More

    ಏಕೀಕರಣದಲ್ಲಿ ಉ.ಕ ಜನರ ಪಾತ್ರ ಅಪಾರ

    ಚಿಕ್ಕೋಡಿ: ಕನ್ನಡ ಭಾಷೆ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತ ಬಂದಿದ್ದರೂ ಕನ್ನಡದ ಕಿಚ್ಚು ಹೆಚ್ಚುತ್ತ ಬಂದಿದ್ದರಿಂದ ಅಖಂಡ ಕರ್ನಾಟಕ ನಿರ್ಮಾಣವಾಗಿದೆ ಎಂದು ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತಿಳಿಸಿದರು.

    ಇಲ್ಲಿನ ಸಿಎಲ್​ಇ ಸಂಸ್ಥೆಯ ಆವರಣದಲ್ಲಿ ಬುಧವಾರದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಉತ್ತರ ಕರ್ನಾಟಕ ಜನತೆಯ ಪಾತ್ರ ಬಹುಮುಖ್ಯವಾಗಿತ್ತು ಎಂದರು.

    ಹಿಂದಿನ ದಿನಗಳಲ್ಲಿ ಮೈಸೂರು ಪ್ರಾಂತದವರಿಗೆ ಮೈಸೂರು ಬೇಕಾಗಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿನ ಜನ ಅಖಂಡ ಕರ್ನಾಟಕ ಕನಸು ಕಂಡವರು. ಸರ್ಕಾರದ ಆಡಳಿತದಲ್ಲಿ ಕನ್ನಡ ಉಳಿದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ. ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಕೃಷ್ಣಾ ಬಚಾವತ್​ ಯೋಜನೆಯಡಿ ನಮ್ಮ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು. ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್​ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಭಾಷಾವಾರು ಪ್ರಾಂತ ರಚನೆಯಿಂದಲೂ ಉತ್ತರ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ ವಂಚಿತವಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.

    ಕೃಷ್ಣಾ ಬಚಾವತ್​ ತೀರ್ಪಿನ ಪ್ರಕಾರ ನಮ್ಮ ನೀರನ್ನು ಬಳಕೆ ಮಾಡಿಕೊಳ್ಳಲು ಕ್ರಮಕೈಗೊಳ್ಳಬೇಕು. ನನೆಗುದಿಗೆ ಬಿದ್ದಿರುವ ಗಡಿಭಾಗದ ಏತ ನೀರಾವರಿ ಯೋಜನೆಗಳಿಗೆ ಈ ಅಧಿವೇಶನದಲ್ಲಿ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

    ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾ ಅಧ್ಯೆ ಮಂಗಲಾ ಮೆಟಗುಡ್ಡ ಮಾತನಾಡಿ, ಚಿಕ್ಕೋಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಕಟ್ಟಡ ನಿರ್ಮಾಣಕ್ಕೆ ಪುರಸಭೆ ಈಗಾಗಲೇ 10 ಗುಂಟೆ ಜಮೀನು ನೀಡಿದ್ದು, ಕಟ್ಟಡ ನಿರ್ಮಾಣ ಕಾಮಗಾರಿಗೆ 1.5 ಕೋಟಿ ರೂ. ಅನುದಾನ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

    ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ ಮಾತನಾಡಿದರು. ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭರತೇಶ ಬನವಣೆ, ಪುರಸಭೆ ಅಧ್ಯಕ್ಷ ಪ್ರವಿಣ ಕಾಂಬಳೆ, ಡಾ.ದಯಾನಂದ ನೂಲಿ, ಮಹಾಂತೇಶ ಮೆಣಸಿನಕಾಯಿ ಇತರರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಡಾ. ಸುರೇಶ ಉಕ್ಕಲಿ ಸ್ವಾಗತಿಸಿದರು. ಸುಧೀರ ಡೊಣವಾಡೆ, ಶಂಕರ ಎಂಟೆತ್ತಿನವರ ನಿರೂಪಿಸಿದರು. ಎಂ.ವೈ.ಮೆಣಸಿನಕಾಯಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts