More

    ಕರೊನಾ ಅಂಕಿಸಂಖ್ಯೆ ಬಗ್ಗೆ ಪ್ರತಿಪಕ್ಷ ನಾಯಕರಿಗೆ ಅನುಮಾನ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ರಾಜ್ಯದ ಕರೊನಾ ಸೋಂಕಿತರು ಮತ್ತು ಸಾವು ನೋವಿನ ಅಂಕಿ-ಸಂಖ್ಯೆ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಜಟಾಪಟಿ ನಡೆದಿದೆ.
    ಕರೊನಾ ನಿಯಂತ್ರಣದಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಡಲು ಮುಖ್ಯಮಂತ್ರಿಯವರು ಸಾವು ಮತ್ತು ಸೋಂಕಿನ ಮಾಹಿತಿಯನ್ನು ಬಚ್ಚಿಡುತ್ತಿದ್ದಾರೆ ಎಂಬ ಸಾರ್ವಜನಿಕರಲ್ಲಿನ ಅನುಮಾನಕ್ಕೆ
    ಕೋಲಾರ ಜಿಲ್ಲೆಯ ಸಾವುಗಳ ಬಗ್ಗೆ ಆರೋಗ್ಯ ಇಲಾಖೆಯ ಸುಳ್ಳುಗಳೇ ಪುರಾವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
    ಈ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕರೊನಾ ನಿಯಂತ್ರಣದಲ್ಲಿ ಸರ್ಕಾರ ಅತ್ಯಂತ ದಕ್ಷತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು ಯಾವುದೇ ವಿಷಯವನ್ನೂ ಮರೆಮಾಚುವ ಉದ್ದೇಶವೂ ಇಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲ ಎಂದು ಹೇಳಿದ್ದಾರೆ.
    ಕೋಲಾರದ ಒಂದು ಉದಾಹರಣೆ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಸೆ.19ರಂದು 4 ಮತ್ತು ಸೆ.20ರಂದು 1 ಸಾವು ಸಂಭವಿಸಿದೆ ಎಂದು ಕೋಲಾರದ ಜಾಲಪ್ಪ ಆಸ್ಪತ್ರೆ ವರದಿ ಮಾಡಿದೆ. ಆದರೆ ಆರೋಗ್ಯ ಇಲಾಖೆ ಆ ದಿನಗಳಲ್ಲಿ ಕರೊನಾ ಸಾವು ಸಂಭವಿಸಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ಇದು ಸರ್ಕಾರದ ಕರೊನಾ ನಿಯಂತ್ರಣದ ಪರಿ ಎಂದು ಯಡಿಯೂರಪ್ಪರನ್ನು ಕುಟುಕಿದ್ದಾರೆ.
    ಜತೆಗೆ, ಕರೊನಾ ಮಾಹಿತಿ ಕೇಳಿ ಪತ್ರದ ಮೇಲೆ ಪತ್ರ ಬರೆದರೂ ಸಿಎಂ ಮತ್ತು ಸಚಿವರು ಯಾಕೆ ಉತ್ತರಿಸುತ್ತಿಲ್ಲ ಎನ್ನುವುದನ್ನು ಕೋಲಾರದ ಸಾವಿನ ವರದಿಯಲ್ಲಿನ ಸುಳ್ಳುಗಳಿಂದ ಅರ್ಥ ಮಾಡಿಕೊಳ್ಳಬಹುದು.ಸೋಂಕು-ಸಾವಿನ ಸಂಖ್ಯೆಯನ್ನು ಬಚ್ಚಿಟ್ಟರೂ, ನೊಂದ ಕುಟುಂಬಗಳ ಶಾಪದಿಂದ ನೀವು ಪಾರಾಗಲಾರಿರಿ ಎಂದು ತಿವಿದಿದ್ದಾರೆ.
    ಭ್ರಷ್ಟಾಚಾರದಿಂದಾಗಿ ಹದಗೆಟ್ಟಿರುವ ಹಣಕಾಸು ಸ್ಥಿತಿಯನ್ನು ನಿಯಂತ್ರಿಸಲಾಗದೆ ಅನಿರ್ಬಂಧಿತವಾಗಿ ಎಲ್ಲ ವ್ಯಾಪಾರ-ವಹಿವಾಟನ್ನು ತೆರೆದು ಕೂತಿದ್ದೀರಿ. ಈಗಲೂ ಎಚ್ಚೆತ್ತುಕೊಂಡು ಕೊರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳದೆ ಇದ್ದರೆ ಜನರ ಶಾಪದಿಂದ ಯಾವ ಹೈಕಮಾಂಡ್ ಕೂಡಾ ನಿಮ್ಮನ್ನು ರಕ್ಷಿಸಲಾರದು ಎಂದು ಹೇಳಿದ್ದಾರೆ.
    ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ಸುಧಾಕರ್, ಸೆಪ್ಟೆಂಬರ್ 19ರಂದು ಕೋಲಾರದ ಆರ್.ಎಲ್.ಜೆ ಆಸ್ಪತ್ರೆಯಲ್ಲಿ 3 ಸಾವು ಸಂಭವಿಸಿತ್ತು. ಆಸ್ಪತ್ರೆಯು ಮರಣದ ಕಾರಣದ ಬಗ್ಗೆ ನಿಗದಿತ ನಮುನೆಗಳಲ್ಲಿ ಮಾಹಿತಿ ನೀಡಲು ವಿಳಂಬವಾದ ಕಾರಣ ಅದನ್ನು ಸೆಪ್ಟೆಂಬರ್ 24 ರಂದು ವರದಿ ಮಾಡಲಾಗಿತ್ತು. ಸೆಪ್ಟೆಂಬರ್ 20ರಂದು ಸಂಭವಿಸಿದ 1 ಸಾವನ್ನು ಇದೇ ಕಾರಣಕ್ಕಾಗಿ ಸೆಪ್ಟೆಂಬರ್ 25ರಂದು ವರದಿ ಮಾಡಲಾಯ್ತು ಎಂದು ದಾಖಲೆ ಪ್ರಸ್ತುತಪಡಿಸಿದ್ದಾರೆ.
    ಕರೊನಾ ಸೋಂಕಿಗೆ ಸಂಬಂಧಪಟ್ಟ ಎಲ್ಲಾ ಅಂಕಿ-ಅಂಶಗಳನ್ನು ಪಾರದರ್ಶಕವಾಗಿ ಪ್ರಕಟಿಸುವಲ್ಲಿ ಕರ್ನಾಟಕ ಸರ್ಕಾರ ಇಡೀ ದೇಶದಲ್ಲೇ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಬೇರೆ ಬೇರೆ ರಾಜ್ಯದ ಕಾರ್ಯವೈಖರಿ ಹೋಲಿಕೆ ಮಾಡಿರುವ ವರದಿಯೊಂದಿಯೊಂದನು ತೋರಿಸಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಆ ವರದಿ ಪ್ರಕಾರ, ಕರ್ನಾಟಕ ಮಾತ್ರ ದಾಖಲೆ ಸಂಗ್ರಹ, ನಿರ್ವಹಣೆ ಮತ್ತು ಪಾರದರ್ಶಕತೆ ಸೇರಿ ಎಂಟು ವಿಚಾರದಲ್ಲಿ ಪರಿಪೂರ್ಣ ಕ್ರಮಕೈಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts