More

    ಕಳಪೆ ಬೀಜ, ರಸಗೊಬ್ಬರ ವಿತರಿಸುವಲ್ಲಿ ಲೋಪವಾದಲ್ಲಿ ಕ್ರಮ

    ಚಿತ್ರದುರ್ಗ: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ಪೂರೈಸಿ. ಆದರೆ, ಕಳಪೆ ವಿತರಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.

    ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮುಂಗಾರು ಕೃಷಿ ಪೂರ್ವಸಿದ್ಧತಾ ಕಾರ್ಯಾಗಾರ, ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು.

    ಚಿತ್ರದುರ್ಗ ಕೃಷಿಯಾಧಾರಿತ ಜಿಲ್ಲೆ. ಈ ಬಾರಿ ಪೂರ್ವ ಮುಂಗಾರು ಉತ್ತಮ ಮಳೆಯಾಗಿದೆ. ಹೀಗಾಗಿ ಅಗತ್ಯ ಸಿದ್ಧತೆ ಕೈಗೊಳ್ಳಿ. ಕೃಷಿಯಲ್ಲಿ ಹೊಸ ತಾಂತ್ರಿಕತೆ ಅಳವಡಿಕೆ, ಅಧಿಕ ಇಳುವರಿ ಸಂಬಂಧ ನೂತನ ತಳಿ ಬಿತ್ತನೆ ಬೀಜಗಳ ಪರಿಚಯವನ್ನು ನಿಗದಿತ ಅವಧಿದಲ್ಲಿ ರೈತರಿಗೆ ತಲುಪಿಸಿ. ಅಗತ್ಯತೆ ಅನುಸಾರ ಬಿತ್ತನೆ ಬೀಜ, ರಸಗೊಬ್ಬರ ಪ್ರಮಾಣ ದಾಸ್ತಾನು ಮಾಡಿಕೊಳ್ಳಿ. ಅಧಿಕಾರಿಗಳು ಗುಣಮಟ್ಟ ಪರಿಶೀಲಿಸಿ ಎಂದು ಸೂಚಿಸಿದರು.

    ಜಿಲ್ಲೆಯಲ್ಲಿನ ಕೃಷಿ ಪರಿಕರಗಳ ಮಾರಾಟಗಾರರು ಬಿತ್ತನೆ ಬೀಜ, ರಸಗೊಬ್ಬರ ನಿಗದಿತ ದರಕ್ಕೆ ಮಾರಾಟ ಮಾಡಬೇಕು. ಹೆಚ್ಚು ಹಣ ಪಡೆಯುವಂತಿಲ್ಲ ಎಂದ ಅವರು, ರೈತ ಸಂಪರ್ಕ ಕೇಂದ್ರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸೂಕ್ತ ಮಾಹಿತಿ ನೀಡುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ. ಇದು ಪುನರಾವರ್ತನೆ ಆಗಬಾರದು. 24*7 ಕಾರ್ಯನಿರ್ವಹಿಸುವ ಮೂಲಕ ರೈತರ ಹಿತ ಕಾಯಬೇಕು ಎಂದು ತಾಕೀತು ಮಾಡಿದರು.

    ಸ್ಪಂದಿಸದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ: ಬೆಳೆ ವಿಮೆ-ನಷ್ಟ ಪರಿಹಾರ ಪಾವತಿ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ, ಎಸಿ ಸೇರಿ ಆಯಾ ತಾಲೂಕು ಕಚೇರಿಗಳಲ್ಲೂ ಸಹಾಯವಾಣಿ ಕೇಂದ್ರ ಸ್ಥಾಪಿಸಿದ್ದು, ಕಳೆದೊಂದು ವಾರದಿಂದ ರೈತರಿಂದ ದೂರು ಸ್ವೀಕರಿಸಲಾಗುತ್ತಿದೆ. ಬೆಳೆ ಸಮೀಕ್ಷೆ (ಕ್ರಾಪ್ ಕಟ್ಟಿಂಗ್) ಪ್ರಯೋಗ ಸಮರ್ಪಕವಾಗಿ ಆಗದ ಕಾರಣ ಚಳ್ಳಕೆರೆ ತಾಲೂಕಿನ ಕೆಲ ಭಾಗಗಳಲ್ಲಿ ವಿಮಾ ಹಣ ಹಲವರಿಗೆ ತಲುಪಿಲ್ಲ. ಗೊಂದಲಕ್ಕೆ ಅವಕಾಶ ನೀಡದೆ, ಸರಿಯಾಗಿ ಸರ್ವೇ ನಡೆಸಬೇಕು. ಇಲ್ಲದಿದ್ದರೆ, ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಸಿದರು.

    ವಿಮಾ ಹಣ ಸಾಲಕ್ಕೆ ಜಮೆ ಮಾಡುವಂತಿಲ್ಲ: ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ, ಬೆಳೆ ವಿಮೆ-ನಷ್ಟ ಪರಿಹಾರದ ಮೊತ್ತವನ್ನು ಬ್ಯಾಂಕ್‌ಗಳು ಯಾವ ಕಾರಣಕ್ಕೂ ಫಲಾನುಭವಿಯ ಸಾಲಕ್ಕೆ ಜಮಾ ಮಾಡಿಕೊಳ್ಳುವಂತಿಲ್ಲ. ತಾಂತ್ರಿಕ ಕಾರಣಕ್ಕೆ ಜಮೆಯಾಗಿದ್ದರೆ, ಕಡ್ಡಾಯವಾಗಿ ಮರುಪಾವತಿಸಿ. ಇಲ್ಲದಿದ್ದರೆ, ಅಂತಹ ಬ್ಯಾಂಕ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವೆಂಕಟೇಶ್ ತಿಳಿಸಿದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಜಿಲ್ಲೆಯೂ ಶೇ. 75ರಷ್ಟು ಮುಂಗಾರು ಆಧಾರಿತ ಕೃಷಿ ಚಟುವಟಿಕೆ ಅವಲಂಬಿಸಿದೆ. ಈ ಬಾರಿ ವರುಣನ ಕೃಪೆ ಆಶದಾಯಕವಾಗಿದ್ದು, ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಶೇ. 9ರಷ್ಟು ಹೆಚ್ಚುವರಿ ಮಳೆಯಾಗಿದೆ. ಹೀಗಾಗಿ 3.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

    ಶೇಂಗಾ, ಮುಸುಕಿನ ಜೋಳ, ರಾಗಿ, ಸಿರಿಧಾನ್ಯ ಕ್ರಮವಾಗಿ 1.14 ಲಕ್ಷ, 90 ಸಾವಿರ, 50 ಸಾವಿರ, 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಲಿದೆ. ರಾಜ್ಯದಲ್ಲೇ ಹೊಸದುರ್ಗ ತಾಲೂಕಿನಲ್ಲಿ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ ಈ ಬಾರಿ 4 ಕೋಟಿ ವೆಚ್ಚದಲ್ಲಿ ಸಿರಿಧಾನ್ಯ ಮೌಲ್ಯವರ್ಧನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ಮುಂಗಾರಿನಲ್ಲಿ ಜಿಲ್ಲೆಗೆ 64 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಇದೆ. 12 ಸಾವಿರ ಮೆಟ್ರಿಕ್ ಟನ್ ಡಿಎಪಿ ರಸಗೊಬ್ಬರ ಬಿತ್ತನೆ ವೇಳೆ ಅಗತ್ಯವಿದ್ದು, ಪ್ರಸ್ತುತ 4 ಸಾವಿರ ಮೆಟ್ರಿಕ್ ಟನ್ ಡಿಎಪಿ ರಸಗೊಬ್ಬರ ದಾಸ್ತಾನು ಇದೆ ಎಂದು ತಿಳಿಸಿದರು.

    ಜಿಲ್ಲೆಯ 80 ಸಾವಿರ ರೈತರಿಗೆ 284 ಕೋಟಿ ರೂ. ಬೆಳೆವಿಮೆ, 144 ಕೋಟಿ ರೂ. ಬೆಳೆ ಹಾನಿ ಸೇರಿ ಒಟ್ಟು 400 ಕೋಟಿ ರೂ.ಗೂ ಅಧಿಕ ಪರಿಹಾರದ ಹಣ ಅರ್ಹ ರೈತರ ಖಾತೆಗೆ ಜಮೆಯಾಗಿದೆ ಎಂದು ಮಾಹಿತಿ ನೀಡಿದರು.

    ಇದೇ ವೇಳೆ ಜಿಪಂ ಆವರಣದಲ್ಲಿ ಟಿ.ವೆಂಕಟೇಶ್ ಅವರು ಔಷಧಿ ಸಿಂಪಡಿಸುವ ಡ್ರೋನ್‌ಗೆ ಚಾಲನೆ ನೀಡಿದರು.

    ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ, ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಓಂಕಾರಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ಉಪಕೃಷಿ ನಿರ್ದೇಶಕರಾದ ಶಿವಕುಮಾರ್, ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಕುಮಾರ್, ಪ್ರವೀಣ್‌ಚೌಧರಿ, ತಹಸೀಲ್ದಾರ್ ಡಾ.ನಾಗವೇಣಿ, ಇಫ್ಕೊ ಸಂಸ್ಥೆಯ ಜಿಲ್ಲಾಮಟ್ಟದ ಅಧಿಕಾರಿ ಚಿದಂಬರಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts