More

    ಒಂದೇ ಕುಟುಂಬ, ವ್ಯಕ್ತಿಗೆ ಆದ್ಯತೆ ಬೇಡ


    ಬೆಳಗಾವಿ: ವೈಯಕ್ತಿಕ ವರ್ಚಸ್ಸು , ಜನಸಂಪರ್ಕ ಇಲ್ಲದೆ ಕೇತ್ರಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳ ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ,ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನಲ್ಲಿ ಮತಯಾಚನೆ ಮಾಡುವುದಾದರೆ ಆ ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಿ ಎಂದು ಬಿಜೆಪಿಯ ವಿವಿಧ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.

    ನಗರದ ಧರ್ಮನಾಥ ಭವನದಲ್ಲಿ ಶುಕ್ರವಾರ ಜರುಗಿದ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಯ ಆಂತರಿಕ (ಗೌಪ್ಯ) ಮತದಾನದ ಬಳಿಕ ಅಳಲು ತೋಡಿಕೊಂಡ ಮುಖಂಡರು, ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ 2004 ರಿಂದ 2023ರವರೆಗೆ ಒಂದೇ ವ್ಯಕ್ತಿ, ಒಂದೇ ಕುಟುಂಬಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಕ್ಷೇತ್ರಗಳಲ್ಲಿ ಎರಡನೇ ಹಂತದ ನಾಯಕರು ಬೆಳೆಯಲು ಅವಕಾಶ ಸಿಗುತ್ತಿಲ್ಲ. ಪರಿಣಾಮ ಹುಕ್ಕೇರಿ, ಸವದತ್ತಿ, ರಾಮದುರ್ಗ,ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ರಾಯಬಾಗ, ಚಿಕ್ಕೋಡಿ, ಗೋಕಾಕ, ಅರಬಾವಿ, ಅಥಣಿ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕರು ಇಲ್ಲದೆ ಪಕ್ಷವು ಸಮಸ್ಯೆ ಎದುರಿಸುವ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದರು.

    ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಎರಡು ದಶಕಗಳಿಂದ ಪಕ್ಷ ಸಂಘಟನೆಗಾಗಿ ನಿರಂತರವಾಗಿ ದುಡಿಯುತ್ತಿರುವ ಹಿರಿಯ ಕಾರ್ಯಕರ್ತರಿಗೆ ಈ ಬಾರಿ ಚುನಾವಣೆಯಲ್ಲಿ ಕನಿಷ್ಠ 7 ರಿಂದ 8 ಕ್ಷೇತ್ರಗಳಲ್ಲಿ ಅವಕಾಶ ನೀಡಿಬೇಕು. ಒಂದೇ ವ್ಯಕ್ತಿ, ಆ ವ್ಯಕ್ತಿಯ ಕುಟುಂಬದರನ್ನೇ ಬೆಳಸುವುದಾದರೆ ಪಕ್ಷ ಸಂಘಟಿಸಿ ಏನೂ ಪ್ರಯೋಜನ? ಸಾಮಾನ್ಯ ಕಾರ್ಯಕರ್ತರಿಗೂ ಸ್ಥಾನಮಾನ ಸಿಗಬೇಕು. ಪ್ರತಿ ಚುನಾವಣೆಯಲ್ಲಿ ಅದೇ ಮುಖಗಳಿಗೆ ಮಣೆ ಹಾಕುವುದು ಸರಿಯಲ್ಲ. ಪಕ್ಷ ಸಂಘಟನೆ, ಬಲಿಷ್ಠಗೊಳಿಸಲು ಆಯಾ ಕ್ಷೇತ್ರದಲ್ಲಿ ಪರ್ಯಾಯ ನಾಯಕರನ್ನು ಬೆಳಸಬೇಕು. ಇಲ್ಲದಿದ್ದರೆ ಕುಟುಂಬ ರಾಜಕಾರಣಕ್ಕೆ ಪಕ್ಷ ಸೀಮಿತಗೊಳ್ಳುವ ಸಾಧ್ಯತೆಯಿದೆ ಎಂದು ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾದ ಪದಾಧಿಕಾರಿಗಳು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದರು.

    ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ, ಸಂಸದೆ ಮಂಗಲ ಅಂಗಡಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಮಹಾದೇವಪ್ಪ ಯಾದವಾಡ, ಅನಿಲ ಬೆನಕೆ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಹಾನಗರ ಉಸ್ತುವಾರಿ ರಮೇಶ ದೇಶಪಾಂಡೆ, ಅರವಿಂದ ಪಾಟೀಲ ಇತರರಿದ್ದರು.

    ಪ್ರತಿ ಕ್ಷೇತ್ರದಿಂದ 130 ಜನರಿಂದ ಮತದಾನ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಮೂವರಂತೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಸೂಚಿಸಿ ಪ್ರಾಶಸ್ತ್ಯದ ಗೌಪ್ಯ ಮತ ಚಲಾಯಿಸುವ ಪ್ರಕ್ರಿಯೆ ಜರುಗಿತು. ಹಾಲಿ, ಮಾಜಿ ಶಾಸಕರು, ಸಂಸದರು, ಜಿಪಂ ಸದಸ್ಯರು, ಸ್ಥಳೀಯ ಸಂಸ್ಥೆಗಳ ಹಾಲಿ ಸದಸ್ಯರು, ವಿವಿಧ ಮೋರ್ಚಾಗಳ ಜಿಲ್ಲಾಧ್ಯಕ್ಷರು, ಮಹಾಶಕ್ತಿ, ಶಕ್ತಿ ಕೇಂದ್ರಗಳ ಪದಾಧಿಕಾರಿಗಳು, ಜಿಲ್ಲೆ ಪ್ರಕೋಷ್ಠಗಳ ಸಂಚಾಲಕರು ಸೇರಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ 120 ರಿಂದ 130 ಜನರು ಮತ ಚಲಾವಣೆ ಮೂಲಕ ತಮ್ಮ ಅಭಿಪ್ರಾಯ ದಾಖಲಿಸಿದರು. ಗೌಪ್ಯ ಮತದಾನದ ವೇಳೆ ಮೂರು ಜನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಲಿ, ಮಾಜಿ ಶಾಸಕರಿಗೆ 2 ಮತ್ತು 3ನೇ ಪ್ರಾಶಸ್ತ್ಯ ನೀಡಲಾಗಿದೆ. ಹೊಸ ಮುಖಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ವಿವಿಧ ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.

    ಮಹಿಳಾ ಅಭ್ಯರ್ಥಿಗಳೇ ಇಲ್ಲ?

    ಈ ಬಾರಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಕಲ್ಪಿಸಿಲ್ಲ. ಪುರುಷ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪಕ್ಷಕ್ಕೆ ಮಹಿಳಾ ಸಂಘಟನೆ ಹೆಚ್ಚು ಶಕ್ತಿ ತುಂಬಿದೆ. ಕನಿಷ್ಠ ಎರಡರಿಂದ ಮೂರು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಆದರೆ, ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರಿಗೆ ಅವಕಾಶ ಸಿಗುತ್ತಿಲ್ಲ ಎಂದು ಮಹಿಳಾ ಪದಾಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts