರವಾಡ ಜಿಲ್ಲೆ ಜನರು ನಿರೀಕ್ಷಿಸುತ್ತಿದ್ದಾರೆ.

    ಕಳೆದ ಸಲ ಕಳಸಾ-ಬಂಡೂರಿಗಾಗಿ 500 ಕೋಟಿ ರೂಪಾಯಿ ತೆಗೆದಿಟ್ಟರೂ ತಾಂತ್ರಿಕ ತೊಡಕುಗಳಿಂದಾಗಿ ಬಳಕೆ ಸಾಧ್ಯವಾಗಿಲ್ಲ. ಶೀಘ್ರದಲ್ಲಿ ತೊಡಕು ಪರಿಹಾರವಾಗುವ ಭರವಸೆ ಇದ್ದು, ಯೋಜನೆ ಜಾರಿಗೆ ಹೆಚ್ಚಿನ ಹಣ ಬೇಕಾಗುತ್ತದೆ. ಅಲ್ಲದೆ, ಮಹದಾಯಿ ನದಿ ನೀರಿನಲ್ಲಿ ರಾಜ್ಯದ ಪಾಲನ್ನು ಪೂರ್ತಿಯಾಗಿ ಬಳಕೆ ಮಾಡಿಕೊಳ್ಳಲು ದೊಡ್ಡ ಪ್ರಮಾಣದ ಬಜೆಟ್ ಬೆಂಬಲ ಬೇಕಿದೆ.

    ಜಿಲ್ಲೆಯ ಇನ್ನೊಂದು ಪ್ರಮುಖ ಯೋಜನೆ ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳದ ನೀರು ಸಂಗ್ರಹಿಸುವುದು. ಜತೆಗೆ, ಇರುವ ಕೆರೆಗಳ ಸಂರಕ್ಷಣೆ, ಹೊಸ ಕೆರೆ ನಿರ್ವಣ, ಮಲಪ್ರಭಾ ಬಲದಂಡೆ ಕಾಲುವೆಗಳ ನವೀಕರಣ ಸೇರಿದಂತೆ ಜಲಸಮೃದ್ಧಿಗಾಗಿ ಪ್ರತ್ಯೇಕವಾಗಿ ಅನುದಾನ ಬೇಕಿದೆ.

    ಪ್ಯಾಕೇಜ್ ಕೊಡಲಿ: ಹು-ಧಾ ಮಹಾನಗರದ ಜನಸಂಖ್ಯೆ 10 ಲಕ್ಷ ಮೀರಿದ್ದು, ಮೂಲಸೌಕರ್ಯ ಸಮಾಧಾನಕರವಾಗಿಲ್ಲ. ಕೇಂದ್ರ ಸರ್ಕಾರ ಸೆಂಟ್ರಲ್ ರೋಡ್ ಫಂಡ್(ಸಿಆರ್​ಎಫ್)ನಿಂದ ಅನುದಾನ ಮಂಜೂರಿ ಮಾಡಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಕಾಯ್ದಿರಿಸಿ, ಸಕಾಲದಲ್ಲಿ ಬಿಡುಗಡೆ ಮಾಡುವುದು ಅಗತ್ಯವಾಗಿದೆ.

    ಹುಬ್ಬಳ್ಳಿಯು ಹಳೇ ಕಾಲದ ನಗರ. ಹಳೇಹುಬ್ಬಳ್ಳಿ-ಹೊಸ ಹುಬ್ಬಳ್ಳಿ ಎಂಬ ಭಾಗಗಳಿವೆ. ಒಂದು ಕಾಲದಲ್ಲಿ ಅಗಲವಾಗಿದ್ದ ರಸ್ತೆಗಳು ವಾಹನಗಳ ಸಂಖ್ಯೆ ವಿಪರೀತ ಹೆಚ್ಚಿರುವ ಈ ಕಾಲಕ್ಕೆ ಬಹಳ ಚಿಕ್ಕದಾಗಿವೆ. ವಿದ್ಯಾನಗರಿ ಧಾರವಾಡದಲ್ಲೂ ಇದೇ ಪರಿಸ್ಥಿತಿ ಇದೆ. ಹೀಗಾಗಿ, ಬದಲಾದ ಕಾಲಕ್ಕೆ ತಕ್ಕಂತೆ ರಸ್ತೆಗಳ ವಿಸ್ತರಣೆ, ಉನ್ನತೀಕರಣಕ್ಕೆ ಹಣ ಬಂದರೂ ಭೂಸ್ವಾಧೀನ ಆಗದೇ ಇರುವುದು ಸಮಸ್ಯೆಯಾಗಿದೆ. ಸ್ಥಳೀಯ ಆಡಳಿತ ವ್ಯವಸ್ಥೆಯಾಗಿರುವ ಮಹಾನಗರ ಪಾಲಿಕೆಯು ಆರ್ಥಿಕ ತೊಂದರೆಯಿಂದ ಬಳಲುತ್ತಿದೆ. ಆದ್ದರಿಂದ, ಸರ್ಕಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕನಿಷ್ಠ 1000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೊಷಿಸಬೇಕು.

    ಧಾರವಾಡ-ಕಿತ್ತೂರು- ಬೆಳಗಾವಿ ನೇರ ರೈಲು ಮಾರ್ಗಕ್ಕಾಗಿ ಭೂಸ್ವಾಧೀನಕ್ಕೆ ಪ್ರತ್ಯೇಕ ಅನುದಾನ, ಕೈಗಾರಿಕಾ ವಸಾಹತುಗಳ ಸುಧಾರಣೆಗೆ ಆದ್ಯತೆ ನೀಡಬೇಕಿದೆ. ಅಳ್ನಾವರ, ಅಣ್ಣಿಗೇರಿ ಹೊಸ ತಾಲೂಕುಗಳು ಹೆಸರಿಗಷ್ಟೇ ಎಂಬಂತಾಗಿದೆ. ಅಲ್ಲಿ ಆಡಳಿತ ಸೌಧ ನಿರ್ವಿುಸಿ ಪೂರ್ಣ ಪ್ರಮಾಣದ ಇಲಾಖಾ ಕಚೇರಿಗಳು ಆರಂಭಗೊಳ್ಳುವಂತೆ ಮಾಡಬೇಕಿದೆ. ಹುಬ್ಬಳ್ಳಿ ಗ್ರಾಮೀಣ ಗ್ರಾಮೀಣ ತಾಲೂಕಿಗೆ ಸಹ ಅಗತ್ಯ ಸಿಬ್ಬಂದಿ ಮತ್ತು ಮೂಲಸೌಕರ್ಯಗಳು ಬೇಕಿವೆ.

    ಹುಬ್ಬಳ್ಳಿ-ಧಾರವಾಡ ಹೊರತುಪಡಿಸಿ ಉಳಿದ ತಾಲೂಕು ಕೇಂದ್ರಗಳು ಮತ್ತು ಹಳ್ಳಿಗಳಿಗೆ ರಸ್ತೆ, ನೀರು ಪೂರೈಕೆ ಸೇರಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕಿದೆ. ಬ್ಯಾಡಗಿ ಮೆಣಸಿನಕಾಯಿ, ಧಾರವಾಡ ಆಪೂಸು ಹೀಗೆ ಜಿಲ್ಲೆಯ ಪ್ರಮುಖ ಬೆಳೆಗಳನ್ನು ಪ್ರೋತ್ಸಾಹಿಸಲು ಪೂರಕ ವಿಶೇಷ ಯೋಜನೆಗಳನ್ನು ಘೊಷಿಸಬೇಕು. ಧಾರವಾಡದಲ್ಲಿ ಕಲಾ ಗ್ರಾಮ, ಹುಬ್ಬಳ್ಳಿಯಲ್ಲಿ ಗಾಂಧಿ ಗ್ರಾಮ ಸ್ಥಾಪನೆ, ರಾಯಾಪುರದಲ್ಲಿಯ ಎನ್​ಜಿಇಎಫ್ ಪುನಶ್ಚೇತನಕ್ಕೆ ಸರ್ಕಾರ ಅನುದಾನ ಒದಗಿಸಬೇಕಿದೆ.

    ತೆರಿಗೆ ಸಂಗ್ರಹ ಆಧರಿತವಾಗಿ ನೋಡಿದಾಗ ದೊಡ್ಡ ಮೊತ್ತದ ಯೋಜನೆಗಳನ್ನು ಸರ್ಕಾರ ಘೊಷಿಸುವ ಸಾಧ್ಯತೆ ಕಡಿಮೆ. ಆದರೆ, ದೀರ್ಘಾವಧಿ ಅಭಿವೃದ್ಧಿಗೆ ಪೂರಕವಾಗಿ ನಗರ-ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಕೌಶಲ ತರಬೇತಿ ಸಂಸ್ಥೆ, ಆಸ್ಪತ್ರೆಗಳ ಸುಧಾರಣೆ, ಕೈಗಾರಿಕೆಗಳಿಗೆ ಉತ್ತೇಜನ ಇತ್ಯಾದಿಗಳನ್ನು ನಿರೀಕ್ಷಿಸಬಹುದಾಗಿದೆ.

    | ಡಾ. ಎನ್.ಎ. ಚರಂತಿಮಠ,

    ಹಿರಿಯ ಲೆಕ್ಕ ಪರಿಶೋಧಕರು, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts