More

    ಕಡಲೆ ಖರೀದಿಸಿದರೂ ಕೊಡದ ಕಾಸು

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಮೂರು ತಿಂಗಳ ಹಿಂದೆ ಖರೀದಿಸಲಾದ ಕಡಲೆಗೆ ಇನ್ನೂ ಹಣ ಸಂದಾಯ ಮಾಡದ ಕಾರಣ ಕಡಲೆ ಮಾರಾಟ ಮಾಡಿದ್ದ ರೈತರು ಪರದಾಡುವಂತಾಗಿದೆ.

    ಪಟ್ಟಣದ ರೋಣ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಮೂಲಕ ಎಪಿಎಂಸಿ ಆವರಣದಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ರೈತರಿಂದ ಪ್ರತಿ ಕ್ವಿಂಟಾಲ್​ಗೆ 5100 ರೂಪಾಯಿಗಳಂತೆ ಗುಣಮಟ್ಟದ ಕಡಲೆ (ಎಫ್​ಎಕ್ಯೂ) ಖರೀದಿಸಲಾಗಿದೆ. ಪ್ರತಿಯೊಬ್ಬ ರೈತರಿಂದ ಗರಿಷ್ಠ 15 ಕ್ವಿಂಟಾಲ್​ನಂತೆ ಒಟ್ಟು 162 ರೈತರು ಸುಮಾರು 1500 ಕ್ವಿಂಟಾಲ್ ಕಡಲೆ ಮಾರಾಟ ಮಾಡಿದ್ದಾರೆ. ಕಡಲೆ ಖರೀದಿಸಿ ಎರಡು ತಿಂಗಳು ಕಳೆದರೂ ಹಣ ಸಂದಾಯವಾಗದಿರುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

    ಬೆಂಬಲ ಬೆಲೆಯಡಿ ಕಡಲೆ ಖರೀದಿ ಸಂದರ್ಭದಲ್ಲಿ ಬೆಳೆಗಾರರು ಪಹಣಿ, ಬ್ಯಾಂಕ್ ಖಾತೆ, ಆಧಾರ್ ಮಾಹಿತಿ ಸೇರಿದಂತೆ ಅಗತ್ಯ ವಿವರಗಳನ್ನು ಪಡೆದುಕೊಳ್ಳಲಾಗಿದೆ. ಅದರಂತೆ ಕಡಲೆ ಖರೀದಿ ಮಾಡಿದ ಕೆಲ ದಿನಗಳಲ್ಲೇ ಹಣ ಸಂದಾಯ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇದುವರೆಗೂ ಹಣ ಸಂದಾಯವಾಗಿಲ್ಲ. ಹಣಕ್ಕಾಗಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

    ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಕಡಲೆ ಖರೀದಿ ಪ್ರಾರಂಭಿಸುತ್ತಿದ್ದಂತೆ ಖಾಸಗಿ ಕಾಳುಕಡಿ ವ್ಯಾಪಾರಸ್ಥರು ಕಡಲೆ ಬೆಲೆಯನ್ನು ಹೆಚ್ಚಿಸಿದ್ದರು. ಇದರಿಂದಾಗಿ ಸರ್ಕಾರದ ಕಡಲೆ ಖರೀದಿ ಕೇಂದ್ರಕ್ಕೆ ರೈತರು ನಿರೀಕ್ಷಿತ ಮಟ್ಟದಲ್ಲಿ ಕಡಲೆಯನ್ನು ಮಾರಾಟ ಮಾಡಲಿಲ್ಲ. ಸರ್ಕಾರ ನಿಗದಿ ಮಾಡಿದ 5100 ರೂಪಾಯಿಗಳಿಗೆ ನಗದು ನೀಡಿ ವ್ಯಾಪಾರಸ್ಥರು ಖರೀದಿಸುತ್ತಿರುವಾಗ, ಸರ್ಕಾರದ ಬೆಂಬಲ ಬೆಲೆಯಡಿ ಕಡಲೆ ನೀಡಿ ಹಣಕ್ಕಾಗಿ ಯಾಕೆ ಕಾಯಬೇಕು ಎಂದು ಬಹುತೇಕ ರೈತರು ಖಾಸಗಿ ವ್ಯಾಪಾರಸ್ಥರಿಗೆ ಕಡಲೆ ಮಾರಾಟ ಮಾಡಿದ್ದಾರೆ. ಇನ್ನುಳಿದ ರೈತರು ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಮಾರಾಟ ಮಾಡಿ ಹಣಕ್ಕಾಗಿ ಅಲೆದಾಡುತ್ತಿದ್ದಾರೆ.

    ಮುಂಗಾರಿನ ತಯಾರಿಗೆ ಪೆಟ್ಟು
    ಕಳೆದ ಒಂದು ವಾರದಿಂದ ಆಗಾಗ ಮಳೆಯಾಗುತ್ತಿದ್ದು, ಮುಂಗಾರಿನ ಬಿತ್ತನೆಗಾಗಿ ಭೂಮಿ ಹದಗೊಳಿಸುವುದು, ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಹಣದ ಅವಶ್ಯಕತೆ ಇದೆ. ಕಡಲೆ ಮಾರಾಟ ಮಾಡಿದ ಹಣ ಸಕಾಲದಲ್ಲಿ ಕೈಸೇರಿದಲ್ಲಿ ಮಾತ್ರ ರೈತರ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಹಣ ಸಂದಾಯವಾಗುವುದು ತಡವಾದಷ್ಟು ರೈತ ಸಮಸ್ಯೆಯ ಸುಳಿಗೆ ಸಿಲುಕಬೇಕಾಗುತ್ತದೆ.

    ಬೆಂಬಲ ಬೆಲೆ ಯೋಜನೆಯಡಿ ಕಡಲೆ ಮಾರಾಟ ಮಾಡಲಾಗಿದೆ. ಆದರೆ, ಇದುವರೆಗೂ ಹಣ ಸಂದಾಯವಾಗಿಲ್ಲ. ದೈನಂದಿನ ವ್ಯವಹಾರ ನಡೆಸುವುದು ದುಸ್ತರವಾಗಿದೆ. ಮುಂಗಾರಿನ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಪಕ್ಕದ ಕೋಟುಮಚಗಿಯ ರೈತರಿಗೆ ಈಗಾಗಲೇ ಹಣ ಸಂದಾಯವಾಗಿದೆ. ಆದರೆ, ನರೇಗಲ್ಲನ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿರುವ ರೈತರಿಗೆ ಹಣ ಸಂದಾಯವಾಗಿಲ್ಲ. ಆದ್ದರಿಂದ, ಜಿಲ್ಲಾಡಳಿತ ಕೂಡಲೇ ಹಣ ಸಂದಾಯ ಮಾಡಬೇಕು.
    | ಶರಣಪ್ಪ ಗಂಗರಗೊಂಡ, ರೈತ ನರೇಗಲ್ಲ

    ಕಡಲೆ ಮಾರಾಟ ಮಾಡಿದ್ದ ಎಲ್ಲ ರೈತರ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಪರಿಶೀಲನೆ ಮುಗಿದಿದೆ. ಕೋಟುಮಚಗಿಯು ಗದಗ ತಾಲೂಕಿಗೆ ಒಳಪಟ್ಟಿದ್ದು ಮಾರ್ಚ್ ಅಂತ್ಯದ ವೇಳೆಗೆ ಅಲ್ಲಿನ ರೈತರ ಮಾಹಿತಿಯನ್ನು ಕಳುಹಿಸಲಾಗಿದೆ. ನರೇಗಲ್ಲನ ಖರೀದಿ ಕೇಂದ್ರವು ನರಗುಂದ ವಿಭಾಗಕ್ಕೆ ಬರುತ್ತಿದ್ದು, ಮಾರ್ಚ್ ನಂತರ ರೈತರ ಮಾಹಿತಿ ಕಳುಹಿಸಲಾಗಿದೆ. ಮೇ 20 ರಿಂದ ಹಂತ ಹಂತವಾಗಿ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ.
    | ಷಣ್ಮುಖಪ್ಪ ಸಿದ್ನೆಕೊಪ್ಪ, ಟಿಎಪಿಸಿಎಂಎಸ್ ಮ್ಯಾನೇಜರ್ ನರೇಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts