More

    ಕರಡಿ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿ ದಾಳಿಯಿಂದ ಮುಖಕ್ಕೆ ತೀವ್ರ ಗಾಯವಾಗಿದ್ದ ಮುಂಡಗೋಡ ತಾಲೂಕಿನ ಕಾತೂರಿನ ಫಕೀರಪ್ಪ (40) ಅವರಿಗೆ ಇಲ್ಲಿಯ ಕಿಮ್ಸ್​ನಲ್ಲಿ ಸೆ. 12ರಂದು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 31ರಂದು ಫಕೀರಪ್ಪ ಅವರು ಕರಡಿ ದಾಳಿಗೆ ಒಳಗಾಗಿದ್ದರು. ಮುಖ ಮತ್ತು ಕಣ್ಣಿನ ಭಾಗದ ಮೂಳೆಯನ್ನು ಕರಡಿ ಕಿತ್ತು ಹಾಕಿತ್ತು. ರೆಟಿನಾ ಭಾಗ ಹಾಳಾಗಿರಲಿಲ್ಲ. 3 ಡಿ ಕಸ್ಟಮೈಜ್ಡ್ ಟೈಟೇನಿಯಂ ಇಂಪ್ಲಾಂಟ್ ಅಳವಡಿಸಿ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ಶಸ್ತ್ರ ಚಿಕಿತ್ಸೆ ನೆರವೇರಿಸಿದರೆ, ಮೊದಲಿನಂತೆ ಕಣ್ಣು ಕಾಣಿಸಲಿವೆ. ಡಾ. ಮಂಜುನಾಥ ವಿಜಾಪುರ, ಡಾ. ವಸಂತ ಕಟ್ಟೀಮನಿ, ಡಾ. ವಿವೇಕಾನಂದ ಜೀವಣಗಿ, ಡಾ. ಧಮೇಶ ಹಾಗೂ ಡಾ. ಸ್ಪೂರ್ತಿ ಶೆಟ್ಟಿ ಇತರರ ತಂಡ ಯಶಸ್ವಿ ಕಾರ್ಯ ನಡೆಸಿದೆ ಎಂದರು.

    ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಂಜುನಾಥ ವಿಜಾಪುರ ಮಾತನಾಡಿ, ಕರಡಿ ದಾಳಿಯಾಗಿದ್ದರಿಂದ ಕಣ್ಣಿನ ಕೆಳಭಾಗ ಸಂಪೂರ್ಣ ಹಾಳಾಗಿತ್ತು. ಕೆಳಗಡೆ ಎಲುಬು ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ. ಇಂಪ್ಲಾಂಟ್ ಅಳವಡಿಸುವುದು ಅಗತ್ಯವಿತ್ತು. ಕಣ್ಣು ಕೂಡ ಕಾಣಿಸುತ್ತಿರಲಿಲ್ಲ. ಈಗ ಕಾಣಿಸುತ್ತಿದೆ ಎಂದರು.

    ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ, ಡಾ. ವಸಂತ ಕಟ್ಟಿಮನಿ, ಡಾ. ಅನುರಾಧ ನಾಗನಗೌಡರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts