More

    ಕಚೇರಿ ಎದುರು ಶವವಿಟ್ಟು ಪ್ರತಿಭಟನೆ

    ಮೂಡಿಗೆರೆ: ತಾಲೂಕಿನ ಊರುಬಗೆ ಗ್ರಾಮದಲ್ಲಿ ಗುರುವಾರ ಸಂಜೆ ಕಾಡಾನೆ ದಾಳಿಗೆ ಕಾರ್ವಿುಕ ಅರ್ಜುನ್ ಬಲಿಯಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಎಲ್ಲ ಪಕ್ಷಗಳ ಮುಖಂಡರ ಜತೆಗೂಡಿ ಪಟ್ಟಣದ ಅರಣ್ಯ ಕಚೇರಿ ಎದುರು ಶುಕ್ರವಾರ ಶವವಿಟ್ಟು ಪ್ರತಿಭಟನೆ ನಡೆಸಿದರು.  ಅರಣ್ಯ ಇಲಾಖೆ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸುತ್ತಾರೆಂದು ತಿಳಿದಿದ್ದ ಅಧಿಕಾರಿಗಳು ಗುರುವಾರ ಸಂಜೆಯಿಂದಲೇ ಭದ್ರತೆಗೆ ಹೆಚ್ಚುವರಿ ಪೊಲೀಸರನ್ನು ಕರೆಸಿದ್ದರು. ಗ್ರಾಮಸ್ಥರು ಅರಣ್ಯ ಇಲಾಖೆ ಕಚೇರಿ ಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು.

    ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಅರ್ಜುನ್ ಶವದೊಂದಿಗೆ ಅರಣ್ಯ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಬ್ಯಾರಿಕೇಡ್​ಗಳನ್ನು ಧ್ವಂಸಗೊಳಿಸಿ ಪೊಲೀಸರನ್ನು ತಳ್ಳಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ ನಡೆಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೋಲಿಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಗುಂಪು ಸ್ಥಳಕ್ಕಾಗಮಿಸಿ ಪೊಲೀಸರ ವರ್ತನೆ ಹಾಗೂ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಘೊಷಣೆ ಕೂಗಿದರು.

    ಈ ಹಿಂದೆ ಕಾಡಾನೆ ದಾಳಿ ನಡೆಸಿದಾಗ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ನಾವು ಭರವಸೆ ಕೇಳಿಕೊಂಡು ಹೋಗಲು ಬಂದಿಲ್ಲ. ನಮಗೆ ಲಿಖಿತವಾಗಿ ಬರೆದುಕೊಡಬೇಕು ಎಂದು ಪಟ್ಟುಹಿಡಿದರು. ಕಾಡಾನೆ ಹಾವಳಿಯಿಂದ ಜನ ಕಂಗೆಟ್ಟಿದ್ದಾರೆ. ಜಮೀನು ಹಾಳು ಬೀಳುವಂತಾಗಿದೆ. ರಸ್ತೆಯಲ್ಲಿ ತಿರುಗಾಡುವಂತಿಲ್ಲ. ಆದರೂ ವಲಯ ಅರಣ್ಯಾಧಿಕಾರಿ ಮೋಹನ್​ಕುಮಾರ್ ನಿರ್ಲಕ್ಷ್ಯ ತೋರಿದ್ದಾರೆ. ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಪಟ್ಟು ಹಿಡಿದರು.

    ಒಂದು ಕಾಡಾನೆಯನ್ನು ಹಿಡಿಯಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು. ಮೃತನ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ. ಆನೆ ಹಾವಳಿ ತಡೆಗಟ್ಟುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಬರೆದುಕೊಡಿ ಎಂದು ಪಟ್ಟುಹಿಡಿದರು. ಅಧಿಕಾರಿಗಳು ಬರೆದುಕೊಟ್ಟ ನಂತರ ಪ್ರತಿಭಟನೆ ಸ್ಥಗಿತಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts