More

    ಸಿದ್ದಾಪುರ-ನಂದಿಹಳ್ಳಿ ರಸ್ತೆ ದುರಸ್ತಿ ಮಾಡಿ; ಊಳೇನೂರಿನಲ್ಲಿ ಗ್ರಾಮಸ್ಥರಿಂದ ಅನಿರ್ದಿಷ್ಟಾವಧಿ ಧರಣಿ

    ಸಿದ್ದಾಪುರ: ಸಿದ್ದಾಪುರ-ನಂದಿಹಳ್ಳಿ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹಿಸಿ ಸಮೀಪದ ಉಳೇನೂರಿನಲ್ಲಿ ಗ್ರಾಮಸ್ಥರು ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
    ಗ್ರಾಮಸ್ಥ ಸುರೇಶ್ ಮಡಿವಾಳ ಮಾತನಾಡಿ, ಮೂರ್ನಾಲ್ಕು ತಿಂಗಳ ಹಿಂದೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿಗೊಳಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಯಾರೊಬ್ಬರು ಮುತುವರ್ಜಿ ವಹಿಸಿಲ್ಲ. ಕೆಲವು ದಿನಗಳ ಹಿಂದೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಭತ್ತದ ಗದ್ದೆಗೆ ನುಗ್ಗಿತ್ತು. ಅದೃಷ್ಟವಶಾತ್ ಜನರು ಪ್ರಾಣಾಪಾಯದಿಂದ ಪಾರಾಗಿದ್ದರು. ಇದಾದ ಕೆಲ ದಿನಗಳಲ್ಲಿ ಆಗಾಗ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.

    ಇತ್ತೀಚೆಗೆ ಸರ್ಕಾರಿ ಬಸ್ ಇಂಜಿನ್‌ಗೆ ರಸ್ತೆಯ ಜಲ್ಲಿಕಲ್ಲುಗಳು ಸಿಕ್ಕಿಕೊಂಡ ಕಾರಣ ಕೆಟ್ಟು ನಿಂತು ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿತ್ತು. ವಾರದ ಕೆಳಗೆ ದ್ವಿಚಕ್ರ ವಾಹನ ಸವಾರನೊಬ್ಬ ಕೆಳಗೆ ಬಿದ್ದು ಗಾಯಗೊಂಡಿದ್ದ. ಇಷ್ಟೆಲ್ಲ ಅವಘಡಗಳು ನಡೆದರೂ ಈವರೆಗೆ ರಸ್ತೆ ದುರಸ್ತಿ ಆಗುತ್ತಿಲ್ಲ ಎಂದು ಆರೋಪಿಸಿದರು.
    ಸಂಸದ ಸಂಗಣ್ಣ ಕರಡಿ ಗೆದ್ದು ಎಂಟು ವರ್ಷಗಳಾದರೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಜನರ ಅಹವಾಲು ಆಲಿಸಿಲ್ಲ. ಸಮಸ್ಯೆ ಪರಿಹಾರಕ್ಕಾಗಿ ಎರಡು ಸರ್ಕಾರಿ ಬಸ್‌ಗಳನ್ನು ತಡೆಹಿಡಿಯಲಾಗಿದೆ. ಕೆಎಸ್‌ಆರ್‌ಟಿಸಿಗೆ ತಗುಲುವ ವೆಚ್ಚವನ್ನು ನಾವೇ ಭರಿಸಿದ್ದೇವೆ. ಬೇರೆಡೆಗೆ ತೆರಳುವ ಪ್ರಯಾಣಿಕರಿಗೆ ಸಹ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಶಾಸಕರು ಆಗಮಿಸಿ, ಸಮಸ್ಯೆ ಪರಿಹರಿಸಬೇಕು. ಇಂತಿಷ್ಟು ದಿನಗಳಲ್ಲಿ ರಸ್ತೆ ನಿರ್ಮಿಸುವ ಭರವಸೆ ನೀಡಿದರಷ್ಟೇ ಧರಣಿ ಕೈಬಿಡಲಾಗುವುದು. ಇಲ್ಲದಿದ್ದರೆ ಉಗ್ರ ಹೋರಾಟದ ಜತೆಗೆ ಉಳೇನೂರು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಮತದಾನ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
    ಗ್ರಾಮಸ್ಥರಾದ ಹನುಮೇಶ್, ಯಮನೂರು, ಮಲ್ಲಿಕಾರ್ಜುನ, ರಾಮಣ್ಣ, ಹುಲಿಗೆಪ್ಪ, ನಾಗೇಶಪ್ಪ, ಈರಪ್ಪ, ದೇವರಾಜ, ಮಂಜುನಾಥ, ಮುತ್ತು, ಹೊನ್ನೂರಪ್ಪ, ಕನಕರಾಯ, ನಾಗರಾಜ, ಧರ್ಮರಾಜ, ಶರಣಬಸವ, ಸುನೀಲ್, ಚನ್ನಬಸವ, ಸಿದ್ದಲಿಂಗ, ಲಿಂಗರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts