More

    ಕಳಪೆ ಬೀಜ, ಗೊಬ್ಬರ ವಿತರಿಸಿದರೆ ಶಿಸ್ತು ಕ್ರಮ

    ನರೇಗಲ್ಲ: ಪಟ್ಟಣದ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮಾರಾಟದ ಅಂಗಡಿಗಳಿಗೆ ಕೃಷಿ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಗುಣಮಟ್ಟದ ಪರಿಕರ ಮಾರಾಟ ಮಾಡುವಂತೆ ಅಂಗಡಿಗಳ ಮಾಲೀಕರಿಗೆ ತಾಕೀತು ಮಾಡಿದರು.

    ಕೃಷಿ ಇಲಾಖೆ ಜಾರಿ ದಳದ ಜಿಲ್ಲಾ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲ ಮಾತನಾಡಿ, ರೈತರಿಗೆ ಗುಣಮಟ್ಟದ ವಸ್ತುಗಳು, ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ವಿತರಿಸಬೇಕು. ವಸ್ತುಗಳನ್ನು ಖರೀದಿಸಿದ ರೈತರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ಅವಧಿ ಮೀರಿದ ಪರಿಕರಗಳನ್ನು ವ್ಯಾಪಾರಿಗಳು ನಾಶಪಡಿಸಬೇಕು. ಅವಧಿ ಮುಗಿದ ವಸ್ತುಗಳ ಮಾರಾಟ ಕುರಿತು ದೂರು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ರೈತರಿಂದ ದೂರು ಬಾರದಂತೆ ಎಚ್ಚರ ವಹಿಸಬೇಕು. ಕೃಷಿ ಇಲಾಖೆ ಸೂಚಿಸಿದ ಮಾನದಂಡದಂತೆ ವಹಿವಾಟು ಮಾಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.

    ನರೇಗಲ್ಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ (ಎಒ) ಜಗದೀಶ ಹಾದಿಮನಿ ಮಾತನಾಡಿ, ರೈತರಿಗೆ ಪ್ರಮಾಣೀಕರಿಸಿದ ಬಿತ್ತನೆ ಬೀಜಗಳನ್ನು ಮಾತ್ರ ಮಾರಾಟ ಮಾಡಬೇಕು. ಅಂಗಡಿಯಲ್ಲಿನ ದಾಸ್ತಾನು, ದರವನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ರೈತರು ಕೃಷಿ ಅಧಿಕಾರಿಗಳನ್ನು ಸಂರ್ಪಸಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ಖರೀದಿಸಿ ರಸೀದಿ ಪಡೆಯಬೇಕು. ಹೋಬಳಿಯಾದ್ಯಂತ 15ಕ್ಕೂ ಅಧಿಕ ರೈತ ಸಂಪರ್ಕ ಕೇಂದ್ರಗಳಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಕಳಪೆ ಬೀಜಗಳನ್ನು ಮಾರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಸೂಚನಾ ಫಲಕದಲ್ಲಿ ದಾಸ್ತಾನುಗಳ ವಿವರ, ದರ ನಮೂದಿಸದ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಲಾಯಿತು.

    ರೈತರು, ವ್ಯಾಪಾರಸ್ಥರಿಗೆ ಜಾಗೃತಿ

    ಮುಂಡರಗಿ: ಕರೊನಾ ವೈರಸ್ ಜಗತ್ತಿನಾದ್ಯಂತ ತೀವ್ರವಾಗಿ ಹರಡುತ್ತಿದೆ. ಮುಂಜಾಗ್ರತೆ ಕ್ರಮ ಕೈಗೊಳ್ಳುವ ಕುರಿತು ರೈತರಿಗೆ ತಿಳಿವಳಿಕೆ ನೀಡಬೇಕು ಎಂದು ಧಾರವಾಡ ಕೃಷಿ ವಿದ್ಯಾಲಯದ ವಿಜ್ಞಾನಿ ಡಾ. ಸುಮಾ ಮುಗುಳಿ ಹೇಳಿದರು.

    ಪಟ್ಟಣದ ಬೀಜ, ಗೊಬ್ಬರ, ಕ್ರಿಮಿನಾಶಕ ಮೊದಲಾದ ಕೃಷಿ ಸಾಮಗ್ರಿ ಮಾರಾಟ ಮಳಿಗೆಗಳಿಗೆ ಮಂಗಳವಾರ ಭೇಟಿ ನೀಡಿ ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಜಾಗೃತಿ ಮೂಡಿಸಿದರು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯಾಪಾರಸ್ಥರು ನೋಡಿಕೊಳ್ಳಬೇಕು ಎಂದು ಹೇಳಿದರು.

    ಗದಗ ಕೃಷಿ ವಿಸ್ತರಣಾ ಘಟಕದ ಮುಖ್ಯಸ್ಥ ಡಾ. ಸಿ.ಎಂ. ರಫಿ ಮಾತನಾಡಿ, ಬೀಜ, ಗೊಬ್ಬರ, ಕ್ರಿಮಿನಾಶಕ ಖರೀದಿಸಲು ಅಂಗಡಿಗಳಿಗೆ ಆಗಮಿಸುವ ರೈತರು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಎಲ್ಲರೂ ಮಾಸ್ಕ್ ಧರಿಸಬೇಕು. ಆಗಾಗ ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಛಗೊಳಿಸಬೇಕು. ರೈತರು ಬೆಳೆಗಳು ಮಾರಾಟವಾಗಲಿಲ್ಲವೆಂದು ದುಡುಕಿ ನಾಶ ಮಾಡಬಾರದು. ಕಷ್ಟಪಟ್ಟು ಬೆಳೆದ ಬೆಳೆಯನ್ನು ಸ್ಥಳೀಯವಾಗಿ ಮಾರಾಟ ಮಾಡಲು ಮುಂದಾಗಬೇಕು ಎಂದು ತಿಳಿಸಿದರು. ನಂತರ ಪಟ್ಟಣ, ಡಂಬಳ ಗ್ರಾಮದ ಕೆಲವು ರೈತರ ಜಮೀನುಗಳಿಗೆ ತೆರಳಿ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು. ಕೃಷಿ ಅಧಿಕಾರಿ ರವಿಕುಮಾರ ಹಾವನೂರು, ಗೌರಿಶಂಕರ ಸಜ್ಜನರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts