More

    ಕಲ್ಪಿತ ನ್ಯಾಯಾಲಯ ಸ್ಪರ್ಧೆಯಿಂದ ನಿಪುಣತೆ

    ಬೆಳಗಾವಿ: ಕಲ್ಪಿತ ನ್ಯಾಯಾಲಯ ಸ್ಪರ್ಧೆಯು ಕಾನೂನು ವಿದ್ಯಾರ್ಥಿಗಳನ್ನು ನುರಿತ ವಕೀಲರಾಗಿ ರೂಪುಗೊಳಿಸುವಲ್ಲಿ ಸಹಕಾರಿಯಾಗಿದೆ ಎಂದು ಕೆಎಲ್‌ಎಸ್ ಅಧ್ಯಕ್ಷ, ವಕೀಲ ಪಿ.ಎಸ್. ಸಾವಕಾರ ಹೇಳಿದರು.

    ನಗರದ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರದಿಂದ ಹಮ್ಮಿಕೊಂಡಿರುವ ಮೂರು ದಿನಗಳ ಅಖಿಲ ಭಾರತ 11ನೇ ಎಂ.ಕೆ. ನಂಬಿಯಾರ್ ‘ಕಲ್ಪಿತ ನ್ಯಾಯಾಲಯ
    ಸ್ಪರ್ಧೆ’ಗೆ ಚಾಲನೆ ನೀಡಿ ಮಾತನಾಡಿದರು.

    ಭಾರತದ ಅಟಾರ್ನಿ ಜನರಲ್ ಪದ್ಮ ಭೂಷಣ ಕೆ.ಕೆ. ವೇಣುಗೋಪಾಲ ಅವರು ಈ ಸ್ಪರ್ಧೆಯ ಮಹಾಪೋಷಕರಾಗಿದ್ದಾರೆ. ಈ ಸ್ಪರ್ಧೆಯನ್ನು ಅವರು ತಮ್ಮ ತಂದೆ ಹಾಗೂ ಹಿರಿಯ ವಕೀಲ ಎಂ.ಕೆ. ನಂಬಿಯಾರ ಅವರ ಹೆಸರಿನಲ್ಲಿ ನಡೆಸುವಂತೆ ಸೂಚಿಸಿದ್ದಾರೆ. ಕೆ.ಕೆ. ವೇಣುಗೋಪಾಲ ಅವರು ನಮ್ಮ ಹೆಮ್ಮೆಯ ಮಾಜಿ ವಿದ್ಯಾರ್ಥಿ. ವರ್ಷದಿಂದ ವರ್ಷಕ್ಕೆ ಈ ಸ್ಪರ್ಧೆ ಪ್ರತಿಷ್ಠಿತ ಸ್ಪರ್ಧೆಯಾಗಿ ಬೆಳೆಯುತ್ತಿದೆ. ಇದರಲ್ಲಿ
    ಪಾಲ್ಗೊಳ್ಳಲು ದೇಶದ ವಿವಿಧ ರಾಜ್ಯಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ ಎಂದರು.

    ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ ಮಾತನಾಡಿ, ಸೊಸೈಟಿ ಹಾಗೂ ಕಾಲೇಜ್‌ನ ಬೆಳವಣಿಗೆಗೆ ಕೆ.ಕೆ. ವೇಣುಗೋಪಾಲ ಅವರ ಕೊಡುಗೆ ಅಪಾರ ಎಂದರು. ಡಿಸಿಪಿ ಡಾ. ವಿಕ್ರಂ ಆಮಟೆ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗದೆ ಇತರ ಚಟುವಟಿಕೆಗಳಿಂದ ಜ್ಞಾನ ಸಂಪಾದಿಸಬೇಕು. ವಿದ್ಯಾರ್ಥಿಗಳು ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳೊಂದಿಗೂ ತರಬೇತಿ ಪಡೆಯಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಹಾಗೂ ಜಿಲ್ಲಾ ನ್ಯಾಯಾಲಯದ ಕಲಾಪಗಳನ್ನು ನೋಡಿ ಬಹಳಷ್ಟು ಕಲಿಯಬಹುದು ಎಂದು ತಿಳಿಸಿದರು.

    ಸ್ಪರ್ಧೆಯ ಸಂಚಾಲಕಿ ಅಶ್ವಿನಿ ಪರಬ ಮಾತನಾಡಿ, ಸ್ಪರ್ಧೆಯು ಆ. 29ರ ವರೆಗೆ ನಡೆಯಲಿದ್ದು, ದೇಶದ ಐದು ರಾಜ್ಯಗಳಿಂದ ಕಾನೂನು ವಿದ್ಯಾರ್ಥಿಗಳ 12 ತಂಡ ಭಾಗವಹಿಸಿವೆ. ಈ ವರ್ಷ ಕರೊನಾ ಕಾರಣದಿಂದಾಗಿ ಆನ್‌ಲೈನ್ ಮೂಲಕ ಆಯೋಜಿಸಲಾಗಿದೆ. 30 ವಕೀಲರು ಹಾಗೂ ಕಾನೂನು ಪ್ರಾಧ್ಯಾಪಕರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ವಿವಿಧ ವಿಭಾಗಗಳಲ್ಲಿ 80 ಸಾವಿರ ರೂ. ಮೊತ್ತವನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾನೂನು ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ
    ಎಸ್.ವಿ. ಗಣಾಚಾರಿ, ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಭಾಷೆ ಸುಧಾರಿಸಿಕೊಳ್ಳಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts