More

    ಕನ್ನಡ ಶಕ್ತಿಯ ಜಾಗೃತ ಬರಹಗಾರ

    ಚಿತ್ರದುರ್ಗ: ಕನ್ನಡವೇ ಬಹುದೊಡ್ಡ ಶಕ್ತಿ ಎಂಬ ಕುರಿತು ಜಾಗೃತಿ ಮೂಡಿಸಿದ ಬರಹಗಾರರಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಪ್ರಮುಖರು ಎಂದು ಸಾಹಿತಿ ಡಾ.ರಾಜಪ್ಪ ದಳವಾಯಿ ಹೇಳಿದರು.

    ತರಾಸು ರಂಗಮಂದಿರದಲ್ಲಿ ಗೆಳೆಯರ ಬಳಗ ಗುರುವಾರ ಹಮ್ಮಿಕೊಂಡಿದ್ದ ಬರಗೂರು ರಾಮಚಂದ್ರಪ್ಪ ಅವರ ಆಯ್ದ ಅನುಭವಗಳ ಕಥನ ‘ಕಾಗೆ ಕಾರುಣ್ಯದ ಕಣ್ಣು’ ಜನಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

    ಕಾಗೆ ಕಾರುಣ್ಯದಲ್ಲಿ ನೂರಾರು ಕಥನಗಳಿವೆ. ಸಾವಿರಾರು ವಿಷಯಗಳಿದ್ದು, ಉತ್ತಮ ಸಮಾಜ ನಿರ್ಮಾಣದ ತುಡಿತವಿದೆ. ಕನ್ನಡದಲ್ಲಿ ಸಾವಿರ ಪುಸ್ತಕ ಪ್ರಕಟಿಸಿ, 10 ವರ್ಷವಾದರೂ ಮರು ಮುದ್ರಣ ಕಷ್ಟ. ಆದರೆ, ಈ ಕೃತಿ 6 ತಿಂಗಳಲ್ಲೇ ಮೂರನೇ ಬಾರಿ ಮರುಮುದ್ರಣ ಆಗಿರುವುದು ಅವರ ಸಾಹಿತ್ಯ ಕೌಶಲಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.

    ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕನ್ನಡ ಸಾಹಿತ್ಯ ಮರು ಮೌಲ್ಯೀಕರಣ, ಉಪ ಸಂಸ್ಕೃತಿ ಅಭಿವೃದ್ಧಿ ಯೋಜನೆ ರೂಪಿಸಿದರು ಎಂದು ನೆನಪು ಮಾಡಿಕೊಂಡರು.

    ವಿಮರ್ಶಕಿ, ಕವಯತ್ರಿ ಡಾ. ತಾರಿಣಿ ಶುಭದಾಯಿನಿ ಮಾತನಾಡಿ, ಮೇಷ್ಟ್ರ ಈ ಕೃತಿಯೂ ಯಶಸ್ಸಿನ ಮಾರ್ಗದಲ್ಲಿ ಸಾಗುವ ಬಗೆ ಕುರಿತು ಬೆಳಕು ಚೆಲ್ಲಿದೆ. ವಿಭಿನ್ನ ರೂಪಗಳಲ್ಲಿ ಕಥೆ ಕಟ್ಟಿಕೊಟ್ಟಿದ್ದು, ಓದುಗರನ್ನು ಚಾರಿತ್ರಿಕ ಕೆಲ ಘಟನೆಗಳಿಗೆ ಕೊಂಡೊಯ್ಯುತ್ತದೆ. ಹೀಗಾಗಿ ಇದೊಂದು ಅನುಭವ ಕಥನ ಎಂದು ವರ್ಣಿಸಿದರು.

    ರಾಜ್ಯದ ಘಟಾನುಘಟಿ ಮುಖ್ಯಮಂತ್ರಿಗಳ ಜತೆ ಒಡನಾಟ ಹೊಂದಿದ್ದರು ಬಂಡಾಯ ಸಾಹಿತಿಯಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಆಳುವವರ ಜತೆ ಚೆನ್ನಾಗಿ ಇರುತ್ತಾರೆಂಬ ಮಾತು ಕೇಳಿ ಬಂದಾಗೆಲ್ಲ ಆತ್ಮಸಾಕ್ಷಿ ಬಿಟ್ಟುಕೊಡದ ರೀತಿ ನಡೆದುಕೊಂಡಿದ್ದಾರೆ. ಸಮರ್ಥನೆ ಹಾದಿ ಹಿಡಿದರೂ ಕೆಸರೆರಚಾಟಕ್ಕೆ ಆಸ್ಪದ ನೀಡದೆಯೆ ಅತ್ಯಂತ ಜಾಗೃತವಾಗಿ ಆಯ್ದಕಥನ ಬರೆದಿದ್ದಾರೆ ಎಂದರು.

    ಕಾಗೆ-ಕೋಗಿಲೆ ಕರ್ನಾಟಕವಿದು: ಕಾಗೆ-ಕೋಗಿಲೆ, ಶ್ರೀಗಂಧ-ಜಾಲಿಮರ, ಕಡಲು-ಬತ್ತಿದ ಕೆರೆಗಳ ಕರ್ನಾಟಕವೂ ಹೌದು. ಪ್ರಕೃತಿ ಕೇವಲ ರಮ್ಯತೆಗಷ್ಟೇ ಸೀಮಿತವಲ್ಲ. ನಿಸರ್ಗದಲ್ಲಿ ಮೇಲು-ಕೀಳು ನೋಡದಿದ್ದಾಗ ಸಮಾಜದಲ್ಲೂ ಅದನ್ನು ಕಾಣಲು ಸಾಧ್ಯ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.

    ಚಿಕ್ಕಂದಿನಲ್ಲಿ ನನಗೆ ಜ್ವರ ಬಂದಾಗಲೆಲ್ಲ ನಾಯಕನಹಟ್ಟಿ ತಿಪ್ಪೇಸ್ವಾಮಿ ಕಥೆ ಹೇಳಿಸುತ್ತಿದ್ದರು. ಹೀಗಾಗಿ ದೇವರ ಗುಟ್ಟು ಎಂಬ ಕಥೆ ಬರೆದಿದ್ದೇನೆ. ಹೀಗೆ.. ಹಲವು ಕಾರಣಗಳಿಂದ ಚಿತ್ರದುರ್ಗಕ್ಕೂ ನನಗೂ ನಂಟಿದೆ ಎಂದರು.

    ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್, ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್, ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಟಿ.ರವಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ನಾಡೋಜ ಬರಗೂರು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸುಂದರರಾಜ್ ಅರಸು, ಪ್ರಾಧ್ಯಾಪಕ ಕರಿಯಪ್ಪ ಮಾಳಿಗೆ, ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಗೌನಹಳ್ಳಿ ಗೋವಿಂದಪ್ಪ, ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts