More

    ಕಲಾಗ್ರಾಮ ಸ್ಥಾಪನೆ ಸನ್ನಿಹಿತ

    ಧಾರವಾಡ: ಗಾನ ವಿದುಷಿ ಗಂಗೂಬಾಯಿ ಹಾನಗಲ್, ಪಂ. ಮಲ್ಲಿಕಾರ್ಜುನ ಮನ್ಸೂರ, ಪಂ. ಭೀಮಸೇನ ಜೋಶಿ, ಪಂ. ಬಸವರಾಜ ರಾಜಗುರು ಅವರಂಥ ಸಂಗೀತ ದಿಗ್ಗಜರ ನಾಡು ಧಾರವಾಡ. ಅಪ್ರತಿಮ ಸಂಗೀತದಿಂದ ಧಾರವಾಡವನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದ ಖ್ಯಾತಿ ಈ ಮಹನೀಯರಿಗೆ ಸಲ್ಲುತ್ತದೆ. ಸಂಗೀತಜ್ಞರ ಹೆಸರನ್ನು ಚಿರಸ್ಥಾಯಿಯಾಗಿಸಲು ಹಲವು ವರ್ಷಗಳಿಂದ ಕಲಾಗ್ರಾಮ ಸ್ಥಾಪನೆಯ ಬೇಡಿಕೆ ಇತ್ತು. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸ್ಪಂದಿಸಿದ್ದು, ಕಲಾಗ್ರಾಮ ಸ್ಥಾಪನೆಗೆ ಕಾಲ ಸನ್ನಿಹಿತವಾಗಿದೆ.

    ಆರಂಭದಲ್ಲಿ ಪಂ. ಬಸವರಾಜ ರಾಜಗುರು ಟ್ರಸ್ಟ್​ನಿಂದ ‘ರಾಜಗುರು ಕಲಾಗ್ರಾಮ’ ನಿರ್ಮಾಣ ಕುರಿತು ಬೇಡಿಕೆ ಕೇಳಿಬಂದಿತ್ತು. ಟ್ರಸ್ಟ್ ಸದಸ್ಯ ನಿಜಗುಣ ರಾಜಗುರು ಸೇರಿ ಹಲವರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. 2018ರಲ್ಲಿ ಸಂಸದ ಪ್ರಲ್ಹಾದ ಜೋಶಿ ಮೂಲಕ ಕೇಂದ್ರ ಸಂಸ್ಕೃತಿ ಸಚಿವ ಮಹೇಶ ಶರ್ಮಾ ಅವರನ್ನೂ ಭೇಟಿ ಮಾಡಿದ್ದರು. ಸಚಿವರು ರಾಜ್ಯ ಸರ್ಕಾರದಿಂದ ಜಾಗ ಮಂಜೂರು ಮಾಡಿಸುವಂತೆ ಸೂಚಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಯೋಜನೆ ನನೆಗುದಿಗೆ ಬಿದ್ದಿತ್ತು.

    ಸಿ.ಟಿ. ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗ ಯೋಜನೆಗೆ ಮರುಜೀವ ಬಂದಿತ್ತು. ಅವರು ಜಿಲ್ಲಾಡಳಿದಿಂದ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಮುತುವರ್ಜಿ ವಹಿಸಿ, ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು.

    ಜಿಲ್ಲಾಡಳಿತವು ಕರ್ನಾಟಕ ಕಾಲೇಜು ಬಳಿಯ ನೈಋತ್ಯ ರೈಲ್ವೆ ವಿಭಾಗೀಯ ಇಂಜಿನಿಯರಿಂಗ್ ತರಬೇತಿ ಕೇಂದ್ರಕ್ಕೆ ಸೇರಿದ ಜಾಗವನ್ನು ಗುರುತಿಸಿದೆ. ಅಂದಾಜು 40 ಎಕರೆ ವಿಸ್ತೀರ್ಣದ ಜಾಗದಲ್ಲೀಗ ಬಹುಶಿಕ್ಷಣ ವಿಭಾಗೀಯ ತರಬೇತಿ ಕೇಂದ್ರವಿದೆ. ಬ್ರಿಟಿಷ್ ಆಡಳಿತಾವಧಿಯಲ್ಲಿ ರೈಲ್ವೆ ಜನರಲ್ ಮ್ಯಾನೇಜರ್ ನಿವಾಸವಾಗಿದ್ದ ಕೇಂದ್ರದಲ್ಲಿ ಸದ್ಯ ಪಾಯಿಂಟ್ಸ್​ಮನ್, ಗಾರ್ಡ್ಸ್ ಹಾಗೂ ಟಿಸಿಗಳಿಗೆ ತರಬೇತಿ ನೀಡಲಾಗುತ್ತಿದೆ. ಕಲಾಗ್ರಾಮ ನಿರ್ವಣಕ್ಕೆ ಸೂಕ್ತ ಎಂದು ಜಿಲ್ಲಾಡಳಿತ ಈ ಜಾಗವನ್ನು ಗುರುತಿಸಿದ್ದು, ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅಂದಾಜು 13 ಎಕರೆ ವಿಸ್ತಾರದ ಕಲಾಗ್ರಾಮ ಸ್ಥಾಪನೆಗೆ ಅಂತೂ ಕಾಲ ಸನ್ನಿಹಿತವಾಗಿದೆ. ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಲಿರುವ ಮಹತ್ವಾಕಾಂಕ್ಷಿ ಯೋಜನೆ ಕೈಗೂಡಿದರೆ ಧಾರವಾಡದ ಕಲೆ- ಸಂಗೀತದ ಕಂಪು ಮತ್ತಷ್ಟು ಪಸರಿಸಲಿದೆ.

    ಏನಿದು ಕಲಾಗ್ರಾಮ?: ಧಾರವಾಡದ ಕೆಲ ಸಂಗೀತ ದಿಗ್ಗಜರ ಹೆಸರಲ್ಲಿ ಈಗಾಗಲೇ ಟ್ರಸ್ಟ್​ಗಳಿವೆ. ರಾಜಗುರು, ಭೀಮಸೇನ ಜೋಶಿ, ಕುಮಾರ ಗಂಧರ್ವ, ಸವಾಯಿ ಗಂಧರ್ವ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ ಸೇರಿ ಹಲವು ಮಹನೀಯರಿಗೆ ಪ್ರತ್ಯೇಕ ಕಲಾಗ್ರಾಮ ನಿರ್ವಿುಸದೆ, ಒಂದೇ ಸೂರಿನಡಿ ಇವೆಲ್ಲವನ್ನೂ ತರುವ ಉದ್ದೇಶವಿದೆ. ಸಂಗೀತ ಪರಿಕರಗಳು, ಅಪರೂಪದ ಛಾಯಾಚಿತ್ರಗಳನ್ನೊಳಗೊಂಡ ಮ್ಯೂಸಿಯಂ ಸ್ಥಾಪನೆಯಾಗಲಿದೆ. ಅದರಲ್ಲಿ ಸಂಗೀತ, ಕಲೆ, ನೃತ್ಯ, ಚಿತ್ರಕಲಾ ಕಾರ್ಯಕ್ರಮ, ತರಬೇತಿಗಳನ್ನು ಆಯೋಜಿಸುವ ಯೋಜನೆ ಇದೆ.

    ಜನಪ್ರತಿನಿಧಿಗಳ ಮುತುವರ್ಜಿ: ಕಲಾಗ್ರಾಮ ಸ್ಥಾಪನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಮುತುವರ್ಜಿ ವಹಿಸಿದ್ದಾರೆ. ಶಾಸಕ ಬೆಲ್ಲದ ಈಗಾಗಲೇ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿದ್ದಾರೆ. 13 ಎಕರೆ ಜಾಗ ಪಡೆದು, ಪರ್ಯಾಯವಾಗಿ ಕಲಘಟಗಿಯಲ್ಲಿ ಜಾಗವನ್ನು ಬಿಟ್ಟು ಕೊಡುವ ಪ್ರಸ್ತಾವ ಇಟ್ಟಿದ್ದಾರೆ. ಶೀಘ್ರವೇ ಮತ್ತೊಂದು ಸುತ್ತಿನ ಸಭೆ ನಡೆಸುವ ಸಾಧ್ಯತೆ ಇದೆ.

    ಕಲಾಗ್ರಾಮ ಸ್ಥಾಪನೆಗೆ ರೈಲ್ವೆ ಜಾಗ ಗುರುತಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದಿಂದ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರ್ಯಾಯವಾಗಿ ಕಲಘಟಗಿ ತಾಲೂಕಿನಲ್ಲಿ ಜಾಗ ಕೊಡುವುದಾಗಿ ತಿಳಿಸಲಾಗಿದೆ. ರೈಲ್ವೆ ಜಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
    | ಅರವಿಂದ ಬೆಲ್ಲದ ಶಾಸಕ

    ಕಲಾಗ್ರಾಮ ಸ್ಥಾಪನೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಉತ್ತಮವಾಗಿ ಸ್ಪಂದಿಸಿರುವುದು ಸಂತೋಷದ ವಿಷಯ. ಕಲಾಗ್ರಾಮ ಸ್ಥಾಪನೆಯ ಮೂಲಕ ಜಿಲ್ಲೆಯ ಸಂಗೀತ ದಿಗ್ಗಜರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಇನ್ನಷ್ಟು ಇಂಬು ಸಿಗಲಿದೆ.
    | ಶಂಕರ ಕುಂಬಿ, ಡಾ. ಮಲ್ಲಿಕಾರ್ಜುನ ಮನ್ಸೂರ ಟ್ರಸ್ಟ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts