More

    ಕರೊನಾ ಕಷ್ಟದಲ್ಲಿ ಇರುವವರಿಗೆ ನೆರವಾಗಿ, ಹುಟ್ಟುಹಬ್ಬ ಆಚರಣೆಗೆ ಉಸ್ತುವಾರಿ ಸಚಿವ ಬ್ರೇಕ್, ಹಣ ವ್ಯಯ ಮಾಡದಂತೆ ಎಂಟಿಬಿ ಮನವಿ

    ಬೆಂಗಳೂರು ಗ್ರಾಮಾಂತರ: ಕರೊನಾ ಹಿನ್ನೆಲೆಯಲ್ಲಿ ಈ ಬಾರಿಯೂ ಹುಟ್ಟುಹಬ್ಬ ಆಚರಣೆ ಇರುವುದಿಲ್ಲ. ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾರ, ತುರಾಯಿಗಳೊಂದಿಗೆ ಶುಭಕೋರಲು ಬರಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿದರು.

    ಹೊಸಕೋಟೆಯಲ್ಲಿ ಎಂಟಿಬಿ ಚಾರಿಟಬಲ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಕರೊನಾ ಲಸಿಕಾ ಅಭಿಯಾನದಲ್ಲಿ ಮಾತನಾಡಿದರು.
    ನನ್ನ ಹುಟ್ಟುಹಬ್ಬಕ್ಕೆ ಶುಭಕೋರಲು ಹಣ ವ್ಯಯ ಮಾಡಬಾರದು. ಅದರ ಬದಲು ಕರೊನಾ ಸಂಕಷ್ಟದಲ್ಲಿರುವವರ ನೆರವಿಗೆ ಅದನ್ನು ವಿನಿಯೋಗಿಸಬೇಕು ಎಂದು ಮನವಿ ಮಾಡಿದರು.

    ಉಚಿತ ದಿನಸಿಕಿಟ್ ವಿತರಣೆ: ಪ್ರತಿವರ್ಷ ಬಡವರಿಗೆ ಸೀರೆ, ಉಪಾಹಾರ, ಸಿಹಿ ಹಂಚಲಾಗುತ್ತಿತ್ತು. ಆದರೆ ಈ ವರ್ಷ ಬಡವರಿಗೆ, ಕಾರ್ಮಿಕರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಲಸಿಕಾ ಅಭಿಯಾನ ಹಾಗೂ ದಿನಸಿಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಸ್ತುವಾರಿ ಸಚಿವರು ಹೇಳಿದರು.

    3ನೇ ಅಲೆ ಆಹ್ವಾನಿಸಬೇಡಿ: ಕರೊನಾ 2ನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. 3ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಮೂರನೇ ಅಲೆಗೆ ಆಹ್ವಾನ ನೀಡಬಾರದು. ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪಿಡುಗನ್ನು ಹಿಮ್ಮೆಟ್ಟಿಸಬೇಕು ಎಂದು ಎಂಟಿಬಿ ನಾಗರಾಜ್ ಕರೆ ನೀಡಿದರು.

    ಸಾಮಾಜಿಕ ಕಾರ್ಯಕ್ರಮ: ಜಿಪಂ ಮಾಜಿ ಸದಸ್ಯ ಎನ್.ನಾಗರಾಜ್ ಮಾತನಾಡಿ, ಹಿಂದಿನಿಂದಲೂ ಎಂಟಿಬಿ ಅವರ ಹುಟ್ಟುಹಬ್ಬದ ಪ್ರಯುಕ್ತ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಅದರಂತೆ ಈ ಬಾರಿಯೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರ ಸಂಕಷ್ಟಕ್ಕೆ ನೆರವು ನೀಡಲು ನಿರ್ಧರಿಸಲಾಗಿದೆ ಎಂದರು. ಪ್ರತಿಯೊಬ್ಬರೂ ಮಾಸ್ಕ್ ಧರಿಸಲೇಬೇಕು, ಆಗಾಗ ಕೈಗಳನ್ನು ಸ್ಯಾನಿಟೈಸರ್ ಹಾಕಿಕೊಂಡು ಸ್ವಚ್ಛಗೊಳಿಸಿಕೊಳ್ಳಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಲೇಬೇಕು. ಈ ಮೂಲಕ ಕರೊನಾ ಸರಪಳಿಗೆ ಬ್ರೇಕ್ ಹಾಕಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts