More

    ಕಂದಾಯ ವಿಭಾಗಗಳಿಗೆ ನೋಡಲ್ ಅಧಿಕಾರಿಗಳ ನೇಮಕ

    ಧಾರವಾಡ: ಸಹಕಾರಿ ಇಲಾಖೆಯಿಂದ ರೈತರು, ವ್ಯಾಪಾರಿಗಳು, ಉದ್ದಿಮೆದಾರರು, ಸ್ವ ಸಹಾಯ ಸಂಘಗಳಿಗೆ ವಿವಿಧ ಸಾಲ ಸೌಲಭ್ಯಗಳ ಮೂಲಕ ಅಭಿವೃದ್ಧಿ ಸಾಧಿಸಲು ಮತ್ತು ಆತ್ಮ ನಿರ್ಭರ ಯೋಜನೆ ಸದುಪಯೋಗಕ್ಕೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಪ್ರತ್ಯೇಕವಾಗಿ ಸಹಕಾರಿ ಇಲಾಖೆಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಹೇಳಿದರು.

    ನಗರದ ಕಲಾಭವನದಲ್ಲಿ ಸಹಕಾರ ಇಲಾಖೆಯು ಕೋವಿಡ್-19ರ ಸಂಕಷ್ಟದ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿದ ವಿವಿಧ ಯೋಜನೆಗಳಡಿ ಬೆಳಗಾವಿ ಪ್ರಾಂತದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ಗಳು ಹಾಗೂ ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಆರ್ಥಿಕ ಸ್ಪಂದನ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಕರೊನಾ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸಿದ ಸುಮಾರು 42,540 ಜನ ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರದಂತೆ 12,07,50,000 ರೂ. ಪ್ರೋತ್ಸಾಹ ಧನವನ್ನು ನೀಡಲಾಗಿದೆ. 15 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಹಣವನ್ನು ವಿವಿಧ ಸಹಕಾರಿ ಸಂಘಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ ಎಂದರು.

    ಸಹಕಾರಿ ರಂಗದ ಪಿತಾಮಹ ಸಿದ್ಧನಗೌಡ ಸಣ್ಣರಾಮಣ್ಣಗೌಡ ಪಾಟೀಲರ ಭಾವಚಿತ್ರವನ್ನು ರಾಜ್ಯದ ಎಲ್ಲ ಸಹಕಾರಿ ಸಂಘ, ಸಂಸ್ಥೆ, ಬ್ಯಾಂಕಗಳಲ್ಲಿ ಕಡ್ಡಾಯವಾಗಿ ಅಳವಡಿಸಲು ಇಲಾಖೆಯಿಂದ ಆದೇಶಿಸಲಾಗುವುದು ಎಂದು ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದ ರೂ.ವರೆಗೆ ಸಾಲ ನೀಡುವ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗಿದೆ. ಸಹಕಾರಿ ರಂಗದ ವ್ಯಾಪ್ತಿಯನ್ನು ಕೈಗಾರಿಕೆ ಸೇರಿ ಇತರ ರಂಗಗಳಿಗೂ ವಿಸ್ತರಿಸಬೇಕು. ಕೈಗಾರಿಕಾ ರಂಗಕ್ಕೆ ಪ್ರವೇಶ ಮಾಡಿದರೆ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕೋವಿಡ್ -19 ಸಂಕಷ್ಟದ ಸಂದರ್ಭದಲ್ಲಿ ದೇಶವಾಸಿಗಳ ನೆರವಿಗೆ ಕೇಂದ್ರ ಸರ್ಕಾರ ಅನೇಕ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ 500ಕ್ಕಿಂತ ಹೆಚ್ಚು ಪ್ರಸ್ತಾವಗಳನ್ನು ಕೇಂದ್ರಕ್ಕೆ ಸಲ್ಲಿಸಿದ್ದು, 215 ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ ಎಂದರು.

    ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಶಾಸಕರಾದ ಸಿ.ಎಂ. ನಿಂಬಣ್ಣವರ, ಅಮೃತ ದೇಸಾಯಿ, ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ, ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾಉಲ್ಲಾ, ಸಹಕಾರ ಸಂಘಗಳ ಜಂಟಿ ನಿರ್ದೇಶಕ ಜಿ.ಎಂ. ಪಾಟೀಲ, ವಿವಿಧ ಜಿಲ್ಲೆಗಳ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರು, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರು, ಸಿಬ್ಬಂದಿ, ಇತರರು ಇದ್ದರು.

    ಬೆಳಗಾವಿ, ಗದಗ, ಹಾವೇರಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಹಾಯಧನದ ಚೆಕ್ ವಿತರಿಸಲಾಯಿತು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ ಸ್ವಾಗತಿಸಿದರು. ಮಾಯಾರಾಮನ್ ಕಾರ್ಯಕ್ರಮ ನಿರೂಪಿಸಿದರು.

    ಸಾಮರ್ಥ್ಯ ಬಳಸಿಕೊಂಡಿದ್ದೇವೆ: ಸಹಕಾರ ಇಲಾಖೆ ಸಚಿವ ಎಸ್.ಟಿ. ಸೋಮಶೇಖರ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿ ಸಚಿವರಾಗಿದ್ದಾರೆ. ಅವರು ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್​ನವರು ಸೋಮಶೇಖರ್ ಅವರಲ್ಲಿದ್ದ ಪ್ರತಿಭೆ, ಕ್ರಿಯಾಶೀಲತೆಯನ್ನು ಗುರುತಿಸಲಿಲ್ಲ. ಆದರೆ, ನಾವು ಗುರುತಿಸಿ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಅದೇ ರೀತಿ ರಮೇಶ ಜಾರಕಿಹೊಳಿ ಅವರ ಪ್ರತಿಭೆಯನ್ನೂ ಗುರುತಿಸಿದ್ದೇವೆ ಎಂದು ಸಚಿವ ಜಗದೀಶ ಶೆಟ್ಟರ್ ಸಾಂರ್ದಭಿಕವಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts