More

    ಕರೊನಾದಿಂದ ಕಾಮಗಾರಿ ನಿಧಾನ

    ಶಿರಸಿ: ನಗರ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಹಾಗೂ ಪ್ರಮುಖ ವೃತ್ತಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ನಡೆದಿದ್ದ ಮಾರ್ಕಿಂಗ್ ಕಾರ್ಯ ಕರೊನಾ ಕಾರಣಕ್ಕೆ ನಿಧಾನ ಗತಿಯಲ್ಲಿ ಸಾಗಿದೆ. ಇದರಿಂದಾಗಿ ಕಾಮಗಾರಿ ಅನುಷ್ಠಾನ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.

    ಇಲ್ಲಿನ ಯಲ್ಲಾಪುರ ನಾಕಾದಿಂದ ಐದು ರಸ್ತೆ ಸರ್ಕಲ್​ವರೆಗೆ ರಸ್ತೆ ವಿಸ್ತರಣೆ ಹಾಗೂ ಪ್ರಮುಖ ವೃತ್ತಗಳ ಅಭಿವೃದ್ಧಿ ಜತೆಗೆ ಐದು ರಸ್ತೆ ಸರ್ಕಲ್ ವಿಸ್ತರಣೆಗೆ ಎರಡು ಯೋಜನೆಯಡಿ ಪ್ರತ್ಯೇಕ ಕಾಮಗಾರಿಗಳಿಗೆ ಹಣ ಮಂಜೂರಾಗಿದೆ. ಪ್ರಸ್ತುತ ಪಿಡಬ್ಲು್ಯಡಿ ಇಲಾಖೆಯಿಂದ ವೃತ್ತಗಳ ಸುತ್ತ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಮಾರ್ಕಿಂಗ್ ಮಾಡುವ ಕಾರ್ಯ ಚಾಲನೆಯಲ್ಲಿತ್ತು. ಆದರೆ, ಕರೊನಾ ಕರ್ಪ್ಯೂ ಕಾರಣಕ್ಕೆ ಈ ಕಾರ್ಯಕ್ಕೆ ತಡೆ ಬಿದ್ದಿದೆ.

    23 ಕೋಟಿ ರೂ. ಯೋಜನೆ ವಿಳಂಬ: ಐದು ರಸ್ತೆ ಸರ್ಕಲ್, ಜೂ ಸರ್ಕಲ್, ರಾಘವೇಂದ್ರ ಸರ್ಕಲ್, ಅಶ್ವಿನಿ ಸರ್ಕಲ್, ಮಹಾಸತಿ ಸರ್ಕಲ್ ಮತ್ತು ಯಲ್ಲಾಪುರ ನಾಕಾ ಸರ್ಕಲ್​ಗಳನ್ನು ಈಗಿರುವುದಕ್ಕಿಂತ ಹೆಚ್ಚು ವಿಸ್ತರಿಸಲಾಗುತ್ತದೆ. ಪ್ರಸ್ತುತ 11 ಮೀಟರ್ ವ್ಯಾಸ ಹೊಂದಿರುವ ಸರ್ಕಲ್​ಗಳನ್ನು 18 ರಿಂದ 18.5 ಮೀ.ವರೆಗೆ ಹೆಚ್ಚಿಸಲಾಗುತ್ತದೆ. ಜತೆಗೆ, ಯಲ್ಲಾಪುರ ನಾಕಾದಿಂದ ಪಂಡಿತ ಸಾರ್ವಜನಿಕ ಆಸ್ಪತ್ರೆವರೆಗೆ ಹಾದು ಹೋಗುವ ಮುಖ್ಯರಸ್ತೆಯನ್ನು 22 ರಿಂದ 23 ಮೀ.ವರೆಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಪಂಡಿತ ಸಾರ್ವಜನಿಕ ಆಸ್ಪತ್ರೆ ಎದುರಿನಿಂದ ಮಹಾಸತಿ ವೃತ್ತದವರೆಗೆ 15 ಕೋಟಿ ರೂ. ವೆಚ್ಚದಲ್ಲಿ ವೃತ್ತಗಳ ಅಭಿವೃದ್ಧಿ ಹಾಗೂ ರಸ್ತೆ ವಿಸ್ತರಣೆ ಕಾಮಗಾರಿಗೆ 5.20 ಕೋಟಿ ರೂ. ಮಂಜೂರಾಗಿದೆ. ಇನ್ನೊಂದು ಯೋಜನೆಯಡಿ 3 ಕೋಟಿ ರೂ. ವೆಚ್ಚದಲ್ಲಿ ಐದು ರಸ್ತೆ ಸರ್ಕಲ್ ಅಭಿವೃದ್ಧಿಪಡಿಸುವ ಕೆಲಸ ಪ್ರಗತಿಯಲ್ಲಿದೆ. ವೃತ್ತದ ಸುತ್ತ 18.5 ಮೀ. ನಷ್ಟು ಸುತ್ತಳತೆ ವರೆಗೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ ಕರೊನಾ ಕಾರಣಕ್ಕೆ ಬಹುತೇಕ ಕಾರ್ಯಗಳು ನಿಧಾನಗತಿಯಲ್ಲಿ ಸಾಗಿದರೆ ಇನ್ನೂ ಕೆಲ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ. ಪ್ರಸ್ತುತ ಮಾರ್ಕಿಂಗ್ ಕಾರ್ಯ ಶೇ. 50ರಷ್ಟಾಗಿದ್ದು, ಇನ್ನುಳಿದ ಕಾರ್ಯ ಆದ ನಂತರವಷ್ಟೇ ಕಾಮಗಾರಿ ಅನುಷ್ಠಾನಕ್ಕೆ ಅವಕಾಶ ಆಗಲಿದೆ.

    ಕಾರ್ವಿುಕರ ತೊಂದರೆ: ಜನತಾ ಕರ್ಫ್ಯೂ ಕಾರಣ ಅನೇಕ ಕಾರ್ವಿುಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಿಂದ ಉದ್ದೇಶಿತ ಕಾರ್ಯಕ್ಕೆ ತೊಡಕಾಗುತ್ತಿದೆ. ಜತೆಗೆ, ಕಾರ್ವಿುಕರಿಗೆ ಸಂಚಾರಕ್ಕೂ ಸಮಸ್ಯೆ ಇದ್ದು, ಪಾಸ್ ವಿತರಿಸುವ ಕಾರ್ಯ ಆಗಬೇಕಿದೆ. ಕಾರ್ವಿುಕರು ಬಂದರೆ ಕರ್ಫ್ಯೂ ನಂತರ ಶೀಘ್ರದಲ್ಲಿ ಕಾರ್ಯ ಮುಗಿಸಲಾಗುವುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    ಹಲವಾರು ದಿನಗಳಿಂದ ರಸ್ತೆ ವಿಸ್ತರಣೆ ಸಂಬಂಧ ಮಾರ್ಕಿಂಗ್ ಮಾಡುವ ಕಾರ್ಯ ನಡೆದಿದೆ. ಇನ್ನೂ ಕೆಲ ಆಸ್ತಿ ಗುರುತಿಸಿ ಮಾರ್ಕಿಂಗ್ ಮಾಡಬೇಕಿದೆ. ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸುವ ಅಗತ್ಯವಿದೆ.
    | ಗಣೇಶ ಹೆಗಡೆ ಸ್ಥಳೀಯ ನಿವಾಸಿ

    ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಕಾರ್ವಿುಕರಿಗೆ ಪಾಸ್ ವಿತರಣೆ ಮಾಡುವ ಕಾರ್ಯ ಚಾಲನೆಯಲ್ಲಿದೆ. ಪ್ರಸ್ತುತ ಕೆಲವೆಡೆ ಮಾರ್ಕಿಂಗ್ ಕಾರ್ಯ ನಡೆದಿದ್ದು, ಕರ್ಫ್ಯೂ ಅವಧಿ ಮುಕ್ತಾಯದ ನಂತರ ವೇಗ ನೀಡಲಾಗುವುದು.
    | ಎಸ್. ಉಮೇಶ ಪಿಡಬ್ಲು್ಯಡಿ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts