More

    ಕಂತೇನಹಳ್ಳಿ ದೊಡ್ಡಕೆರೆಯಲ್ಲಿ ಗಣಪತಿ ವಿಸರ್ಜನೆ

    ಅರಸೀಕೆರೆ: ನಗರದ ಕಂತೇನಹಳ್ಳಿ ಬಡಾವಣೆಗೆ ಹೊಂದಿಕೊಂಡಂತಿರುವ ದೊಡ್ಡಕೆರೆಯಲ್ಲಿ ಗಣಪತಿ ವಿಸರ್ಜನಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.


    ಸರ್ವಾಲಂಕೃತ ವಿಘ್ನ ವಿನಾಯಕನಿಗೆ ಕಂತೇನಹಳ್ಳಿ ಬಡಾವಣೆ ನಿವಾಸಿಗಳು ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗಿಸಲಾಯಿತು.
    ಕರಡೇವು, ತಮಟೆ, ಮಂಗಳ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಕೆರೆಯಂಗಳ ಪ್ರವೇಶಿಸಿತು. ತಜ್ಞರು ಸಿದ್ಧಪಡಿಸಿದ್ದ ತೆಪ್ಪದಲ್ಲಿ ಬೃಹತ್ ಕ್ರೇನ್ ಬಳಸಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ಮಾಡಿ ವಿಧ್ಯುಕ್ತ ಚಾಲನೆ ನೀಡಿದ್ದನ್ನು ಕೆರೆಯಂಗಳದಲ್ಲಿ ನಿಂತಿದ್ದ ಭಾರಿ ಸಂಖ್ಯೆಯ ಭಕ್ತಸಮೂಹ ಕಣ್ತುಂಬಿಕೊಂಡಿತು.


    ಭಾರಿ ಮದ್ದುಗುಂಡುಗಳ ಪ್ರದರ್ಶನದ ಬಳಿಕ ವಿನಾಯಕನ ವಿಸರ್ಜನಾ ಮಹೋತ್ಸವ ಸುಸೂತ್ರವಾಗಿ ಸಂಪನ್ನಗೊಂಡಿತು.


    ಬಿಜೆಪಿ ಮುಖಂಡ ಎನ್.ಆರ್.ಸಂತೋಷ್, ನಗರಸಭೆ ಅಧ್ಯಕ್ಷ ಸಿ.ಗಿರೀಶ್, ಮಾಜಿ ಅಧ್ಯಕ್ಷ ಪಂಚಾಕ್ಷರಿ, ಮುಖಂಡ ಹರ್ಷವರ್ಧನ್‌ರಾಜ್, ಎಸ್ಪಿ ಹರಿರಾಮ್ ಶಂಕರ್, ಎಎಸ್ಪಿ ತಮ್ಮಯ್ಯ, ಡಿವೈಎಸ್ಪಿ ಅಶೋಕ್, ನಗರಠಾಣೆ ಇನ್ಸ್‌ಪೆಕ್ಟರ್ ಸೋಮೇಗೌಡ, ಗ್ರಾಮಾಂತರ ಸಿಪಿಐ ರಾಘವೇಂದ್ರ ಪ್ರಕಾಶ್, ಗ್ರಾಮಾಂತರ ಠಾಣೇಯ ಪಿಎಸ್‌ಐ ಲಕ್ಷ್ಮಣ್, ಗಣಪತಿ ಭಕ್ತ ಮಂಡಳಿಯ ಎಸ್‌ಬಿಟಿ ಬಾಬು, ಟಿ.ಆರ್.ನಾಗರಾಜ್, ಬಸವರಾಜ್, ನಾಗಭೂಷಣ್ ಮತ್ತಿತರರು ನೇತೃತ್ವ ವಹಿಸಿದ್ದರು.


    ಆಕ್ರೋಶ: ಶನಿವಾರ ತಡರಾತ್ರಿ ಡಿಜೆ ಧ್ವನಿವರ್ಧಕದ ಸದ್ದಿಗೆ ಹೆಜ್ಜೆ ಹಾಕುವ ವೇಳೆ ಪೊಲೀಸರು ಪ್ರವಾಸಿ ಮಂದಿರದ ಬಳಿ ಲಾಠಿ ಚಾರ್ಜ್ ನಡೆಸಿದ್ದು, ಹಲವು ಯುವಕರು ಗಾಯಗೊಂಡು ಸರ್ಕಾರಿ ಜೆಸಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದರು.


    ವೈಭವದ ಗಣೇಶೋತ್ಸವಕ್ಕೆ ಅಡ್ಡಿಪಡಿಸಿದ ಪೊಲೀಸರ ವರ್ತನೆಗೆ ಭಕ್ತ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉದ್ದೇಶ ಪೂರ್ವಕವಾಗಿ ಡಿಜೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಕಂತೇನಹಳ್ಳಿ ಗ್ರಾಮದ ಯುವಕರ ಗುಂಪು ವಿಸರ್ಜನಾ ಮಹೋತ್ಸವದಿಂದ ದೂರವುಳಿದು ಚುನಾಯಿತ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts