More

    ಒಂದೇ ದಿನ ಮೂವರಲ್ಲಿ ಪಾಸಿಟಿವ್

    ಹಾವೇರಿ: ಕರೊನಾ ಮಹಾಮಾರಿ ಜಿಲ್ಲೆಯಲ್ಲಿ ವ್ಯಾಪಿಸುತ್ತಿದ್ದು, ಶುಕ್ರವಾರ ಒಂದೇ ದಿನ ಮೂವರಲ್ಲಿ ಅದು ಬೇರೆಬೇರೆ ಕಡೆಗಳಲ್ಲಿ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಭಯದ ವಾತಾವರಣ ನಿರ್ವಣಗೊಂಡಿದೆ. 19 ದಿನಗಳ ಅವಧಿಯಲ್ಲಿ ಒಟ್ಟು 6 ಜನರಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾದಂತಾಗಿದೆ.

    ಮೊದಲ ಪಾಸಿಟಿವ್ ಪ್ರಕರಣ ಸವಣೂರಿನ 32 ವರ್ಷದ ಪಿ-639ಗೆ ಮೇ 4ರಂದು ಪತ್ತೆಯಾಗಿತ್ತು. ಅದಾದ ಮರುದಿನ ಇದೇ ರೋಗಿಯ 40 ವರ್ಷದ ಸಹೋದರ ಪಿ-672ನಲ್ಲಿ ಸೋಂಕು ದೃಢಪಟ್ಟಿತ್ತು. ನಂತರ ಮೇ 11ರಂದು 25 ವರ್ಷದ ಪಿ-853 ಶಿಗ್ಗಾಂವಿ ತಾಲೂಕು ಅಂದಲಗಿ ಹಣ್ಣಿನ ವ್ಯಾಪಾರಿಯಲ್ಲಿ ಕಾಣಿಸಿಕೊಂಡಿತ್ತು.

    ಇದೀಗ ಮೇ 22ರಂದು ಸವಣೂರ ಕಂಟೇನ್ಮೆಂಟ್ ಜೋನ್​ನಲ್ಲಿ ಪಿ-639, 672 ಮನೆಯ ಪಕ್ಕ ವಾಸಿಸುತ್ತಿದ್ದ 55 ವರ್ಷದ ಮಹಿಳೆ ಪಿ-1689ಗೆ ಅವರ ಸಂಪರ್ಕದಿಂದ ಸೋಕು ತಗುಲಿದೆ. ಈ ಮಹಿಳೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಗಂಡ, ಮಗ, ಸೊಸೆ ಮೊಮ್ಮಗಳು ಸೇರಿ ನಾಲ್ವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಇನ್ನುಳಿದ ಸಂರ್ಪತರ ಪತ್ತೆ ಕಾರ್ಯ ನಡೆದಿದೆ.

    ಯಲವಿಗಿಯ 27 ವರ್ಷದ ಯುವತಿ ಪಿ-1690 ಬಿಎಸ್​ಸಿ ನರ್ಸಿಂಗ್ ಕೋರ್ಸ್ ಮುಗಿಸಿ 2 ತಿಂಗಳ ಹಿಂದೆ ಮುಂಬೈಗೆ ಸಮುದಾಯ ಆರೋಗ್ಯ ಅಧಿಕಾರಿ(ಸಿಎಚ್​ಒ) ತರಬೇತಿಗಾಗಿ ಮುಂಬೈಗೆ ಹೋಗಿದ್ದಳು. ಮೇ 18ರಂದು ಸೇವಾ ಸಿಂಧು ಆಪ್​ನಲ್ಲಿ ಪಾಸ್​ಪಡೆದು ಬಾಡಿಗೆ ಕಾರಿನಲ್ಲಿ ಮೇ 19ರಂದು ಯಲವಿಗಿಗೆ ಆಗಮಿಸಿದ್ದಳು. ಯುವತಿಯನ್ನು ಸವಣೂರಿನ ಮುರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿಟ್ಟು ಗಂಟಲ ದ್ರವ ಮಾದರಿಯನ್ನು ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗಿತ್ತು. ಶುಕ್ರವಾರ ಪಾಸಿಟಿವ್ ಬಂದಿದೆ. ಯುವತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ತಂದೆ, ತಾಯಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ದ್ವಿತೀಯ ಸಂರ್ಪತರನ್ನು ಪತ್ತೆ ಮಾಡಲಾಗುತ್ತಿದೆ.

    ಮೂರನೇ ವ್ಯಕ್ತಿ ಬಂಕಾಪುರದ 22 ವರ್ಷದ ಯುವಕ ಪಿ-1691 ಚಾಲಕನಾಗಿದ್ದು ಮೇ 5, 8 ಹಾಗೂ 12ರಂದು ಮುಂಬೈನ ವಾಸಿ ಮಾರುಕಟ್ಟೆಗೆ ಬಂಕಾಪುರದಿಂದ ಮೆಣಸಿನಕಾಯಿ ಲೋಡ್ ತೆಗೆದುಕೊಂಡು ಹೋಗಿದ್ದರಿಂದ ಸೋಂಕು ತಗುಲಿದೆ. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರ ಪತ್ತೆ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಸೋಂಕಿತ ವ್ಯಕ್ತಿ ಬೆಂಗಳೂರಿಗೆ: ಬಂಕಾಪುರದ ಸೋಂಕಿತ ವ್ಯಕ್ತಿ (ಪಿ-1691) ತಾನು ಮುಂಬೈಗೆ ಹೋಗಿ ಬಂದಿದ್ದಾಗಿ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದ. ಅಲ್ಲದೆ, ಅವನನ್ನು ಹೋಮ್ ಕ್ವಾರಂಟೈನ್ ಮಾಡಿ, ಗಂಟಲ ದ್ರವವನ್ನು ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯಂದ ಆತ ಟೆಸ್ಟ್ ವರದಿ ಬರುವ ಮುನ್ನವೇ ಮೇ 21ರಂದು ಬೆಂಗಳೂರು ಎಪಿಎಂಸಿಗೆ ಅನಾನಸ್ ಮಾರಾಟಕ್ಕೆ ಹೋಗಿದ್ದಾನೆ. ಮೇ 22ರಂದು ಪಾಸಿಟಿವ್ ವರದಿ ಬರುತ್ತಿದ್ದಂತೆಯೇ ಎಚ್ಚರಗೊಂಡ ಅಧಿಕಾರಿಗಳು ಆತನನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಂದ ಇದೀಗ ಕರೊನಾ ಸೋಂಕು ತಗುಲಿದ ವ್ಯಕ್ತಿ ಬೆಂಗಳೂರವರೆಗೂ ಸಂಚರಿಸಿದ್ದು, ಅನೇಕರಿಗೆ ಸೋಂಕು ತಗುಲಿರುವ ಸಂಶಯ ಮೂಡಿದೆ. ಅಲ್ಲದೆ, ಆತನ ಪ್ರಾಥಮಿಕ ಸಂಪರ್ಕದ ಮಾಹಿತಿಯೂ ಜಿಲ್ಲಾಡಳಿತಕ್ಕೆ ಇನ್ನೂವರೆಗೂ ಲಭಿಸಿಲ್ಲ.

    ಜಿಲ್ಲೆಯ ಎಲ್ಲ ಕೇಸ್​ಗೂ ಮುಂಬೈ ನಂಟು

    ಜಿಲ್ಲೆಯಲ್ಲಿ ಮೊದಲ ಮೂರು ಪಾಸಿಟಿವ್ ಪ್ರಕರಣಗಳು ಮುಂಬೈನ ಎಪಿಎಂಸಿಗೆ ಹೋಗಿ ಬಂದವರಿಗೆ ತಗುಲಿತ್ತು. ಹೊಸದಾಗಿ ಪತ್ತೆಯಾಗಿರುವ ಮೂರು ಕೇಸ್​ಗಳಲ್ಲಿ 2ಕ್ಕೆ ನೇರ ಮುಂಬೈ ನಂಟಿದ್ದರೆ, ಇನ್ನೊಂದಕ್ಕೆ ಮುಂಬೈನಿಂದ ಬಂದ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಪಿ-1691ಗೂ ಮುಂಬೈನ ಎಪಿಎಂಸಿಗೆ ಹೋಗಿ ಬಂದಿದ್ದರಿಂದಲೇ ಸೋಂಕು ಬಂದಿದ್ದರೆ, ಪಿ-1690 ಮುಂಬೈನಲ್ಲಿ ತರಬೇತಿಗೆ ಹೋಗಿ ಬಂದಿದ್ದರಿಂದ ಸೋಂಕು ತಗುಲಿದೆ. ಹೀಗಾಗಿ ಜಿಲ್ಲೆಯ 6 ಪಾಸಿಟಿವ್ ಕೇಸ್​ಗಳಿಗೂ ಮುಂಬೈನ ನಂಟು ಅಂಟಿದೆ.

    ಎರಡು ಕಡೆ ಸೀಲ್​ಡೌನ್…

    ಮೂರು ಪಾಸಿಟಿವ್ ಪ್ರಕರಣಗಳು ಪ್ರತ್ಯೇಕ ಮೂರು ಸ್ಥಳಗಳಲ್ಲಿ ಪತ್ತೆಯಾಗಿದ್ದರೂ ಪಿ-1689 ಈಗಾಗಲೇ ಸೀಲ್​ಡೌನ್ ಮಾಡಿದ್ದ ಸವಣೂರಿನ ಎಸ್​ಎಂ ಕೃಷ್ಣ ನಗರದಲ್ಲಿಯೇ ಪತ್ತೆಯಾಗಿರುವುದರಿಂದ ಅಲ್ಲಿ ಸೀಲ್​ಡೌನ್ ಮಾಡುವ ಅವಶ್ಯಕತೆ ಇಲ್ಲ. ಈ ಪ್ರಕರಣ ಇಲ್ಲಿನ ಜನತೆಗೆ ಇದು ಶಾಕ್ ನೀಡಿದ್ದು, ಸೀಲ್​ಡೌನ್ ವಾಸ ಇನ್ನಷ್ಟು ದಿನ ಮುಂದುವರಿಯುವುದು ನಿಶ್ಚಿತವಾಗಿದೆ. ಪಿ-1690 ಮುಂಬೈನಿಂದ ಯಲವಿಗಿಯಲ್ಲಿನ ತನ್ನ ಮನೆಗೆ ಬಂದು ಕ್ವಾರಂಟೈನ್ ಆಗಿದ್ದರಿಂದ ಯಲವಿಗಿ ಗ್ರಾಮದಲ್ಲಿ ರೋಗಿಯ ಮನೆಯ ಸುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್​ಡೌನ್ ಮಾಡುವ ಕಾರ್ಯವನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಅದರಂತೆ ಬಂಕಾಪುರದಲ್ಲಿ ಪಿ-1691 ವಾಸವಿದ್ದ ಅವರ ಮನೆಯ ಸುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗುತ್ತಿದೆ. ಈ ಎರಡು ಪ್ರದೇಶದ 7 ಕಿಮೀ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ಆಯಾ ತಾಲೂಕು ತಹಸೀಲ್ದಾರ್​ರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ. ಸೀಲ್​ಡೌನ್ ಪ್ರದೇಶದವರಿಗೆ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts