More

    ಕಲ್ಲೋಡ್ಡು ಯೋಜನೆಗೆ ವಿರೋಧ

    ಶಿವಮೊಗ್ಗ: ಕಲ್ಲೊಡ್ಡು ಯೋಜನೆ ಜಾರಿಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರೋಧ ವ್ಯಕ್ತಪಡಿಸಿದ್ದಾರೆ.

    ಕಲ್ಲೊಡ್ಡು ಯೋಜನೆ ಜಾರಿಗೊಳಿಸುವುದಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳುತ್ತಾರೆ. ಶಾಸಕ ಹರತಾಳ ಹಾಲಪ್ಪ ಯೋಜನೆ ಮಾಡುವುದಕ್ಕೆ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಯಾರ ಮಾತನ್ನು ನಂಬಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

    ಸಾಗರ ತಾಲೂಕು ಎರಡು ಬಾರಿ ಮುಳುಗಡೆಯಾಗಿದ್ದು, ಕಲ್ಲೊಡ್ಡು ಯೋಜನೆಯಿಂದ ಮತ್ತೆ ಮುಳುಗಡೆ ಆಗಲಿದೆ. ಲೋಕಸಭಾ ಸದಸ್ಯರು ಮತ್ತು ಶಾಸಕರ ವಿಭಿನ್ನ ಹೇಳಿಕೆಗಳು ಗೊಂದಲ ಸೃಷ್ಟಿಸುತ್ತಿವೆ. ಯಾವುದೆ ಕಾರಣಕ್ಕೂ ಕಲ್ಲೊಡ್ಡು ಯೋಜನೆಯನ್ನು ಜಾರಿಗೆ ತರಬಾರದು ಎಂದು ಮನವಿ ಮಾಡಿದರು.

    ಜಿಲ್ಲೆಯನ್ನು ವಿಭಜನೆ ಮಾಡಿ, ಶಿಕಾರಿಪುರ ಜಿಲ್ಲೆ ರಚನೆ ಮಾಡುವ ಲಕ್ಷಣಗಳು ಕಾಣಿಸುತ್ತಿವೆ. ಈಗಾಗಲೆ ಸಾಗರದಲ್ಲಿದ್ದ ಹಲವು ಕಚೇರಿಗಳನ್ನು ಶಿಕಾರಿಪುರಕ್ಕೆ ಶಿಫ್ಟ್ ಮಾಡಲಾಗಿದೆ. ಏನೇ ಅಭಿವೃದ್ಧಿ ಬೇಕಿದ್ದರೂ ಮಾಡಲಿ, ಆದರೆ ಜಿಲ್ಲೆ ವಿಭಜನೆ ಮಾಡಬೇಡಿ ಎಂದು ಅವರು ಸಿಎಂಗೆ ಮನವಿ ಮಾಡಿದರು.

    ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಶರಾವತಿ ಜಲಾಶಯ ಭರ್ತಿಯಾಗಿದ್ದರೂ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಟ್ರಾನ್ಸ್​ಫಾರ್ಮರ್​ಗಳು ಕೆಟ್ಟುಹೋದರೆ 24 ಗಂಟೆಯಲ್ಲಿ ಬದಲಿಸುತ್ತಿಲ್ಲ. ಇಂತಹ ಪರಿಸ್ಥಿತಿ ಇರುವಾಗ ಸಿಎಂ ಶಿಕಾರಿಪುರವನ್ನು ಪ್ರತ್ಯೇಕ ಜಿಲ್ಲೆ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂದರು.

    ಕರೊನಾಕ್ಕಿಂತ ಕೆಎಫ್​ಡಿ ಮಾರಕ: ಮಂಗನ ಕಾಯಿಲೆ ಕರೊನಾಕ್ಕಿಂತ ಭೀಕರವಾಗಿ ಪರಿಣಮಿಸುತ್ತಿದೆ. ಈ ಬಗ್ಗೆ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕು. ಈಗಾಗಲೇ 23 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾಗರದಿಂದ ಸಿದ್ದಾಪುರದವರೆಗೂ ವಿಸ್ತರಿಸಿದೆ. ಹಾಗಾಗಿ ಸರ್ಕಾರ ಮಂಕಿ ಪಾರ್ಕ್ ನಿರ್ಮಾಣ ಮಾಡುವುದು ಸೇರಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಹೊಗಳು ಭಟ್ಟರು: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಇಬ್ಬರೂ ಹೊಗಳು ಭಟ್ಟರು. ನರೇಂದ್ರಮೋದಿ ಪ್ರಧಾನಿಯಾದ ಬಳಿಕ ಸೈನಿಕರು ಸತ್ತಿಲ್ಲವೇ? ಪುಲ್ವಾಮಾ ದಾಳಿಯಲ್ಲೇ 40ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ. ಈರುಳ್ಳಿ ಬೆಲೆ 200 ರೂ. ತಲುಪಿದಾಗ ಈ ಇಬ್ಬರು ಎಲ್ಲಿಗೆ ಹೋಗಿದ್ದರು. ಏಕೆ ಮಾತನಾಡಲಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದರೂ ತುಟಿ ಬಿಚ್ಚುತ್ತಿಲ್ಲ. ಇದೇನಾ ಅಚ್ಛೇ ದಿನ್? ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.

    ಮುಖಂಡರಾದ ಹುಲ್ತಿಕೊಪ್ಪ ಶ್ರೀಧರ್, ಸೂಗೂರು ಶಿವಣ್ಣ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts