More

    ಎಸ್ಸೆಸ್, ಎಸ್ಸೆಸ್ಸೆಂ ಅಧಿಕೃತ ಪ್ರಚಾರ ಶುರು- ಆನೆಕೊಂಡ, ಶಾಮನೂರಲ್ಲಿ ಮತ ಯಾಚನೆ 

    ದಾವಣಗೆರೆ:ಕಾಂಗ್ರೆಸ್‌ನ ಮೊದಲ ಹಂತದ ಪಟ್ಟಿ ಬಿಡುಗಡೆಯಲ್ಲಿ, ದಾವಣಗೆರೆ ದಕ್ಷಿಣ-ಉತ್ತರ ಕ್ಷೇತ್ರಗಳಲ್ಲಿ ಸ್ಥಾನ ಪಡೆದ ಡಾ.ಶಾಮನೂರು ಶಿವಶಂಕರಪ್ಪ, ಎಸ್‌ಎಸ್.ಮಲ್ಲಿಕಾರ್ಜುನ್ ಸೋಮವಾರ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದರು.
    93 ವರ್ಷದ ಶಾಮನೂರು ಶಿವಶಂಕರಪ್ಪ ಬೆಳಗ್ಗೆ ಆನೆಕೊಂಡದ ಐತಿಹಾಸಿಕ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರ ಶುರು ಮಾಡಿದರು. ಕೆಲ ಸಮಯ ಅವರೊಂದಿಗೆ ಪುತ್ರ ಎಸ್‌ಎಸ್.ಮಲ್ಲಿಕಾರ್ಜುನ್ ಜತೆಗಿದ್ದರು.
    ಆನೆಕೊಂಡ, ಮಟ್ಟಿಕಲ್, ಕೊರಚರಹಟ್ಟಿ, ಮಂಡಕ್ಕಿ ಭಟ್ಟಿ ಲೇಔಟ್, ಇಮಾಂ ನಗರ ಇತ್ಯಾದಿ ಕಡೆಗಳಲ್ಲಿ ವಿಶೇಷ ತೆರೆದ ವಾಹನದ ಮೂಲಕ ತೆರಳಿ, ಮತದಾರರತ್ತ ಕೈ ಮುಗಿದ ಶಿವಶಂಕರಪ್ಪ, ಮೂರು ತಾಸಿಗೂ ಹೆಚ್ಚು ಕಾಲ ಪ್ರಚಾರಕಾರ್ಯ ನಡೆಸಿದರು. ಮುಖಂಡರಾದ ದಿನೇಶ್ ಕೆ ಶೆಟ್ಟಿ, ಚಮನ್‌ಸಾಬ್, ಅಯೂಬ್ ಪೈಲ್ವಾನ್ ಮೊದಲಾದವರು ಪಾಲ್ಗೊಂಡಿದ್ದರು.
    ಉತ್ತರದಲ್ಲಿ ಅಬ್ಬರ:
    ಶಾಮನೂರು ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಬ್ಬರದ ಪ್ರಚಾರ ನಡೆಸಿದರು. ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸಾಥ್ ನೀಡಿದರು.
    ಅಭಿಮಾನಿಗಳು ಪಟಾಕಿ ಸಿಡಿಸಿದ್ದಲ್ಲದೆ, ಎಸ್ಸೆಸ್ಸೆಂ ಅವರಿಗೆ ಗುಲಾಬಿ ಪುಷ್ಪವೃಷ್ಟಿಗರೆದರು. ಸಂಜೆಯವರೆಗೂ ಗ್ರಾಮದ ಗಲ್ಲಿ ಗಲ್ಲಿಯಲ್ಲೂ ಮನೆ ಮನೆಗೆ ತೆರಳಿ ಮತ ಯಾಚಿಸಿದ ಎಸ್ಸೆಸ್ಸೆಂ ನಂತರ ಕುಂದುವಾಡದತ್ತ ಪಯಣ ನಡೆಸಿದರು. ಮಾಜಿ ಶಾಸಕ ಎಚ್.ಪಿ.ರಾಜೇಶ್, ಗಡಿಗುಡಾಳು ಮಂಜುನಾಥ್, ಎ.ನಾಗರಾಜ್, ಅಬ್ದುಲ್ ಲತೀಫ್, ಕೆ.ಜಿ.ಶಿವಕುಮಾರ ಇತರೆ ಮುಖಂಡರಿದ್ದರು. ಕಾರ್ಯಕರ್ತರು, ಮುಖಂಡರ ಕಾರು, ವಾಹನಗಳ ನಿಲುಗಡೆಯಿಂದಾಗಿ ಗ್ರಾಮದ ಪ್ರವೇಶ ದ್ವಾರದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts