More

    ಒಕ್ಕಲಿಗ ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರ ಚಾಲನೆ

    ಹುಣಸೂರು: ಹುಣಸೂರಿನಲ್ಲಿ ಒಕ್ಕಲಿಗ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಭರವಸೆ ನೀಡಿದರು.


    ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನಲ್ಲಿ ಒಕ್ಕಲಿಗ ಸಮಾಜ ನನ್ನನ್ನು ಈ ಬಾರಿಯ ಚುನಾವಣೆಯಲ್ಲಿ ಒಮ್ಮತದಿಂದ ಬೆಂಬಲಿಸಿದೆ. ಸಮಾಜದ ಋಣ ನನ್ನ ಮೇಲಿದೆ. ಸಮುದಾಯ ಭವನ ನಿರ್ಮಾಣಕ್ಕೆ ಸಂಸದ ಪ್ರತಾಪ್ ಸಿಂಹ 50 ಲಕ್ಷ ರೂ. ನೀಡಿದ್ದು, ಶಾಸಕರಾಗಿ ಅಗತ್ಯ ನೆರವನ್ನು ನೀಡಲಿದ್ದೇನೆ. ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಿದ್ದೇನೆ. ತಾಲೂಕಿನ ಅಭಿವೃದ್ಧಿಯೊಂದಿಗೆ ಸಮಾಜದ ಒಳಿತಿಗಾಗಿ ಕಟಿಬದ್ಧನಾಗಿ ದುಡಿಯಲಿದ್ದೇನೆ. ತಾಲೂಕಿನಲ್ಲಿ ಬಡವರಿಗೆ ನಿವೇಶನ, ಪಟ್ಟಣ ಪ್ರದೇಶದಲ್ಲಿ ಬಡಾವಣೆಗಳಲ್ಲಿ ಮೂಲಸೌಕರ್ಯ, ಖಾತೆ ವಿತರಣೆ, ಆನೆ ತಡೆಗೋಡೆ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳು ಕಾಡುತ್ತಿವೆ. ಈಗಾಗಲೇ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದು, ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ. ಪಟ್ಟಣದಲ್ಲಿ ರಸ್ತೆಗಳು ದುಸ್ತಿತಿಯಲ್ಲಿವೆ. ಆದರೆ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಪ್ರಸ್ತುತ ವರ್ಷ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವ ಖಾತ್ರಿ ಇಲ್ಲ ಎಂದರು.


    ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಸಾಧನೆ ಇಂದಿಗೂ ಅನುಕರಣೀಯ. ಬೆಂಗಳೂರನ್ನು ಕಟ್ಟಿದ ರೀತಿ ಅನನ್ಯ. ತಾಲೂಕಿನಲ್ಲಿ 15 ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದ್ದು, ಈ ಬಾರಿ ಒಕ್ಕಲಿಗ ಸಮಾಜ ಒಮ್ಮತದಿಂದ ಹರೀಶ್ ಗೌಡರ ಗೆಲುವಿಗೆ ಶ್ರಮಿಸಿದೆ, ದುಡಿಯಲು ಉತ್ಸುಕರಾಗಿರುವ ಅವರಿಂದ ಕೆಲಸ ಮಾಡಿಸಿಕೊಳ್ಳಿ ಎಂದರು.


    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.


    ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆರ್ಶೀವಚನ ನೀಡಿದರು. ಸಂಘದ ತಾಲೂಕು ಅಧ್ಯಕ್ಷ ಗಣೇಶ್‌ಗೌಡ ಮಾತನಾಡಿದರು. ಮುಖಂಡರಾದ ಎಚ್.ಜೆ.ಜಯರಾಂ, ಬಿ.ಎಸ್.ಯೋಗಾನಂದಕುಮಾರ್, ವೆಂಕಟೇಶ್, ಸತೀಶ್‌ಪಾಪಣ್ಣ, ಬಾಲಕೃಷ್ಣೇಗೌಡ, ರವಿಗೌಡ, ಶ್ರೀಗೌಡ, ಸುರೇಶ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts