More

    ಕರ ಸ್ವೀಕಾರ, ಅಭಿವೃದ್ಧಿಗೆ ನಕಾರ

    ಗದಗ: ನಗರದ ವಾರ್ಡ್ ನಂ. 6ರ ವ್ಯಾಪ್ತಿಗೊಳಪಡುವ ಬೆಟಗೇರಿಯ ಕಾತರಕಿ ಲೇಔಟ್ ನಿರ್ವಣಗೊಂಡು 18 ವರ್ಷಗಳಾದರೂ ಮೂಲಸೌಕರ್ಯಗಳಿಲ್ಲದೆ ನಿವಾಸಿಗಳು ಪರದಾಡುವಂತಾಗಿದೆ.

    ಕಾತರಕಿ ಲೇಔಟ್ 2002ರಲ್ಲಿ ನಿರ್ವಣಗೊಂಡಿದ್ದು, 100ಕ್ಕೂ ಹೆಚ್ಚು ನಿವೇಶನಗಳನ್ನು ರಚಿಸಲಾಗಿದೆ. ಈ ಪೈಕಿ 75 ನಿವೇಶನಗಳಲ್ಲಿ ಮನೆಗಳು ತಲೆಎತ್ತಿವೆ. ಆದರೆ, ಈ ಲೇಔಟ್​ನಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು ಯೋಜನೆಯ ಪೈಪ್​ಲೈನ್ ಹಾಕಿಲ್ಲ. ಮೂಲಸೌಲಭ್ಯ ಒದಗಿಸಲು ನಗರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬುದು ನಿವಾಸಿಗಳ ಆರೋಪ. ನಗರಸಭೆಯಿಂದ ಅನುಮತಿ ಪಡೆದು ಲೇಔಟ್ ನಿರ್ವಿುಸಿಲ್ಲ. ಹೀಗಾಗಿ ಅನಧಿಕೃತ ಲೇಔಟ್​ನಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುವುದು ಹೇಗೆ ಎಂದು ನಗರಸಭೆ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.

    ಲೇಔಟ್ ಅನಧಿಕೃತವಾದರೆ ನಿವೇಶನದ ಕಂಪ್ಯೂಟರ್ ಉತಾರ ನೀಡಿದವರ್ಯಾರು? ಮನೆ ಕರ, ಅಭಿವೃದ್ಧಿ ಕರವನ್ನು ನಿಯಮಿತವಾಗಿ ನಗರಸಭೆಗೆ ಪಾವತಿಸುತ್ತಿದ್ದೇವೆ. ಲೇಔಟ್​ನಲ್ಲಿ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ವಿದ್ಯುತ್ ಬಿಲ್ ಸಹ ಪಾವತಿಸುತ್ತೇವೆ. ಆಧಾರ್ ಕಾರ್ಡಲ್ಲೂ ಇದೇ ವಿಳಾಸ ನೀಡಿದ್ದೇವೆ. ಜಿಲ್ಲಾಧಿಕಾರಿ ಈ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಮಾಡಿದ್ದಾರೆ. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಮಾಡಲು ಅನುಮತಿ ನೀಡಿದೆ. ಹೀಗಿದ್ದರೂ ಇಲ್ಲೇಕೆ ಮೂಲಸೌಲಭ್ಯ ಕಲ್ಪಿಸಿಲ್ಲ ಎಂದು ಲೇಔಟ್ ನಿವಾಸಿ, ನಿವೃತ್ತ ಎಎಸ್​ಐ ಎಸ್.ವಿ. ಜುಟ್ಲದ ಪ್ರಶ್ನಿಸುತ್ತಾರೆ.

    ನಿವೇಶನದ ಮಾಲೀಕರೊಂದಿಗೆ ನಗರಸಭೆ ಅಧಿಕಾರಿಗಳು ಶಾಮೀಲಾಗಿ ಕಾತರಕಿ ಲೇಔಟ್ ನಿವಾಸಿಗಳಿಗೆ ವಂಚನೆ ಮಾಡುತ್ತಿದ್ದಾರೆ. ನಗರಸಭೆಗೆ ಕರ ಪಾವತಿಸಿದರೂ ಸೌಲಭ್ಯಗಳನ್ನೇಕೆ ನೀಡುತ್ತಿಲ್ಲ? ನಗರಸಭೆ ಪೌರಾಯುಕ್ತ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ.

    ಕಾತರಕಿ ಲೇಔಟ್ ಮಾಲೀಕರಿಂದ ನಗರಸಭೆಗೆ ಅಭಿವೃದ್ಧಿ ಹಣವನ್ನು ಪಾವತಿಸಲು ತಿಳಿಸಿ ಎಂದು ನಗರಸಭೆ ಇಂಜಿನಿಯರ್ ಎಲ್.ಜಿ. ಪತ್ತಾರ ಹೇಳುತ್ತಾರೆ. ಲೇಔಟ್ ಅನಧಿಕೃತವಾಗಿದ್ದರೆ ನಮ್ಮಿಂದ ಕರ ತುಂಬಿಸಿಕೊಂಡಿದ್ದೇಕೆ? ಕಟ್ಟಡ ಪರವಾನಗಿ ಯಾವ ಆಧಾರದ ಮೇಲೆ ನೀಡಲಾಯಿತು ಎಂದು ಪ್ರಶ್ನಿಸಿದರೆ ಅವರಲ್ಲಿ ಉತ್ತರವಿಲ್ಲ. ನಗರಸಭೆಯಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಜಿಲ್ಲಾಧಿಕಾರಿ ಈ ಸಮಸ್ಯೆ ಬಗೆಹರಿಸಿ ಪುಣ್ಯಕಟ್ಟಿಕೊಳ್ಳಬೇಕು.
    | ಎಸ್.ವಿ. ಜುಟ್ಲದ, ನಿವೃತ್ತ ಎಎಸ್​ಐ, ಕಾತರಕಿ ಲೇಔಟ್ ನಿವಾಸಿ

    ನಗರಸಭೆಯಲ್ಲಿಲ್ಲ ಯಾವುದೇ ದಾಖಲೆ?: ಬೆಟಗೇರಿಯ ಕಾತರಕಿ ಲೇಔಟ್ ಬಗ್ಗೆ ನಗರಸಭೆಯಲ್ಲಿ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ ಅದೊಂದು ಅನಧಿಕೃತ ಲೇಔಟ್ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಅದೇ ಲೇಔಟ್ ನಿವಾಸಿಗಳಿಂದ ಕರ ವಸೂಲಿ ಮಾಡಲಾಗುತ್ತಿದೆ. ಅಲ್ಲಿ ಮನೆ ಕಟ್ಟಲು ಕಟ್ಟಡ ಪರವಾನಗಿ ನೀಡಿದ್ದೇಕೆ? ಮತ್ತು ಹೇಗೆ ? ಎಂದು ಪ್ರಶ್ನಿಸಿದರೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಹೀಗಾಗಿ ಕಾತರಕಿ ಲೇಔಟ್ ವಿಷಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ನಿವಾಸಿಗಳ ಆರೋಪಕ್ಕೆ ಅಧಿಕಾರಿಗಳು ಜಾರಿಕೊಳ್ಳುವ ವರ್ತನೆ ಪುಷ್ಟಿ ನೀಡುತ್ತದೆ.

    ಬೆಟಗೇರಿಯ ಕಾತರಕಿ ಲೇಔಟ್ ಬಗ್ಗೆ ನಗರಸಭೆಯಲ್ಲಿ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ ಅದೊಂದು ಅನಧಿಕೃತ ಲೇಔಟ್. ಇದರಿಂದಾಗಿ ಅಲ್ಲಿ ಯಾವುದೇ ಮೂಲ ಸೌಲಭ್ಯ ನೀಡಿಲ್ಲ.
    | ಎಲ್.ಜಿ. ಪತ್ತಾರ, ಕಾರ್ಯಪಾಲಕ ಇಂಜಿನಿಯರ್ ಗದಗ-ಬೆಟಗೇರಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts