More

    ಕದ್ದ ಚಿನ್ನ ಟಾಯ್ಲೆಟ್ ಫ್ಲೆಶ್ ಟ್ಯಾಂಕ್​ಗೆ!

    ತರೀಕೆರೆ: ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ನೋಟಿನ ಕಂತೆ ಕಂತೆ ಹಣವನ್ನು ಪೈಪ್​ನಲ್ಲಿ ಹಾಕಿದ ಘಟನೆ ಗೊತ್ತು. ಇಂಥದ್ದೇ ಸಾಲಿಗೆ ಸೇರುವ ಮತ್ತೊಂದು ಪ್ರಕರಣ ಇದು. ಯಾರಿಗೂ ಗೊತ್ತಾಗದಿರಲಿ ಕದ್ದ ಚಿನ್ನವನ್ನು ಟಾಯ್ಲೆಟ್​ನ ಫ್ಲಶ್ ಟ್ಯಾಂಕ್​ನಲ್ಲಿ ಹಾಕಿದ ಅಚ್ಚರಿಯ ಘಟನೆ ತರೀಕೆರೆಯಲ್ಲಿ ನಡೆದಿದೆ. ಕದ್ದ ಚಿನ್ನದಲ್ಲಿ ಸ್ವಲ್ಪ ಅಡ ಇಟ್ಟು, ಉಳಿದ ಚಿನ್ನವನ್ನು ಟಾಯ್ಲೆಟ್​ನ ಫ್ಲಶ್ ಟ್ಯಾಂಕ್​ನಲ್ಲಿ ಹಾಕಿ ನಂತರ ಈ ಚಿನ್ನ ಪೈಪ್​ನಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಫ್ಲಶ್ ಮಾಡಲಾಗಿದ್ದು, ಈ ಸಂಗತಿಯನ್ನು ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಕಡೆಗೆ ಪೊಲೀಸರು ಪೈಪ್ ಒಡೆದು ಅದರಲ್ಲಿ ಬ್ಲಾಕ್ ಆಗಿದ್ದ ಚಿನ್ನಾಭರಣವನ್ನು ಹೊರತೆಗೆದಿದ್ದಾರೆ.

    ಕಳವು ಮಾಡಿದ್ದು ಪಕ್ಕದ ಗ್ರಾಪಂ ಪಿಡಿಒ ಚಂದ್ರಶೇಖರ್ ಅವರ ಮನೆಯಲ್ಲಿ. ಮಗಳು ಕಳ್ಳತನಕ್ಕೆ ಸಾಥ್ ನೀಡಿದ್ದು ಅವಳ ತಂದೆ-ತಾಯಿಗಳೇ. ಈಗ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಕೋಡಿಕ್ಯಾಂಪ್​ನ ವಿಜಯನಗರ ಬಡಾವಣೆ ನಿವಾಸಿಗಳಾದ ಸ್ವಾತಿ ಮತ್ತು ಅವರ ತಂದೆ ಶಿವಕುಮಾರ್, ತಾಯಿ ಪ್ರೇಮಾ ಬಂಧಿತ ಆರೋಪಿಗಳು.

    ಪಕ್ಕದ ಮನೆಯ ನಿವೃತ್ತ ಪಿಡಿಒ ಚಂದ್ರಶೇಖರ್ ಅವರ ಮನೆಗೆ ಹರಟೆ ಹೊಡೆಯುವ ನೆಪದಲ್ಲಿ ಹೋಗುತ್ತಿದ್ದ ಸ್ವಾತಿ ಬೀಗದ ಕೀಯನ್ನು ಲಪಟಾಯಿಸಿ ನಕಲಿ ಕೀ ಮಾಡಿಸಿಟ್ಟುಕೊಂಡಿದ್ದಳು. ಚಂದ್ರಶೇಖರ್ ಆ.13ರಂದು ಮನೆಯಿಂದ ಹೊರಗೆ ಹೋಗಿದ್ದಾಗ ನಕಲಿ ಕೀ ಬಳಸಿ ಚಿನ್ನಾಭರಣ ದೋಚಿದ್ದಳು. ಕದ್ದಿದ್ದ ಚಿನ್ನಾಭರಣಗಳನ್ನು ತಂದು ಪಾಲಕರಿಗೆ ಕೊಟ್ಟಿದ್ದಳು. ಮಗಳಿಗೆ ಬುದ್ಧಿ ಹೇಳಿ ಚಿನ್ನಾಭರಣ ವಾಪಸ್ ಕೊಡುವ ಬದಲಿಗೆ ಕುಮ್ಮಕ್ಕು ನೀಡಿದ ತಂದೆ-ತಾಯಿ, ಸ್ವಲ್ಪ ಚಿನ್ನವನ್ನು ಖಾಸಗಿ ಚಿನ್ನದ ಕಂಪನಿಯಲ್ಲಿ ಗಿರವಿ ಇಟ್ಟು ಹಣ ಪಡೆದಿದ್ದರು. ಉಳಿದ ಚಿನ್ನಾಭರಣಗಳನ್ನು ಟಾಯ್ಲೆಟ್​ನ ಕಮೋಡ್​ಗೆ ಹಾಕಿ ಫ್ಲಶ್ ಮಾಡುವ ಮೂಲಕ ಪೈಪ್​ನೊಳಗೆ ಸೇರಿಸಿದ್ದರು.

    ಸಿಪಿಐ ಎನ್.ಕೆ.ರಾಘವೇಂದ್ರ, ಪಿಎಸ್ಸೈ ಕೃಷ್ಣನಾಯ್ಕ, ತಿಪ್ಪೇಶ್, ಅನಿಲ್​ನಾಯ್ಕ ಮತ್ತು ಚಂದ್ರಮ್ಮ ನೇತೃತ್ವದ ತಂಡ ಶುಕ್ರವಾರ ಮೂವರನ್ನೂ ಬಂಧಿಸಿ ವಿಚಾರಣೆ ನಡೆಸಿದಾಗ ಒಂದಷ್ಟು ಆಭರಣಗಳನ್ನು ಟಾಯ್ಲೆಟ್​ನ ಕಮೋಡ್​ಗೆ ಹಾಕಿ ಫ್ಲಶ್ ಮಾಡಿ ಪೈಪ್​ನೊಳಗೆ ಸೇರಿಸಿದ್ದನ್ನು ಬಾಯ್ಬಿಟ್ಟಿದ್ದಾರೆ. ನಂತರ ಪೊಲೀಸರು ಪೈಪ್ ಒಡೆಸಿ ಚಿನ್ನಾಭರಣಗಳನ್ನು ಹೊರಗೆ ತೆಗೆಸಿದರು.

    ಫ್ಲೆಷ್ ಟ್ಯಾಂಕ್​ನಲ್ಲಿ ಹಾಕಿದ್ದೇಕೆ? ಪಿಡಿಒಗೆ ಪಕ್ಕದ ಮನೆಯವರ ಮೇಲೆ ಸಂಶಯ ಬಂದಿತ್ತು. ಅವರು ಅಕಸ್ಮಾತ್ ಮನೆಗೆ ಬಂದು ಎಲ್ಲಾ ಕಡೆ ಚೆಕ್ ಮಾಡಿದರೆ ಸಿಕ್ಕಿಬೀಳಬಹುದು ಎಂಬ ಕಾರಣಕ್ಕೆ ಟಾಯ್ಲೆಟ್​ನ ಫ್ಲಸ್ ಟ್ಯಾಂಕ್​ನಲ್ಲಿ ಹಾಕಿದ್ದರು. ಈ ಸಂಗತಿ ವಿಚಾರಣೆ ವೇಳೆ ಬಯಲಿಗೆ ಬಂದಿದೆ.

    ಅನುಮಾನ ಬಂದದ್ದು ಹೇಗೆ? ಚಿನ್ನ ಕಳುವಾದ ಬಗ್ಗೆ ಪಿಡಿಒ ಚಂದ್ರಶೇಖರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು, ವಿಚಾರಣೆ ಸಮಯದಲ್ಲಿ ನಿಮ್ಮ ಮನೆಗೆ ಯಾರ್ಯಾರು ಬಂದು ಹೋಗುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ. ಪಕ್ಕದ ಮನೆಯ ಸ್ವಾತಿ ಎಂಬ ಹುಡುಗಿ ಪದೇಪದೇ ಬರುತ್ತಿದ್ದಳು ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ವಿಚಾರಣೆ ಮಾಡಿದಾಗ ನಕಲಿ ಕೀ ಬಳಸಿ ಚಿನ್ನ ಕದ್ದಿರುವುದು ಬಯಲಾಗಿದೆ.

    ನಕಲಿ ಕೀ ಬಳಸಿ ಮನೆಯಲ್ಲಿ ಚಿನ್ನಾಭರಣ ದೋಚಿರುವುದು ಇದೇ ಮೊದಲಲ್ಲ. ಅನೇಕ ಬಾರಿ ಇಂಥ ಕೃತ್ಯ ನಡೆಸಿರುವುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಆದರೆ ಈವರೆಗೆ ಚಿನ್ನಾಭರಣ ಕಳೆದುಕೊಂಡವರ್ಯಾರಿಗೂ ಇವರ ಮೇಲೆ ಸಂಶಯ ಬಂದಿರಲಿಲ್ಲ. ವಿಚಾರಣೆ ವೇಳೆ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts