More

    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ ಸನ್ನದ್ಧ

    ಗದಗ: ಜೂ. 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತ ಎಲ್ಲ ಮುಂಜಾಗ್ರತಾ ಕೈಗೊಳ್ಳುವ ಮೂಲಕ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 58 ಪರೀಕ್ಷಾ ಕೇಂದ್ರಗಳಿವೆ. 7078 ಬಾಲಕರು, 6856 ಬಾಲಕಿಯರು ಸೇರಿ ಹೆಣ್ಣು ಒಟ್ಟು 13,964 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ದೈಹಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಪಕ್ಕದಲ್ಲಿಯೇ ಹೆಚ್ಚುವರಿಯಾಗಿ 7 ಉಪಕೇಂದ್ರಗಳನ್ನು ಸಿದ್ಧತೆಯಲ್ಲಿ ಇಟ್ಟುಕೊಳ್ಳಲಾಗಿದೆ.

    ಗದಗ ಶಹರದಲ್ಲಿ 14, ಗದಗ ಗ್ರಾಮೀಣ 8, ಮುಂಡರಗಿ 8, ನರಗುಂದ 6, ರೋಣ 12, ಶಿರಹಟ್ಟಿ 10 ಸೇರಿ 58 ಪರೀಕ್ಷಾ ಕೇಂದ್ರಗಳಿವೆ. ಗದಗ ಗ್ರಾಮೀಣದಲ್ಲಿ 2, ಮುಂಡರಗಿ 2, ಶಿರಹಟ್ಟಿ 3 ಸೇರಿ ಒಟ್ಟು 7 ಉಪಕೇಂದ್ರಗಳಿವೆ. ಗದಗ ಶಹರದಲ್ಲಿ 217, ಗದಗ ಗ್ರಾಮೀಣ 154, ಮುಂಡರಗಿ 106, ನರಗುಂದ 84, ರೋಣ 189, ಶಿರಹಟ್ಟಿ 155 ಸೇರಿ ಒಟ್ಟು ಜಿಲ್ಲೆಯಲ್ಲಿ 905 ಬ್ಲಾಕ್​ಗಳನ್ನು ಗುರುತಿಸಲಾಗಿದೆ.

    ವಿಶೇಷ ಕ್ರಮಗಳು ಜಾರಿ:

    ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರತಿ ಕೇಂದ್ರಕ್ಕೆ ಮೊಬೈಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅನುದಾನಿತ ಕೇಂದ್ರಗಳಾಗಿದ್ದಲ್ಲಿ ಅದೇ ಸಂಸ್ಥೆಯ ಮುಖ್ಯ ಗುರುಗಳನ್ನು ಕೋ ಆರ್ಡಿನೇಟರ್ ಎಂದು ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳು ಬೆಳಗ್ಗೆ 9.30ಕ್ಕೆ ಪರೀಕ್ಷೆ ಕೇಂದ್ರದಲ್ಲಿ ಹಾಜರಿದ್ದು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. 100 ಮಕ್ಕಳಿಗೆ ಒಂದು ಆರೋಗ್ಯ ಪರಿಶೀಲನಾ ತಂಡವನ್ನು ನೇಮಿಸಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳು, ಉಪಕೇಂದ್ರಗಳಲ್ಲಿ ಕೊಠಡಿ, ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲ ಮಕ್ಕಳಿಗೆ ಮಾಸ್ಕ್ ಪೂರೈಸುವ ಕಾರ್ಯ ನಡೆದಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಜ್ವರದಿಂದ ಬಳಲುತ್ತಿರುವ ಮಕ್ಕಳು ಇಲ್ಲವೇ ಕಂಟೇನ್ಮೆಂಟ್ ಪ್ರದೇಶದ ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು. ಎಲ್ಲ 65 ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

    ಈ ಮೊದಲು ಪರೀಕ್ಷಾ ಕೇಂದ್ರಗಳಲ್ಲಿನ ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಇದೀಗ ಕರೊನಾ ತಡೆಗಟ್ಟಲು ದೈಹಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಂದು ಕೊಠಡಿಯಲ್ಲಿ ಕೇವಲ 18 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    ಕರೊನಾ ಭೀತಿಯಿರುವ ಈ ಸಮಯದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಖ್ಯವಾಗಿ ಪರೀಕ್ಷಾರ್ಥಿಗಳಿಗೆ ಮೂಲಸೌಕರ್ಯ, ಪರೀಕ್ಷಾ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕರೊನಾ ಹರಡದಂತೆ ತಡೆಯಲು ಪ್ರತಿ ಕೇಂದ್ರಗಳಲ್ಲಿಯೂ ನೀರು, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿ ಮಾಸ್ಕ್ ವಿತರಿಸಲಾಗುವುದು.

    ಎನ್.ಎಚ್. ನಾಗೂರ, ಡಿಡಿಪಿಐ ಗದಗ

    ಅಚ್ಚುಕಟ್ಟು ಸಾರಿಗೆ ವ್ಯವಸ್ಥೆ

    ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಯಾವುದೇ ತೊಂದರೆ ಉಂಟಾಗದಂತೆ ಸಾರಿಗೆ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ರೂಪಿಸಲಾಗಿದೆ. ಜಿಲ್ಲೆಯಲ್ಲಿ 13964 ವಿದ್ಯಾರ್ಥಿಗಳ ಪೈಕಿ 5313 ವಿದ್ಯಾರ್ಥಿಗಳು ಕಾಲ್ನಡಿಗೆಯಿಂದ ಪರೀಕ್ಷಾ ಕೇಂದ್ರಕ್ಕೆ ಬರಲಿದ್ದಾರೆ. 3925 ವಿದ್ಯಾರ್ಥಿಗಳನ್ನು ಪಾಲಕರೇ ಕರೆತಂದು ಕೇಂದ್ರಕ್ಕೆ ಬಿಡುವರು. 1527 ವಿದ್ಯಾರ್ಥಿಗಳು ಆಟೋ ಮೂಲಕ ಬರುತ್ತಾರೆ, 232 ವಿದ್ಯಾರ್ಥಿಗಳು ಸೈಕಲ್ ಮೂಲಕ ಆಗಮಿಸಲಿದ್ದಾರೆ. 99 ವಿದ್ಯಾರ್ಥಿಗಳು ಶಾಲಾ ವಾಹನಗಳಲ್ಲಿ, ಸಾರಿಗೆ ಬಸ್ ಮೂಲಕ 2232 ವಿದ್ಯಾರ್ಥಿಗಳು ಹಾಗೂ ಖಾಸಗಿ ವಾಹನಗಳಲ್ಲಿ 572 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts