More

    ಕರೊನಾ ಜತೆಗೆ ಚಿಕೂನ್​ಗುನ್ಯಾ ಕಾಟ

    ಧಾರವಾಡ: ಕರೊನಾ 2ನೇ ಅಲೆ ಹಾವಳಿಯಿಂದ ಎಲ್ಲೆಡೆ ಜನ ತತ್ತರಿಸುತ್ತಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಚಿಕೂನ್​ಗುನ್ಯಾ ದಾಂಗುಡಿ ಇಟ್ಟಿದೆ. ಕೃಷಿ, ಕೂಲಿಕಾರರು, ಕಟ್ಟಡ ಕಾರ್ವಿುಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಎರಡೂ ರೋಗಗಳ ಹಾವಳಿಯಿಂದ ಆರ್ಥಿಕವಾಗಿ ಹಾಗೂ ದೈಹಿಕವಾಗಿ ತತ್ತರಿಸಿ ಹೋಗಿದ್ದಾರೆ.

    ಧಾರವಾಡದಿಂದ ಅಂದಾಜು 8 ಕಿಲೋ ಮೀಟರ್ ಅಂತರದಲ್ಲಿರುವ ಈ ಗ್ರಾಮದಲ್ಲಿ ಅಂದಾಜು 3,000 ಜನಸಂಖ್ಯೆ ಇದೆ. ಏಪ್ರಿಲ್​ನಿಂದ ಈವರೆಗೆ ನೂರಕ್ಕೂ ಹೆಚ್ಚು ಜನ ಚಿಕೂನ್​ಗುನ್ಯಾದಿಂದ ಬಾಧಿತರಾಗಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಪ್ರತಿ ಮನೆಯಲ್ಲಿ ಒಬ್ಬರಾದರೂ ಇದರಿಂದ ತೊಂದರೆ ಅನುಭವಿಸಿದ್ದಾರೆ. ಕೆಲ ಕುಟುಂಬಗಳಲ್ಲಿ 3-4 ಜನ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಲಾಕ್​ಡೌನ್​ನಿಂದ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿವೆ. ಇದರಿಂದ ಗ್ರಾಮದ ಬಹುತೇಕರಿಗೆ ದುಡಿಮೆ ಇಲ್ಲದಂತಾಗಿದೆ. ಈ ನಡುವೆ ಆಸ್ಪತ್ರೆಗೆ ಹಣ ಖರ್ಚು ಮಾಡುವಂತಾಗಿರುವುದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ಲಕಮಾಪುರ ಗ್ರಾಮದಲ್ಲಿ ಖಾಸಗಿ ವೈದ್ಯರಿಲ್ಲ. ಹೀಗಾಗಿ, ಜನ ಸಮೀಪದ ಉಪ್ಪಿನಬೆಟಗೇರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಉಳ್ಳವರು ಧಾರವಾಡದ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಯಾದವಾಡಕ್ಕೂ ಬಾಧಿಸಿತ್ತು: ಲಕಮಾಪುರದಿಂದ 3 ಕಿಲೋ ಮೀಟರ್ ಅಂತರದಲ್ಲಿರುವ ಯಾದವಾಡ ಗ್ರಾಮದಲ್ಲೂ ಕಳೆದ ವರ್ಷ ಚಿಕೂನ್​ಗುನ್ಯಾ ಬಾಧೆ ವಿಪರೀತವಾಗಿತ್ತು. 3-4 ತಿಂಗಳು ಗ್ರಾಮಸ್ಥರು ತತ್ತರಿಸಿದ್ದರು. ಸೊಳ್ಳೆ ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಫಾಗಿಂಗ್ ಮಾಡಿಸಲಾಗಿತ್ತು.

    ಗ್ರಾಮ ಪಂಚಾಯಿತಿಯಿಂದ ಪರಿಹಾರ ಕ್ರಮ: ಯಾದವಾಡ ಗ್ರಾಮ ಪಂಚಾಯಿತಿಯಿಂದ ಲಕಮಾಪುರ ಗ್ರಾಮದಲ್ಲಿ ಫಾಗಿಂಗ್ ಮಾಡಿಸಲಾಗಿದೆ. ಗಟಾರ್​ಗಳನ್ನು ಸ್ವಚ್ಛಗೊಳಿಸಲಾಗಿದೆ. ಹಲವು ದಿನಗಳಿಂದ ಶೇಖರಿಸಿರುವ ನೀರನ್ನು ಚೆಲ್ಲಿ ಹೊಸ ನೀರು ಶೇಖರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತರ ನೆರವಿನಿಂದ ಲಾರ್ವಾ ಸಮೀಕ್ಷೆ ಮಾಡಿಸಲಾಗಿದೆ. ಗ್ರಾಮದ ರಸ್ತೆಗಳಲ್ಲಿ ನೀರು ನಿಲ್ಲದಂತೆ ಮತ್ತು ಪೋಲಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

    ಗ್ರಾಮದಲ್ಲಿ ಕರೊನಾ ಹಾವಳಿ ಇಲ್ಲ. ಕೋವಿಡ್ 2ನೇ ಅಲೆ ಆರಂಭವಾದಾಗಿನಿಂದ ಈವರೆಗೆ ಗ್ರಾಮದ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಚಿಕೂನ್​ಗುನ್ಯಾ ಬಾಧೆ ದೂರವಾದರೆ ಸಾಕು ಎನ್ನುತ್ತಿದ್ದಾರೆ ಗ್ರಾಮಸ್ಥರು.

    ಲಕ್ಷಣಗಳು: ಚಿಕೂನ್​ಗುನ್ಯಾ ಸಾಮಾನ್ಯವಾಗಿ ಮುಂಗಾರು ಮಳೆಯ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಈಡೀಸ್ ಇಜಿಪ್ಟಿ ಮತ್ತು ಈಡೀಸ್ ಆಲ್ಬೋಪಿಕ್ಟಸ್ ಸೊಳ್ಳೆಗಳು ವೈರಸನ್ನು ಹರಡುತ್ತವೆ. ಬಾಧಿತರನ್ನು ಕಚ್ಚುವ ಸೊಳ್ಳೆಗಳು ಮತ್ತೊಬ್ಬರಿಗೆ ಕಚ್ಚಿ ರೋಗವನ್ನು ಹರಡುತ್ತವೆ. ಚಳಿ ಜ್ವರ, ತಲೆನೋವು, ಕೀಲು ನೋವು, ಸ್ನಾಯು ನೋವು, ವಾಕರಿಕೆ, ಆಯಾಸ, ನಾಲಿಗೆ ಕಹಿಯಾಗುವುದು, ದದ್ದು (ರ್ಯಾಶ್)ಗಳನ್ನು ಉಂಟು ಮಾಡುತ್ತದೆ.

    ನಾನು ಗೌಂಡಿ ಕೆಲಸ ಮಾಡ್ತೀನಿ. ಮನ್ಯಾಗ ಮೂರು ಮಂದಿಗ ಚಿಕೂನ್​ಗುನ್ಯಾ ಆಗೈತ್ರಿ. ಒಂದ್ ವಾರ ದುಡುದ್ರ ಬರೋ ಪಗಾರನ್ನ ದವಾಖಾನಿಗೆ ಖರ್ಚ ಮಾಡುವಂಗಾಗೈತಿ. ಗುಂಗಾಡ ಕಂಟ್ರೋಲ್​ಗ ಪಂಚಾಯ್ತಿಯವ್ರು ಏನಾದ್ರೂ ಮಾಡಬೇಕ್ರಿ.
    |ಕಾಶೀಮಸಾಬ, ಲಕಮಾಪುರ ಗ್ರಾಮಸ್ಥ

    ಲಕಮಾಪುರದಲ್ಲಿ ಚಿಕೂನ್​ಗುನ್ಯಾ ಕಾಯಿಲೆ ಕೊಂಚ ಕ್ಷೀಣಿಸಿದೆ. ಫಾಗಿಂಗ್ ಮಾಡಿಸಲಾಗಿದ್ದು, ನೀರು ಪೋಲಾಗುವುದನ್ನು ತಡೆಯಲು ಪಂಪ್ ಆಪರೇಟರ್​ಗೆ ಸೂಚಿಸಲಾಗಿದೆ. ಮತ್ತೊಮ್ಮೆ ಸಮೀಕ್ಷೆ ನಡೆಸಿ, ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು.
    | ಆರ್.ಜಿ. ಚಲವಾದಿ, ಯಾದವಾಡ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts