More

    ಕುಮದ್ವತಿ ನದಿಗೆ ಬಾಂದಾರ ಸಿದ್ಧ ನೀರು ಮಾತ್ರ ದೂರ!

    ರಟ್ಟಿಹಳ್ಳಿ: ತಾಲೂಕಿನ ಸಣ್ಣಗುಬ್ಬಿ, ಹಿರೇಮಾದಾಪುರ ಗ್ರಾಮದ ಬಳಿ ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಸೇತುವೆ ಸಹಿತ ಬಾಂದಾರದ ಮುಖ್ಯ ಕೆಲಸಗಳು ಬಹುತೇಕ ಮುಕ್ತಾಯಗೊಂಡಿದ್ದು, ತಡೆಗೋಡೆ ಮತ್ತು ಸಂಪರ್ಕ ರಸ್ತೆ ನಿರ್ಮಾಣ ಬಾಕಿ ಉಳಿದಿದೆ. ಬಾಂದಾರಕ್ಕೆ ಗೇಟ್ ಅಳವಡಿಸದೇ ಇರುವುದರಿಂದ ಕೆಲ ತಿಂಗಳುಗಳಿಂದ ನದಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ಇದನ್ನು ತಪ್ಪಿಸಲು ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಕಲ್ಪಿಸಲು ಶೀಘ್ರವೇ ಬಾಂದಾರಕ್ಕೆ ಗೇಟ್ ಅಳವಡಿಸಬೇಕಿದೆ.

    ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 17 ಕೋಟಿ ರೂ. ವೆಚ್ಚದಲ್ಲಿ ಕುಮದ್ವತಿ ನದಿಗೆ ಮಾಸೂರು-ಮೇದೂರು, ಹಿರೇಮೊರಬ- ಚಿಕ್ಕಮೊರಬ, ರಟ್ಟಿಹಳ್ಳಿ- ತೋಟಗಂಟಿ ಮತ್ತು ಹಿರೇಮಾದಾಪುರ-ಸಣ್ಣಗುಬ್ಬಿ ಬಳಿ ಸೇತುವೆ ಸಹಿತ ಬಾಂದಾರಗಳನ್ನು ನಿರ್ವಿುಸಲಾಗಿದೆ. ಈಗಾಗಲೇ ಈ ಬಾಂದಾರ ಹೊರತುಪಡಿಸಿ ಉಳಿದ ಮೂರು ಕಡೆ 2 ಮೀಟರ್ ಎತ್ತರದಷ್ಟು ಗೇಟ್​ಗಳನ್ನು ಅಳವಡಿಸಲಾಗಿದೆ. ಮಳೆಯ ಕೊರತೆಯಿಂದಾಗಿ ಪ್ರಸ್ತುತ ನದಿಯಲ್ಲಿ ದಿನೇದಿನೆ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ. ಹರಿಯುತ್ತಿರುವ ಅಲ್ಪ ಸ್ವಲ್ಪ ನೀರನ್ನಾದರೂ ಉಳಿಸಲು ಗೇಟ್ ಅಳವಡಿಸಿ ನೀರು ಸಂಗ್ರಹಿಸುವ ಕೆಲಸವಾಗಬೇಕಿದೆ.

    ಬಾಂದಾರಕ್ಕೆ ಗೇಟ್ ಅಳವಡಿಸುವುದರಿಂದ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಇದ ರಿಂದ ಅಕ್ಕಪಕ್ಕದ ಗ್ರಾಮಗಳ ಮತ್ತು ಜಮೀನುಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಅನುಕೂಲವಾಗುತ್ತದೆ. ನದಿಯಲ್ಲಿ ನೀರು ಇರುವುದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉಪಯೋಗವಾಗುತ್ತದೆ. ಗೇಟ್ ಅಳವಡಿಕೆ ವಿಳಂಬವಾದರೆ ನೀರಿನ ಸಂಗ್ರಹವೂ ಇಲ್ಲದಂತಾಗುತ್ತದೆ. ಆದ್ದರಿಂದ ಅಧಿಕಾರಿಗಳು ಆದಷ್ಟು ಬೇಗ ಗೇಟ್ ಅಳವಡಿಸಬೇಕಿದೆ.

    ಕೆಲಸ ಮುಗಿದಿದ್ದರೂ ಇಲ್ಲಿನ ಬಾಂದಾರಕ್ಕೆ ಗೇಟ್ ಹಾಕಿಲ್ಲ. ಇದರಿಂದ ನೀರು ತುಂಗಭದ್ರಾ ನದಿ ಸೇರುತ್ತಿದೆ. ಕೋಟ್ಯಂತರ ರೂ.ವ್ಯಯಿಸಿ ನಿರ್ವಿುಸಿದ ಬಾಂದಾರ ಇದ್ದೂ ಇಲ್ಲದಂತಾಗಿದೆ. ಅಧಿಕಾರಿಗಳು ಕೂಡಲೇ ಗಮನ ಹರಿಸಿ ಗೇಟ್ ಅಳವಡಿಸಬೇಕು.

    | ಕರಬಸಪ್ಪ ಬಸಾಪುರ ಕಾರ್ಯದರ್ಶಿ, ತಾಲೂಕು ರೈತ ಸಂಘ

    ಸಣ್ಣಗುಬ್ಬಿ- ಹಿರೇಮಾದಾಪುರ ಸೇತುವೆ ಸಹಿತ ಬಾಂದಾರ ಉತ್ತಮವಾಗಿ ನಿರ್ವಣವಾಗಿದೆ. ಆದರೆ, ಗೇಟ್ ಅಳವಡಿಸಿಲ್ಲ. ಇದರಿಂದ ಬಾಂದಾರ ಇದ್ದೂ ಇಲ್ಲದಂತಾಗಿದೆ. ಈಗಾಗಲೇ ಹಲವು ಬಾಂದಾರಗಳಿಗೆ ಗೇಟ್ ಅಳವಡಿಸಲಾಗಿದ್ದು, ಇಲ್ಲಿನ ಬಾಂದಾರಕ್ಕೂ ಗೇಟ್ ಅಳವಡಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಇಲಾಖೆ ಕಚೇರಿ ಬಳಿ ಪ್ರತಿಭಟನೆ ಮಾಡಬೇಕಾಗುತ್ತದೆ.

    | ದೇವರಾಜ ನಾಗಣ್ಣನವರ ರೈತ ಸಣ್ಣಗುಬ್ಬಿ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts