More

    ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲ

    ಹಾನಗಲ್ಲ: ರೈತರ ಹಿತ ಕಾಯುವ ನಿಟ್ಟಿನಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಚರ್ಚೆಯ ನಂತರ ಅನುಷ್ಠಾನಗೊಳ್ಳಲಿದೆ. ಕೇಂದ್ರ ಸರ್ಕಾರ ರೈತರ ಪರವಾಗಿ ಕಾಯ್ದೆ ತರುತ್ತಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಪಟ್ಟಣದಲ್ಲಿ ರೈತ ಸಂಘಟನೆ ಪದಾಧಿಕಾರಿಗಳೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

    ಯಾವುದೇ ಸರ್ಕಾರ ರೈತರ ವಿರುದ್ಧವಾದ ಕಾನೂನು ಜಾರಿಗೊಳಿಸಲು ಬಯಸುವುದಿಲ್ಲ. ರೈತರಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸುತ್ತದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ನ್ಯೂನತೆಗಳಿದ್ದಲ್ಲಿ ಸರಿಪಡಿಸಲೂ ಸಾಧ್ಯವಿದೆ. ತಿದ್ದುಪಡಿಯಿಂದಾಗುವ ಪೂರಕ-ಮಾರಕಗಳ ಕುರಿತು ರೈತ ಸಮುದಾಯದ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಲಾಗುತ್ತದೆ. 2022ರೊಳಗಾಗಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಖಾಸಗಿ ಮಾರುಕಟ್ಟೆಗಳು ತೆರೆದುಕೊಳ್ಳುವ ಮೂಲಕ ರೈತರಿಗೆ ಲಾಭ ದೊರೆಯಲೆಂಬ ಉದ್ದೇಶ ಸರ್ಕಾರದ್ದು. ಇದಕ್ಕೆ ಪೂರಕವಾಗಿ ಈ ತಿದ್ದುಪಡಿ ಮಾಡಲಾಗುತ್ತಿದೆ ಎಂದರು.

    ಎಪಿಎಂಸಿ ಮಾರುಕಟ್ಟೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ. ಮೆಟ್ರೋ, ರಿಲಯನ್ಸ್​ಗಳಂಥ ಬೃಹತ್ ಕಂಪನಿಗಳು ಆಹಾರ ಧಾನ್ಯಗಳ ಖರೀದಿಗೆ ರೈತರ ಮನೆ ಬಾಗಿಲಿಗೆ ಬರುತ್ತವೆ. ಕೃಷಿಯನ್ನೂ ಕೈಗಾರಿಕೆ ಎಂದು ಪರಿಗಣಿಸಿ ಕೃಷಿ ಉತ್ಪನ್ನಗಳಿಗೂ ಯೋಗ್ಯ ಬೆಲೆ ದೊರಕುವಂಥ ವಾತಾವರಣ ಸೃಷ್ಟಿಯಾಗಲಿದೆ ಎಂದರು.

    ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಾಯ್ದೆ ತಿದ್ದುಪಡಿಗಿಂತ ಮೊದಲು ರೈತರೊಂದಿಗೆ ಸರ್ಕಾರ ರ್ಚಚಿಸಬೇಕಿತ್ತು. ತರಾತುರಿಯಲ್ಲಿ ಕೋವಿಡ್-19 ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿರಲಿಲ್ಲ. ಬಿತ್ತನೆ ಬೀಜಗಳ ಕಂಪನಿಗಳು ಬೀಜೋತ್ಪಾದನೆ ಮಾಡುವ ರೈತರಿಗಿಂತ 4 ಪಟ್ಟು ಹೆಚ್ಚು ಲಾಭ ಪಡೆಯುತ್ತಿವೆ. ಇಲ್ಲೂ ಅದೇ ಪರಿಸ್ಥಿತಿ ಎದುರಾಗಬಾರದು. ಎಂಎನ್​ಸಿ ಕಂಪನಿಗಳ ಮೇಲೆ ಖರೀದಿ ಪ್ರಕ್ರಿಯೆಯಲ್ಲಿ ಸರ್ಕಾರದ ಹಿಡಿತವಿರುವಂತೆ ತಿದ್ದುಪಡಿಯಲ್ಲಿ ಅಳವಡಿಸಬೇಕು ಎಂದು ಸಲಹೆ ಮಾಡಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕಾನೂನು ತಿದ್ದುಪಡಿ ರೈತ ಸಮುದಾಯದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಖಾಸಗಿ ಕಂಪನಿಗಳು ಮೊದಲ ಶ್ರೇಣಿಯ ಕೃಷಿ ಉತ್ಪನ್ನಗಳನ್ನು ಮಾತ್ರ ಖರೀದಿಸಿದರೆ ಉಳಿದದ್ದನ್ನು ಎಲ್ಲಿ ಮಾರುವುದು?. ಸುದೀರ್ಘ ಚರ್ಚೆಯ ನಂತರವಷ್ಟೇ ತಿದ್ದುಪಡಿ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

    ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿದರು. ಶಾಸಕ ಸಿ.ಎಂ. ಉದಾಸಿ, ರೈತ ಸಂಘದ ಪದಾಧಿಕಾರಿಗಳಾದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಅಧ್ಯಕ್ಷರಾದ ಪ್ರಭುಗೌಡ ಪ್ಯಾಟಿ, ಶಂಕರಪ್ಪ ಕಡೂರ, ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಶಂಭುಗೌಡ ಪಾಟೀಲ, ಮಹೇಶ ವಿರುಪಣ್ಣನವರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ರಾಜು ಗೌಳಿ, ಕಲ್ಯಾಣಕುಮಾರ ಶೆಟ್ಟರ ಇತರರಿದ್ದರು.

    ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ಇನ್ನೂ ಚರ್ಚೆ ನಡೆಯುತ್ತದೆ. ನಿರಂತರವಾಗಿ ಗೋವಿನಜೋಳ ಬೆಂಬಲ ಬೆಲೆಯ ಖರೀದಿ ಕೇಂದ್ರ ತೆರೆಯುವಂತೆ ಉತ್ತರ ಕರ್ನಾಟಕದ 30 ಶಾಸಕರು ಹಾಗೂ ಸಂಸದರು ಸರ್ಕಾರದ ಮೇಲೆ ಒತ್ತಡ ಹೇರಲಿದ್ದೇವೆ. ವಿದೇಶಗಳ ಆಯಾತ- ನಿರ್ಯಾತ ಕೋವಿಡ್​ನಿಂದಾಗಿ ಸ್ಥಗಿತಗೊಂಡಿವೆ. ಸ್ಥಳೀಯ ಮಾರುಕಟ್ಟೆಗಳಲ್ಲೇ ಉತ್ಪನ್ನಗಳ ಮಾರಾಟ ಮಾಡಬೇಕಿದೆ.
    | ಶಿವಕುಮಾರ ಉದಾಸಿ, ಸಂಸದ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts