More

    ಔಷಧ ಉದ್ಯಮಕ್ಕೂ ಕರೊನಾ ಲಾಕ್

    ಜಯತೀರ್ಥ ಪಾಟೀಲ ಕಲಬುರಗಿ
    ಕರೊನಾ ಕಾರ್ಮೋಡದ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್ಡೌನ್ ಇದ್ದುದ್ದರಿಂದ ಸಾರಿಗೆ ವ್ಯವಸ್ಥೆ ಇಲ್ಲದೆ ಔಷಧ ಪೂರೈಕೆ ಇಲ್ಲದೆ ಅಭಾವ ಎದುರಾಗಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಕೈಮೀರುವ ಸಾಧ್ಯತೆ ಇದೆ.
    ಕರೊನಾ ಹೊರತುಪಡಿಸಿ ರಕ್ತದೊತ್ತಡ, ಮಧುಮೇಹ, ಅಸ್ತಮಾ, ಮಾನಸಿಕ ಖಿನ್ನತೆ ಸೇರಿ ಕ್ರಾನಿಕಲ್ ಡಿಸೀಜ್ಗಳಿಗೂ ಡ್ರಗ್ಸ್ ಅಭಾವ ಗೋಚರಿಸತೊಡಗಿದೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ ಬಹುತೇಕ ಗಡಿ ಬಂದ್ ಮಾಡಲಾಗಿದೆ. ಅಂತರ್ ಜಿಲ್ಲೆ ಸಂಚರಕ್ಕೂ ಬ್ರೇಕ್ ಬಿದ್ದಿದೆ. ಆಹಾರದ ಜತೆಗೆ ಔಷಧಕ್ಕಾಗಿಯೂ ಪರಿತಪಿಸಬೇಕಾಗಿದೆ.
    ಫಾರ್ಮ ಸಿ ಆ್ಯಂಡ್ ಎಫ್ ಏಜೆಂಟ್ಸ್ ಪೈಕಿ ಶೇ.70 ಬೆಂಗಳೂರು ಮತ್ತು ಶೇ.30 ಹುಬ್ಬಳ್ಳಿಯಲ್ಲಿದ್ದಾರೆ. ಇಲ್ಲಿಂದಲೇ ಕಲ್ಯಾಣ ಕರ್ನಾಟಕಕ್ಕೆ ಔಷಧ ಸರಬರಾಜು ಆಗುತ್ತಿತ್ತು. ಆದರೀಗ ಸಾರಿಗೆ ಸೌಕರ್ಯ ಇಲ್ಲದೆ ಸಮಸ್ಯೆ ಸೃಷ್ಟಿಯಾಗಲಿದೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಿಂದಲೇ ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಫಾರ್ಮ್​ ಸರಬರಾಜು ಆಗುತ್ತಿದೆ. ಜಿಲ್ಲೆಯಲ್ಲಿ ನಿತ್ಯ 2-3 ಕೋಟಿ ರೂ. ರಿಟೇಲ್ ವ್ಯವಹಾರ ಆಗುತ್ತಿತ್ತು. 15 ದಿನಗಳಿಂದ ಜಿಲ್ಲೆಗೆ ಒಂದೇ ಒಂದು ಲೋಡ್ ಔಷಧ ಸರಬರಾಜು ಆಗಿಲ್ಲ. ಲಾಕ್ಡೌನ್ ಅವಧಿ ಮುಗಿಯಲು ಇನ್ನೂ 12 ದಿನ ಬಾಕಿ ಇದ್ದು, ಜನ ಪ್ಯಾನಿಕ್ ಆಗುತ್ತಿದ್ದಾರೆ.
    ಜಿಲ್ಲೆಯಲ್ಲಿ ರಿಟೇಲ್ ಔಟ್ಲೆಟ್ಗಳು 1000, ಬೀದರ್ 500, ಯಾದಗಿರಿ 400, ರಾಯಚೂರಿನಲ್ಲಿ 500 ಔಟ್ಲೆಟ್ಗಳಿವೆ. ಕಲಬುರಗಿ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಸಗಟು ವ್ಯಾಪಾರಿಗಳಿದ್ದಾರೆ.
    ಬೆಂಗಳೂರು, ಹೈದರಾಬಾದ್ ಸೇರಿ ಬಹುತೇಕ ಕಡೆ ಫಾರ್ಮ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿಲ್ಲ. ಹಾಗಂತ ಎಷ್ಟೊಂದು ಔಷಧ ಗೋದಾಮಿನಲ್ಲಿ ಸ್ಟಾಕ್ ಮಾಡಲು ಸಾಧ್ಯ? ಬೇಡಿಕೆ ಬಾರದಿದ್ದಲ್ಲಿ ಕಂಪನಿಗಳೂ ಕೈ ಎತ್ತುವ ಸಾಧ್ಯತೆ ಇದೆ. ಸ್ಟಾಕ್ಗೆ ಬೇಡಿಕೆ ಬಂದರೆ ಮಾತ್ರ ಕಂಪನಿಗಳು ನಿರಂತರ ಉತ್ಪಾದನೆ ಮಾಡಲಿವೆ. ಫಾರ್ಮ ಉದ್ಯಮದಲ್ಲಿ ಡೀಲರ್ಸ್ಗೆ ಶೇ.8-10 ಮಾರ್ಜಿ ನ್ ಇದ್ದರೆ, ರಿಟೇಲರ್ಸ್ಗೆ ಶೇ.16 ಮತ್ತು ಸಿ ಆ್ಯಂಡ್ ಎಫ್ಗೆ ಶೇ.3 ಮಾರ್ಜಿನ್ ಇರಲಿದೆ ಎಂದು ಮೂಲಗಳು ತಿಳಿಸಿವೆ.

    ಸಾರಿಗೆ ವ್ಯವಸ್ಥೆ ಮಾಡಿಕೊಡಿ: ಅನೇಕ ಫಾರ್ಮ್​ ಕಂಪನಿಗಳು ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯನ್ನು ಸಂಪರ್ಕಿಸಿ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಅಗತ್ಯ ಔಷಧ ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಜಲ್ಲಾಡಳಿತದ ಗಮನಕ್ಕೆ ತಂದು ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ಕೋರಿವೆ. ಅಗತ್ಯ ವಸ್ತುಗಳ ಕಾಯ್ದೆ ಅಡಿ ಬರುವ ಡ್ರಗ್ಸ್ ಮತ್ತು ಫಾರ್ಮಾಸಿಟಿಕಲ್ಸ್ ಲಾಕ್ಡೌನ್ ಆದಾಗಿನಿಂದ ಸರಬರಾಜು ಸ್ಥಗಿತಗೊಂಡಿದೆ. ಅಗತ್ಯ ಔಷಧ ಕೊರತೆ ಎದುರಾದರೆ ಪರಿಸ್ಥಿತಿ ನಿಯಂತ್ರಣ ತಪ್ಪಲಿದೆ. ಹೀಗಾಗಿ ಸಗಟು ವ್ಯಾಪಾರಿಗಳು, ರಿಟೇಲರ್ಸ್ಗಳ ಬೇಡಿಕೆಗೆ ಸ್ಪಂದಿಸಬೇಕು ಎಂದು ಬಯೋಪ್ಲಾಸ್ಮಿಡ್ ಹೆಲ್ತ್ಕೇರ್ ಸಂಸ್ಥೆಯು ಎಚ್ಕೆಸಿಸಿಐ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದೆ.

    ಜಿಲ್ಲಾಡಳಿತ ವಹಿಸಬೇಕಿದೆ ಮುತುವರ್ಜಿ: ಮೆಡಿಕಲ್ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಔಷಧ ಸರಬರಾಜಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ಔಷಧ ಸರಬರಾಜಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಮಾರುಕಟ್ಟೆಯಲ್ಲಿ ದೊರೆಯುವಂತೆ ಮಾಡಲು ಜಿಲ್ಲಾಡಳಿತ ಮುತವರ್ಜಿ ವಹಿಸಬೇಕಿದೆ.

    ಅಗತ್ಯ ಔಷಧ ಮಾರುಕಟ್ಟೆಯಲ್ಲಿ ಕೊರತೆ ಆಗುತ್ತಿರುವುದು ನಿಜ. ಕೆಲ ಫಾರ್ಮ್​ ಕಂಪನಿಗಳು ತಮ್ಮನ್ನು ಸಂಪರ್ಕಿಸಿ ಪರ್ಯಾಯ ವ್ಯವಸ್ಥೆಗೆ ಮನವಿ ಮಾಡಿಕೊಂಡಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಪರಿಸ್ಥಿತಿ ಕೈಮೀರುವ ಮುನ್ನ ಸೂಕ್ತ ವ್ಯವಸ್ಥೆ ಮಾಡಬೇಕು. ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಸಾಕಷ್ಟು ಶ್ರಮ ಪಡುತ್ತಿರುವ ಡಿಸಿಯವರು ಇದಕ್ಕೂ ವ್ಯವಸ್ಥೆ ಮಾಡುವ ವಿಶ್ವಾಸವಿದೆ.
    | ಅಮರನಾಥ ಸಿ.ಪಾಟೀಲ್
    ಅಧ್ಯಕ್ಷ, ಎಚ್ಕೆಸಿಸಿಐ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts