More

    ಒತ್ತುವರಿ ತೆರವಿಗಾಗಿ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ | ಪಾಲಥಿ-ಕರಡಿ ಗ್ರಾಮದ ಸಂಪರ್ಕ ರಸ್ತೆ

    ಹುನಗುಂದ: ತಾಲೂಕಿನ ಪಾಲಥಿ ಗ್ರಾಮದಿಂದ ಕರಡಿ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಪಕ್ಕದ ಹೊಲದವರು ಒತ್ತುವರಿ ಮಾಡಿದ್ದನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಂಡುವಂತೆ ಒತ್ತಾಯಿಸಿ ಬಂಡಿ-ಎತ್ತುಗಳ ಸಮೇತ ಪಾಲಥಿ ಗ್ರಾಮಸ್ಥರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.

    ಗ್ರಾಪಂ ಸದಸ್ಯ ಬಸವರಾಜ ಗೌಡರ ಮಾತನಾಡಿ, ಪಾಲಥಿ ಗ್ರಾಮದಿಂದ ರೈತರ ಹೊಲಗಳಿಗೆ ಹೋಗುವ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಕಳೆದ ಎರಡು ವರ್ಷದಿಂದ ಸ್ಥಳೀಯ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮೌಖಿಕ ಹಾಗೂ ಲಿಖಿತವಾಗಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹಿಂದಿನಿಂದಲೂ ಇದೇ ಮಾರ್ಗವಾಗಿ ರೈತರ ಎತ್ತು ಬಂಡಿಗಳು ಸುಗಮವಾಗಿ ಸಂಚಾರ ಮಾಡುತ್ತಿದ್ದವು. ಆದರೆ ರಸ್ತೆ ಅಕ್ಕ ಪಕ್ಕದ ರೈತರು ರಸ್ತೆಯನ್ನು ಒತ್ತುವರಿ ಮಾಡಿದ್ದರಿಂದ ಆ ಮಾರ್ಗದಲ್ಲಿ ಒಬ್ಬ ವ್ಯಕ್ತಿ ಹೋಗಲು ಆಗುತ್ತಿಲ್ಲ. ಇದರಿಂದ ಇತ್ತೀಚೆಗೆ ಆದೇ ಮಾರ್ಗದಲ್ಲಿ ಹೋಗುತ್ತಿದ್ದ ಒಂದು ಎತ್ತಿನ ಬಂಡಿ ಬಿದ್ದು ಎತ್ತು, ಬಂಡಿ ಹಾಗೂ ರೈತರಿಗೆ ಗಂಭೀರ ಗಾಯಗಳಾಗಿವೆ. ಈ ವಿಷಯವನ್ನು ಸ್ಥಳೀಯ ಶಾಸಕರ ಗಮನಕ್ಕೆ ತಂದಾಗ ಎರಡು ದಿನಗಳಲ್ಲಿ ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಇಲ್ಲಿವರೆಗೂ ಯಾರೊಬ್ಬರೂ ಆ ಕಡೆಗೆ ತಿರುಗಿ ನೋಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಮೌನೇಶ ಮಾದರ ಮಾತನಾಡಿ, ಸದರಿ ರಸ್ತೆಯಲ್ಲಿ ಕಾಲುವೆ ನೀರು ಹರಿದು ರೈತರು ಹೊಲಗಳಿಗೆ ತೆರಳಲು ತೊಂದರೆಯಾಗಿದೆ. ಸಾಕಷ್ಟು ಬಾರಿ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ನಮ್ಮ ಗ್ರಾಮದ ರಸ್ತೆ ಸರಿಪಡಿಸುವವರೆಗೂ ತಹಸೀಲ್ದಾರ್ ಕಚೇರಿಯಿಂದ ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಮಹಾಲಿಂಗಪ್ಪ ಗಂಜಿಹಾಳ, ಶಿವಪ್ಪ ಗಂಜಿಹಾಳ, ನಿಂಗಪ್ಪ ಚಿತ್ತವಾಡಗಿ, ವೆಂಕಪ್ಪ ಗೌಡರ, ಮಲ್ಲನಗೌಡ ಗೌಡರ, ಬಸಲಿಂಗಪ್ಪ ಗೌಡರ, ಸಂಗನಗೌಡ ಗೌಡರ, ಜಗದೀಶ ಗಂಗೂರ, ದೇವಪ್ಪ ಕರಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts