More

    ಕಲೆ, ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ಶಾಸಕ ಜಿ.ಟಿ.ದೇವೇಗೌಡ

    ಮೈಸೂರು: ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮುದಾಯ ಅವಿಸ್ಮರಣೀಯ ಕೊಡುಗೆ ನೀಡಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

    ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಜಯಂತೋತ್ಸವ ಸಮಿತಿ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರು ನಿತ್ಯ ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರು ಕಲೆಯ ಜೀವಂತಿಕೆಯನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ ಎಂದರು.

    ಶಾಸಕ ಎಲ್.ನಾಗೇಂದ್ರ ಮಾತನಾಡಿ, ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ. ಅನೇಕ ಗುಡಿ, ದೇವಸ್ಥಾನ, ಪ್ರಾಚೀನ ಸ್ಮಾರಕಗಳ ನಿರ್ಮಾಣದಿಂದಾಗಿ ಸಮುದಾಯದ ಕಲೆ, ಸಂಸ್ಕೃತಿ ಪ್ರಸಿದ್ಧಿ ಪಡೆದಿವೆ. ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಈ ಸಮಾಜದ ಏಳಿಗೆಗೋಸ್ಕರ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.

    ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಮಾತನಾಡಿ, ಭಾರತೀಯ ಸಂಸ್ಕೃತಿ ಕಾಪಾಡುವಲ್ಲಿ ವಿಶ್ವಕರ್ಮರು ವಹಿಸಿರುವ ಪಾತ್ರ ಬಹಳ ದೊಡ್ಡದು. ಹಿಂದು ಸಂಪ್ರದಾಯದ ದೇವಾಲಯಗಳಲ್ಲಿ ಮೂರ್ತಿ ಪೂಜೆಗೆ ಆದ್ಯತೆ ಇದೆ. ಮೂರ್ತಿ ಪೂಜೆ ಇಲ್ಲದಿದ್ದರೆ ನಮ್ಮ ಸಂಸ್ಕೃತಿ ಚಹರೆ ಗುರುತು ಅಳಿಸಿ ಹೋಗುತ್ತದೆ ಎಂದರು.

    ರಾಜ ಮಹಾರಾಜರ, ಜನನಾಯಕರ ತದ್ರೂಪಗಳನ್ನು ಕೆತ್ತನೆ ಮಾಡಿ ಅವರ ನೆನಪು ಸಾರ್ವಜನಿಕರಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತೆ ಮಾಡಿದವರು ವಿಶ್ವಕರ್ಮರು. ಸಮಾಜದ ಭಾಗವಾಗಿ ಹೋಗಿರುವಂತಹ ಒಂದು ಜನ ಸಮುದಾಯ ಎಂದು ತಿಳಿಸಿದರು.

    ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಪಾಲಿಕೆ ಸದಸ್ಯೆ ರಮಣಿ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ರಘು ಕೌಟಿಲ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ವಿಶ್ವಕರ್ಮ ಸಮಾಜದ ಮುಖಂಡರಾದ ರಾಮಲಿಂಗಾಚಾರ್, ಶಾಂತಮ್ಮ, ನಾಗಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts