More

    ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಿ -ಬಸವಪ್ರಭು ಸ್ವಾಮೀಜಿ – ಕರ್ನಾಟಕ ರಾಜ್ಯೋತ್ಸವ

    ದಾವಣಗೆರೆ: ತಾಯಂದಿರು ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಿಸುವ ಮೂಲಕ ಸಂಸ್ಕೃತಿ, ಪರಂಪರೆ ಬೆಳೆಸಬೇಕು ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
    ಕನ್ನಡಪರ ಸಂಘಟನೆಗಳ ಒಕ್ಕೂಟ ಜಿಲ್ಲಾ ಮಹಿಳಾ ಘಟಕದಿಂದ ನಗರದ ಜಯದೇವ ವೃತ್ತದ ಶ್ರೀ ಶಿವಯೋಗಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಉದ್ಯೋಗ ಸಿಗುತ್ತದೆ ಎಂಬ ಭ್ರಮೆ ಮನೆಮಾಡಿದೆ. ಮಕ್ಕಳಿಗೆ ಕೆಲಸ ಸಿಗಬೇಕೆಂದರೆ ಅರ್ಹತೆ ಹಾಗೂ ಕೌಶಲ ಮುಖ್ಯ. ಎಲ್ಲರೂ ಇಂಗ್ಲಿಷ್ ಭ್ರಮೆಯಿಂದ ಹೊರಬರಬೇಕು. ಒಂದು ಭಾಷೆಯಾಗಿ ಹಿಂದಿ, ಇಂಗ್ಲಿಷ್ ಕಲಿಸಿರಿ. ಆದರೆ ಕನ್ನಡ ಮಾಧ್ಯಮಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
    ಅಕ್ಕಮಹಾದೇವಿ ಸಮಾಜದಲ್ಲಿನ ಮೂಢನಂಬಿಕೆ ಹಾಗೂ ಅಸಮಾನತೆ ಪ್ರಶ್ನಿಸಿ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಜಯದೇವಿ ತಾಯಿ ಲಿಗಾಡೆ ಸೇರಿದಂತೆ ಅನೇಕ ಮಹಿಳೆಯರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಬಸವಣ್ಣನವರು ವಿಶ್ವಗುರು ಎನಿಸಿಕೊಳ್ಳಲು ಅಕ್ಕ ನಾಗಮ್ಮ ಕಾರಣ ಎಂದು ಮಹಿಳೆಯರು ಪ್ರಮುಖ ಪ್ರೇರಕ ಶಕ್ತಿ ಎಂಬುದನ್ನು ಉಲ್ಲೇಖಿಸಿದರು.
    ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದು ಹನ್ನೆರಡನೇ ಶತಮಾನದ ಬಸವಣ್ಣನವರ ಆಶಯಗಳು ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮೂಲಕ ಸಾಕಾರಗೊಳ್ಳುತ್ತಿದ್ದು ಹೆಚ್ಚು ಅವಕಾಶಗಳು ಲಭಿಸಲಿ ಎಂದು ಆಶಿಸಿದರು.
    ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ, ಕನ್ನಡಪರ ಹೋರಾಟಕ್ಕೆ ದಾವಣಗೆರೆ ನಗರ ಪ್ರಮುಖ ದಿಕ್ಸೂಚಿಯಾಗಿದೆ. ರಾಜ್ಯದ ನೆಲ, ಜಲ ಹಾಗೂ ಭಾಷೆಯ ವಿಷಯ ಬಂದಾಗ ಹೋರಾಟದ ಸ್ವರೂಪ ಕೊಟ್ಟ ನಗರ ಇದಾಗಿದೆ. ಒಕ್ಕೂಟದಡಿ ರಾಜ್ಯದಲ್ಲಿ ಕ್ರಿಯಾಶೀಲ ಮಹಿಳಾ ಕನ್ನಡಪರ ಸಂಘಟನೆ ಉದಯವಾಗಲಿ ಎಂದು ಹೇಳಿದರು.
    ಕನ್ನಡಪರ ಹೋರಾಟಗಾರ ಟಿ.ಶಿವಕುಮಾರ್ ಮಾತನಾಡಿ, ಕನ್ನಡಪರ ಹೋರಾಟಕ್ಕಾಗಿ ಮಹಿಳಾ ಒಕ್ಕೂಟ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಿಯಾಶೀಲವಾಗಿ ಸಂಘಟನೆ ಹೊರಹೊಮ್ಮುವ ಮೂಲಕ ಕನ್ನಡದ ಕಾರ್ಯಗಳಲ್ಲಿ ತೊಡಗಲಿದೆ ಎಂದು ತಿಳಿಸಿದರು.
    ಒಕ್ಕೂಟದ ಅಧ್ಯಕ್ಷೆ ಶುಭಮಂಗಳಾ, ಗೌರವಾಧ್ಯಕ್ಷೆ ದಾಕ್ಷಾಯಣಮ್ಮ, ಸಮಾಜ ಸೇವಕರಾದ ವಿಜಯಾ ಅಕ್ಕಿ, ಶ್ರುತಿ ಇನಾಂದಾರ್, ಪತ್ರಕರ್ತೆ ಎ.ಬಿ.ರುದ್ರಮ್ಮ, ರಂಗಭೂಮಿ ಕಲಾವಿದೆ ಜ್ಯೋತಿಕಲಾ, ಮಹಾದೇವಮ್ಮ, ಕಮಲಾಬಾಯಿ, ವೀಣಾ ಮಂಜುನಾಥ್, ಸೋಮಶೇಖರ್ ಇತರರು ಇದ್ದರು. ನೂರ್ ಅಹಮದ್ ಸ್ವಾಗತಿಸಿದರು, ಕೆ.ಜಿ.ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು, ವಿದ್ಯಾ ಮಂಜುನಾಥ್ ನಿರೂಪಿಸಿದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts