More

    ಎಳ್ಳಮಾವಾಸ್ಯೆಗೆ ಭರ್ಜರಿ ತಯಾರಿ

    ಗಜೇಂದ್ರಗಡ: ಉತ್ತರ ಕರ್ನಾಟಕದಲ್ಲಿ ಎಳ್ಳಮಾವಾಸ್ಯೆ ರೈತರ ಪಾಲಿಗೆ ಸಂಭ್ರಮದ ಹಬ್ಬ. ರೈತ ಮಹಿಳೆಯರು ಬಗೆ ಬಗೆಯ ಖಾದ್ಯ ಮಾಡಿಕೊಂಡು ಭೂತಾಯಿಗೆ ಪೂಜಿಸಿ, ಸಹಭೋಜನ ಮಾಡಿ ಸಂಭ್ರಮಿಸುತ್ತಾರೆ. ಎಳ್ಳಮಾವಾಸ್ಯೆ ದಿನದಂದು ರೈತರು ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಚರಗ ಚೆಲ್ಲುತ್ತಾರೆ.

    ಏನಿದು ಚರಗ?: ಎಳ್ಳಮಾವಾಸ್ಯೆ ದಿನ ರೈತರು, ರೈತ ಮಹಿಳೆಯರು ಮಕ್ಕಳು ಸೇರಿದಂತೆ ಮನೆ ಮಂದಿ ಚಕ್ಕಡಿ, ಟ್ರಾ್ಯಕ್ಟರ್, ಆಟೋಗಳಲ್ಲಿ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗುತ್ತಾರೆ. ಎಳ್ಳು ಹಚ್ಚಿದ ರೊಟ್ಟಿ, ಎಳ್ಳು ಕಡುಬು, ಕಡಲೆಗಡುಬು, ಬದನೆಕಾಯಿ ಪಲ್ಲೆ, ಚಟ್ನಿಯಂತಹ ವಿವಿಧ ಖಾದ್ಯಗಳನ್ನು ಕಟ್ಟಿಕೊಂಡು ಹೊಲಕ್ಕೆ ಹೋಗಿ, ಬೆಳೆದು ನಿಂತಿರೋ ಜೋಳ, ಕಡಲೆ, ಸೇರಿದಂತೆ ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಾಂಡವರು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ’ ಎಂದು ಹೇಳುತ್ತ ಖಾದ್ಯಗಳನ್ನು ಹೊಲದ ತುಂಬೆಲ್ಲ ಚೆಲ್ಲುವುದೇ ಚರಗ.

    ವೈಜ್ಞಾನಿಕ ಕಾರಣ ಏನು: ಎಳ್ಳಮಾವಾಸ್ಯೆ ಹೊತ್ತಿಗೆ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ. ಅದರಲ್ಲೂ ಜೋಳದ ಮಧ್ಯ ಕಡಲೆ ಬೆಳೆಗೆ ಕಾಯಿಕೊರಕ ಹುಳ ಬಿದ್ದು ಹಾನಿ ಮಾಡುತ್ತದೆ. ಈ ಹೊತ್ತಲ್ಲಿ ಚರಗ ಚೆಲ್ಲುವುದರಿಂದ ಖಾದ್ಯ ತಿನ್ನಲು ಹಕ್ಕಿಗಳು ಜೋಳ ಮಧ್ಯೆ ಕೆಳಗಿಳಿಯುತ್ತವೆ. ಆಗ ಖಾದ್ಯದ ಜೊತೆಗೆ ಕಡಲೆಗೆ ಬಿದ್ದಿರೋ ಕಾಯಿಕೊರಕ ಹುಳುಕಣ್ಣಿಗೆ ಬೀಳುತ್ತವೆ. ಆಗ ಹಕ್ಕಿಗಳು ಕಾಯಿಕೊರಕದ ಹುಳುವನ್ನು ತಿನ್ನುತ್ತವೆ. ಇದರಿಂದ ಕಾಯಿಕೊರಕದ ಹುಳುಗಳ ನಿಯಂತ್ರಣವಾಗುತ್ತದೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಹಬ್ಬವನ್ನು ತಲಾಂತರದಿಂದ ಆಚರಣೆ ಮಾಡಲಾಗುತ್ತಿದೆ.

    ಒಂದಾನೊಂದು ಕಾಲದಲ್ಲಿ ಎಳ್ಳು ಅಮವಾಸ್ಯೆ ದಿನದಂದು ಮಾರುವೇಷದ ಹೆಣ್ಣು ದೇವತೆ ರೈತನೊಬ್ಬನ ಹೊಲಕ್ಕೆ ಬಂದು ಊಟ ಬಡಿಸಲು ಕೇಳುತ್ತಾಳೆ. ಆ ರೈತ ಊಟ ಮಾಡಿಸದೇ ಕಳುಹಿಸಿದ್ದಕ್ಕೆ ಅವಳ ಕಾಡಿಗೆ ಕಣ್ಣುಗಳಿಂದ ಕಣ್ಣೀರು ಹರಿದು ಭೂಮಿಗೆ ಬೀಳುತ್ತದೆ. ಪರಿಣಾಮವಾಗಿ ಮರುದಿನ ಆ ಭೂಮಿಯಲ್ಲಿನ ಜೋಳದ ತೆನೆಗಳೆಲ್ಲ ಕಾಡಿಗೆ ತೆನೆಗಳಾಗುತ್ತವೆ. ಹೀಗಾಗಿ ಈ ಹಬ್ಬದ ದಿನ ಹೊಲಕ್ಕೆ ಬಂದವರಿಗೆಲ್ಲ ಊಟ ಮಾಡಿಸುವುದು, ತಾವೂ ತಂದಿದ್ದ ನೈವೇದ್ಯ ಖಾದ್ಯಗಳನ್ನು ಹೊಲದ ತುಂಬ ಚರಗ ಚೆಲ್ಲುವುದು ಒಂದು ಸಂಪ್ರದಾಯವಾಗಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ.

    | ವೀರಯ್ಯ ದಂಡಿನಮಠ ರೈತ ಗಜೇಂದ್ರಗಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts