More

    ಕಗ್ಗಂಟಾದ “ಬೈಪಾಸ್​ ರಸ್ತೆ’ ನಿರ್ಮಾಣ!

    ಬೆಳಗಾವಿ: ನಗರ ನಿವಾಸಿಗಳು, ಉದ್ಯಮಿಗಳ ಬಹುದಿನಗಳ ಕನಸಾಗಿರುವ ವರ್ತುಲ ರಸ್ತೆ (ರಿಂಗ್​ ರೋಡ್​) ನಿರ್ಮಾಣ ವರ್ಷಗಳಿಂದ ಕಗ್ಗಂಟಾಗಿ ಪರಿಣಮಿಸಿದೆ. ಭೂ ಸ್ವಾಧಿನ ವಿರೋಧಿಸಿ 940 ರೈತರು ಬೆಳಗಾವಿ ಉಪವಿಭಾಗಾಧಿಕಾರಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ.

    ನಗರದೊಳಗಿನ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ತಪ್ಪಿಸುವುದು, ಕೈಗಾರಿಕೆ ಕ್ಷೇತ್ರಕ್ಕೆ ಅನುಕೂಲ ಕಲ್ಪಿಸುವುದು ಸೇರಿ ವಿವಿಧ ಕಾರಣಕ್ಕಾಗಿ ಸರ್ಕಾರವು ಬೆಳಗಾವಿ ನಗರದ ಹೊರವಲಯದಲ್ಲಿ 69.42 ಕಿ.ಮೀ ಉದ್ದದ ವರ್ತುಲ ರಸ್ತೆ ನಿರ್ಮಿಸಲು ಕ್ರಮ ವಹಿಸಿದೆ. ಆದರೆ, ಈ ಯೋಜನೆಗೆ ಫಲವತ್ತಾದ ಕೃಷಿ ಭೂಮಿ ಸ್ವಾಧಿನಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭೂಮಿ ಕಳೆದುಕೊಳ್ಳುವ ನೂರಾರು ರೈತರು ಬೆಳಗಾವಿ ಉಪ ವಿಭಾಗಾಧಿಕಾರಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ರಿಂಗ್​ ರೋಡ್​ ನಿರ್ಮಾಣ ಕಾಮಗಾರಿ ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ.

    ಈಗಾಗಲೇ ಬೆಳಗಾವಿ ತಾಲೂಕಿನ 32 ಹಳ್ಳಿಯ 1248 ಎಕರೆ ಭೂಮಿ ಸ್ವಾಧಿನಕ್ಕೆ ನೂರಾರು ರೈತರು ವಿರೋಧ ವ್ಯಕ್ತಪಡಿಸಿ ನಿರಂತರ ಪ್ರತಿಭಟನೆ, ಕಾನೂನು ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.
    ಮತ್ತೊಂದೆಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭೂಮಿ ಸ್ವಾಧಿನ ಪಡಿಸಿಕೊಂಡು ಕಾಮಗಾರಿ ಆರಂಭಿಸಲು ಪ್ರಯತ್ನಿಸುತ್ತಿದ್ದು ಸಾಧ್ಯವಾಗುತ್ತಿಲ್ಲ. ಪರಿಣಾಮ ಈ ಯೋಜನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೂರಾರು ಕೋಟಿ ರೂ. ಅನುದಾನ ಬಳಕೆಯಾಗದೆ ಹಾಗೆ ಉಳಿದುಕೊಂಡಿದೆ.

    ಏನಿದು ಯೋಜನೆ?: ಬೆಳಗಾವಿ ನಗರದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಸುಮಾರು 1,364 ಕೋಟಿ ರೂ. ವೆಚ್ಚದಲ್ಲಿ ಒಟ್ಟು 69.42 ಕಿ.ಮೀ ಉದ್ದದ ವರ್ತುಲ ರಸ್ತೆ (ರಿಂಗ್​ ರೋಡ್​) ನಿರ್ಮಿಸುವ ಯೋಜನೆ ಇದಾಗಿದೆ. ಬೆಳಗಾವಿ ನಗರದ ಹೊರ ವಲಯದಲ್ಲೇ ಬೆಂಗಳೂರು&ಪುಣೆ ರಾಷ್ಟ್ರೀಯ ಹೆದ್ದಾರಿ&4 ಮತ್ತು ಬೆಳಗಾವಿ&ಖಾನಾಪುರ ರಾಷ್ಟ್ರೀಯ ಹೆದ್ದಾರಿ&4ಎ ನಡುವೆ ಸಂಪರ್ಕ ಕಲ್ಪಿಸುವುದೇ ಯೋಜನೆಯ ಮುಖ್ಯ ಉದ್ದೇಶವಾಗಿದೆ.

    ಬೆಂಗಳೂರು &ಹುಬ್ಬಳ್ಳಿ ಕಡೆಯಿಂದ ಬರುವ ವಾಹನಗಳು ಸುವರ್ಣ ವಿಧಾನಸೌಧ ಸಮೀಪದ ಹಲಗಾದಿಂದ ಎಡಕ್ಕೆ ತಿರುಗಿ ಮಚ್ಚೆ ಮಾರ್ಗವಾಗಿ ಗೋವಾ ಕಡೆ ಪ್ರಯಾಣ ಬೆಳಸಬಹುದು. ಗೋವಾದಿಂದ &ಪುಣೆ ಮುಂಬೈ ಕಡೆ ಹೋಗುವ ವಾಹನಗಳು ಬೆಳಗಾವಿ ಪ್ರವೇಶದ ದ್ವಾರದಲ್ಲಿರುವ ಮಚ್ಚೆಯಿಂದ ಕಾಕತಿ, ಹೊನಗಾದವರೆಗಿನ ರಿಂಗ್​ ರೋಡ್​ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಯಾಣ ಬೆಳಸಬಹುದು. ಈ ಯೋಜನೆಗಾಗಿ ರಾಜ್ಯ ಸರ್ಕಾರವು ಭೂಮಿ ಸ್ವಾಧಿನಕ್ಕಾಗಿ ತನ್ನ ಪಾಲಿನ 140 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

    ರೈತರ ವಾದ ಏನು?: ಬೆಳಗಾವಿ ತಾಲೂಕಿನ 1ರಿಂದ 2 ಎಕರೆವರೆಗೆ ಕೃಷಿ ಭೂಮಿ ಹೊಂದಿರುವ ಚಿಕ್ಕ ಹಿಡುವಳಿದಾರರೇ ಹೆಚ್ಚಿನ ಸಂಖ್ಯೆಯಲ್ಲಿ ರಿಂಗ್​ ರೋಡ್​ ರಸ್ತೆಗೆ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಈ ರೈತರ ಬದುಕಿಗೆ ಕೃಷಿ ಭೂಮಿಯೇ ಆಶ್ರಯವಾಗಿದೆ. ಹಾಗಾಗಿ ರಸ್ತೆ ನಿರ್ಮಾಣಕ್ಕೆ ಫಲವತ್ತಾದ ಕೃಷಿ ಭೂಮಿ ಸ್ವಾಧಿನ ಪಡಿಸಿಕೊಳ್ಳಬೇಡಿ. ಬದಲಾಗಿ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ರೈತರ ವಾದವಾಗಿದೆ.

    ಬೆಳಗಾವಿ ನಗರದ ಹೊರವಲಯದಲ್ಲಿನ ರಿಂಗ್​ ರೋಡ್​ ನಿರ್ಮಾಣಕ್ಕೆ ಭೂ ಸ್ವಾಧಿನ ವಿರೋಧಿಸಿ ಸುಮಾರು 940 ರೈತರು ಆಕ್ಷೇಪಣೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆಲ್ಲ ನೋಟಿಸ್​ ನೀಡಿ ವಿಚಾರಣೆ ನಡೆಸಬೇಕಿದೆ. ಸದ್ಯ ಭೂಮಿ ಸ್ವಾಧಿನ ಪಡಿಸಿಕೊಳ್ಳುವ ಪ್ರಕ್ರಿಯೇಗಳು ಆರಂಭಗೊಂಡಿಲ್ಲ.
    | ಬಲರಾಮ ಚವ್ಹಾಣ, ಉಪವಿಭಾಗಾಧಿಕಾರಿ ಬೆಳಗಾವಿ

    | ಮಂಜುನಾಥ ಕೋಳಿಗುಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts