More

    ಕಣ್ವ ಜಲಾಶಯ ಆಸುಪಾಸಿನಲ್ಲೂ ಅಕ್ರಮದ ವಾಸನೆ : ನಕಲಿ ದಾಖಲೆ ಸೃಷ್ಟಿ ಕೋಲೂರಿಗೆ ಸೀಮಿತವಲ್ಲ, ಗೋಮಾಳದ ಜಾಗ ಪ್ರಭಾವಿಗಳ ವಶದಲ್ಲಿ

    ಚನ್ನಪಟ್ಟಣ: ತಾಲೂಕಿನ ಕೋಲೂರು ಗ್ರಾಮದ ಸರ್ವೇ ನಂ.118ರ ಸರ್ಕಾರಿ ಗೋಮಾಳದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ.ಬೆಲೆಬಾಳುವ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಪ್ರಕರಣ ಕೇವಲ ಈ ಭಾಗಕ್ಕೆ ಸೀಮಿತವಾಗಿಲ್ಲ…, ಇದೇ ರೀತಿ ತಾಲೂಕಿನ ಹಲವೆಡೆ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ.
    ಚನ್ನಪಟ್ಟಣ ತಾಲೂಕು ಕಚೇರಿಯ ಭೂ ಮಂಜೂರಾತಿ ವಿಭಾಗದ ದ್ವೀತಿಯ ದರ್ಜೆ ಸಹಾಯಕ (ಎಸ್​ಡಿಎ) ಹರೀಶ್​ಕುಮಾರ್​ ಅಮಾನತು ಪ್ರಕರಣದಿಂದ ತಾಲೂಕಿನ ಬಹುಕೋಟಿ ಭೂ ಹಗರಣ ಬೆಳಕಿಗೆ ಬಂದಿತ್ತು. ಈತ ಜಿಲ್ಲಾಧಿಕಾರಿ ಕಚೇರಿಯ ಚಿಕ್ಕಸಿದ್ದಯ್ಯ ಎಂಬಾತನ ಜತೆಗೂಡಿ ಹಾಗೂ ಹಣವಂತರು ಮತ್ತು ಭೂ ಮಾಫಿಯಾದೊಂದಿಗೆ ಶಾಮೀಲಾಗಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿದ್ದ.
    ತಾಲೂಕಿನ ಕೋಲೂರು ಗ್ರಾಮದ ಸರ್ವೇ ನಂಬರ್​ 118 ರಲ್ಲಿ 192 ಎಕರೆ ಸರ್ಕಾರಿ ಗೋಮಾಳವಿದ್ದು, ಈ ಗೋಮಾಳ ಜಮೀನಿಗೆ ಸಂಬಂಧಪಟ್ಟ ಕಡತವನ್ನು ಕಚೇರಿಯಿಂದ ತೆಗೆದುಕೊಂಡು ಹೋಗಿ ಮೂಲ ಸಾಗುವಳಿದಾರರ ದಾಖಲೆಗಳನ್ನು ಕಡತದಿಂದ ತೆಗೆದು, ಬೇರೆಯವರ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದ್ದ. ಬೇಲಿಯೇ ಎದ್ದು ಹೊಲ ಮೇಯ್ದ ಈ ಪ್ರಕರಣ ಬೆಳಕಿಗೆ ಬಂದು, ಇದೀಗ, ಎಸ್​ಡಿಎ ಹರೀಶ್​ಕುಮಾರ್​ ಜೈಲು ಪಾಲಾಗಿದ್ದಾನೆ. ಇದರೊಂದಿಗೆ ಈ ಪ್ರಕರಣದ ಬಗ್ಗೆ ಪೊಲೀಸರು ಚುರುಕಿನ ತನಿಖೆ ಕೈಗೊಂಡಿದ್ದಾರೆ.

    ಕಣ್ವ ಬಯಲಿನಲ್ಲೂ ಸಾಕಷ್ಟು ಅಕ್ರಮ: ಈ ಪ್ರಕರಣ ಹೊರಬಿದ್ದ ಬೆನ್ನಲ್ಲೇ ಸಾವಿರಾರು ಎಕರೆ ಸರ್ಕಾರಿ ಗೋಮಾಳದ ಜಮೀನಿರುವ ಕಣ್ವ ಜಲಾಶಯ ಆಸುಪಾಸಿನಲ್ಲೂ ಸಾಕಷ್ಟು ಅಕ್ರಮ ನಡೆದಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಕನ್ನಮಂಗಲ, ಚೋಳಮಾರನಹಳ್ಳಿ, ದೇವರಹೊಸವಹಳ್ಳಿ ಸರ್ವೇ ನಂ.118, 120, 149, 148, 90ರಲ್ಲಿ ಸಾವಿರಾರು ಎಕರೆ ಗೋಮಾಳವಿದೆ. ಈ ಗೋಮಾಳದ ಜಾಗವನ್ನು ಸಾಗುವಳಿ ನೆಪದಲ್ಲಿ ಈಗಾಗಲೇ ಹಲವು ಪ್ರಭಾವಿಗಳು ವಶಕ್ಕೆ ಪಡೆದಿದ್ದಾರೆ. ಈ ಪ್ರದೇಶದಲ್ಲಿ ಅರ್ಹ ರೈತರು ಹಾಗೂ ನೈಜ ಲಾನುಭವಿಗಳು ಬೆರಣೆಕೆಯಷ್ಟಿದ್ದು, ಉಳ್ಳವರು ಇಲ್ಲಿ ತಮ್ಮ ಸ್ವಾಮಿತ್ವ ಸ್ಥಾಪಿಸಿಕೊಂಡಿದ್ದಾರೆ. ಎರಡು-&ಮೂರು ಎಕರೆ ಜಮೀನಿಗೆ ಸಾಗುವಳಿ ಇದ್ದರೆ, ಹತ್ತಿಪ್ಪತ್ತು ಎಕರೆ ಸ್ವಾಧಿನದಲ್ಲಿರುವ ಹಲವು ಪ್ರಕರಣಗಳು ಇಲ್ಲಿವೆ. ಯಾರದೋ ಹೆಸರಿನ ಸಾಗುವಳಿಯಲ್ಲಿ ಬೇರೆ ಯಾರೋ ಅನುಭವದಲ್ಲಿರುವ ಪ್ರಕರಣಗಳೂ ಈ ಪ್ರದೇಶದಲ್ಲಿದೆ. ಇದೀಗ, ಹೊರಬಿದ್ದಿರುವ ನಕಲಿ ಸಾಗುವಳಿ ಸೃಷ್ಟಿ ಪ್ರಕರಣದಿಂದ ಕೋಟ್ಯಂತರ ರೂ. ಬೆಲೆಬಾಳುವ ಈ ಪ್ರದೇಶದಲ್ಲೂ ಅಕ್ರಮ ನಡೆದಿದೆ ಎಂಬುದಕ್ಕೆ ಪುಷ್ಟಿ ದೊರಕಿದೆ.

    ಪ್ರಭಾವಿಗಳೇ ಲಾನುಭವಿಗಳು: ಗೋಮಾಳದ ಜಮೀನನ್ನು ಸಾಗುವಳಿದಾರರಿಗೆ ನೀಡುವುದು ಸಾಮಾನ್ಯ. ಆದರೆ, ಈ ಜಮೀನಿನ ಸಾಗುವಳಿ ಚೀಟಿ ಪಡೆಯಲು ಹಾಗೂ ಈ ಜಮೀನಿನ ಮೇಲೆ ಹಕ್ಕು ಬಾಧ್ಯತೆ ಸಾಧಿಸಲು ಕಾನೂನಿನ ಪ್ರಕಾರ ಹಲವು ನಿಬಂಧನೆಗಳಿವೆ. ಆದರೆ, ಕಣ್ವ ಆಸುಪಾಸಿನಲ್ಲಿರುವ ಈ ಗೋಮಾಳದಲ್ಲಿ ಬಹುತೇಕ ಪ್ರಭಾವಿಗಳೇ ಲಾನುಭವಿಗಳು ಎಂಬುದು ನೂರಕ್ಕೆ ನೂರು ಸತ್ಯ. ಇದರೊಂದಿಗೆ ಈ ಬಯಲಿನಲ್ಲೂ ಅಕ್ರಮ ನಡೆದಿದೆ. ಅಧಿಕಾರಿಗಳ ಕರಾಮತ್ತಿನಿಂದ ಸಾಕಷ್ಟು ಮೋಸ, ವಂಚನೆಗಳು ನಡೆದಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯಾರದ್ದೋ ಜಮೀನನ್ನು ಕೇವಲ ಹೇಳಿಕೆಯ ಮೂಲಕವೇ ಮತ್ತೊಬ್ಬರಿಗೆ ಖಾತೆ ಮಾಡಿಕೊಟ್ಟಿರುವ ನಿದರ್ಶನ ಸೇರಿ ಸಾಕಷ್ಟು ಉದಾಹರಣೆಗಳು ಕಣ್ವ ಬಯಲಿನಲ್ಲಿವೆ. ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ತಮ್ಮ ಕುಟುಂಬದವರ ಹೆಸರಿನಲ್ಲಿ ಈ ಜಾಗ ಕಬಳಿಸಿದ್ದಾರೆ ಎನ್ನುವ ಆರೋಪವೂ ಇದೆ.

    ಉನ್ನತ ಮಟ್ಟದ ತನಿಖೆಯಾಗಬೇಕಿದೆ: ತಾಲೂಕಿನಲ್ಲಿ ಹೊರಬಿದ್ದಿರುವ ಬಹುಕೋಟಿ ಸರ್ಕಾರಿ ಭೂಮಿ ಅಕ್ರಮ ಪರಭಾರೆ ಪ್ರಕರಣದ ಜತೆಗೆ, ಕಣ್ವ ಬಯಲು ಹಾಗೂ ಮಾಕಳಿ ಅರಣ್ಯ ಪ್ರದೇಶದ ಬಳಿ ಇರುವ ಗೋಮಾಳದ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕಿದೆ. ಸಾಗುವಳಿ ಚೀಟಿ ಪಡೆದಿರುವವರ ಹಾಗೂ ಸಾಗುವಳಿ ನಡೆಸುತ್ತಿರುವರ ಹಾಗೂ ಈ ಪ್ರದೇಶ ಸ್ವಾಧಿನದಲ್ಲಿರುವವರ ದಾಖಲೆಗಳನ್ನು ಪರಿಶೀಲಿಸುವ ಕೆಲಸವಾಗಬೇಕಿದೆ. ಈ ಕೆಲಸವಾದರೆ, ಬಗೆದಷ್ಟೂ ಅಕ್ರಮಗಳು ಹೊರಬೀಳುವುದರಲ್ಲಿ ಸಂಶಯವೇ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts