More

    ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕಾರ್ಯಾರಂಭಕ್ಕೆ ದಿನಗಣನೆ

    ಸಕಲೇಶಪುರ:  ಬಹುನಿರೀಕ್ಷಿತ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕಾರ್ಯಾರಂಭಕ್ಕೆ ದಿನಗಣನೆ ಆರಂಭವಾಗಿದೆ.

    ಹೌದು ಈ ಬಾರಿ ಮಳೆಗಾಲದಲ್ಲಿ ಸತಾಯಗತಾಯ ಪ್ರಯೋಗಿಕವಾಗಿ ನೀರು ಹರಿಸಲೆ ಬೇಕು ಎಂಬ ದೃಡ ಸಂಕಲ್ಪ ಮಾಡಿದ್ದ ಇಲಾಖೆ ಇದಕ್ಕಾಗಿ     ತಾಂತ್ರಿಕ ಸಮಸ್ಯೆಯಿಂದ ಬಾಕಿ ಉಳಿದಿದ್ದ ಹಾಗೂ ಜಮೀನು ಹಕ್ಕುದಾರರ ಸಮಸ್ಯೆ ಯಿಂದ ನಿಲುಗಡೆಯಾಗಿದ್ದ  ಪೈಪ್ ಲೈನ್ ಕಾಮಗಾರಿಗಳನ್ನು ಪೋಲಿಸ್ ಭದ್ರತೆ ಯೊಂದಿಗೆ ಪೂರ್ಣಗೊಳಿಸಲಾಗಿದೆ.

    ಹಿರದನಹಳ್ಳಿ, ಕಾಡುಮನೆ, ಮಾರನಹಳ್ಳಿ ಸೇರಿದಂತೆ ತಾಲೂಕಿನ 8 ಚೆಕ್ ಡ್ಯಾಮ್ ಗಳಿಂದ ತಾಲೂಕಿನ ನಾಗರ ಗ್ರಾಮದಲ್ಲಿ ನ ಬೃಹತ್ ನೀರಿನ ತೊಟ್ಟಿಯವರಗಿನ 78 ಕಿ.ಮಿ ಪೈಪ್ ಲೈನ್ ಕಾಮಗಾರಿ ಶೇ 98 ರಷ್ಟು ಮುಕ್ತಾಗೊಂಡಿದೆ. 8 ಚೆಕ್ ಡ್ಯಾಮ್ ಗಳಲ್ಲಿ  ಕಾಡಾಮನೆ ಗ್ರಾಮದ ಹೊರವಲಯದಲ್ಲಿನ  ವಿಆರ್ 3 ಚೆಕ್ ಡ್ಯಾಮ್ ಕಾಮಗಾರಿ ಹೊರತುಪಡಿಸಿ ಉಳಿದೆಲ್ಲ ಚೆಕ್ ಡ್ಯಾಮ್ ಕಾಮಗಾರಿ ಮುಕ್ತಾಯಗೊಂಡಿದೆ. ಗೇಟ್ ವಾಲ್ ಆಳವಡಿಸುವ ಕಾಮಗಾರಿ ಭರದಿಂದ ಸಾಗಿದೆ.

    ತಾಲೂಕಿನ   ಹೆಬ್ಬನಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿರುವ 400 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರ ದ ಕಾಮಗಾರಿ ಸೇರಿದಂತೆ ನಾಗರ ಹಾಗೂ ಎತ್ತಿನಹೊಳೆ ಗ್ರಾಮದಲ್ಲಿನ  220/66 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರಗಳು  ಹಾಗೂ ಬಾಕಿ ಉಳಿದ ಎಲ್ಲ ಚೆಕ್ ಡ್ಯಾಮ್ ಗಳಲ್ಲಿನ 66 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದ ಕಾಮಗಾರಿಗಳು ಪೂರ್ಣಗೊಂಡಿದೆ.  ವಿದ್ಯುತ್ ಮಾರ್ಗದ ಕೆಲಸ ಶೇ 80 ರಷ್ಟು ಮುಕ್ತಾಯಗೊಂಡಿದೆ.

    ಕಳೆದ ಎರಡು ದಿನಗಳ ಹಿಂದೆ ಕಾಮಗಾರಿ ತಪಾಸಣೆ ಉದ್ದೇಶದಿಂದಲೇ ಆಗಮಿಸಿದ್ದ ಕೆಪಿಟಿಸಿಎಲ್ ತಾಂತ್ರಿಕ ನಿರ್ದೇಶಕ ಚಂದ್ರಶೇಖರಯ್ಯ ಕಾಮಗಾರಿ ಪೂರ್ಣಗೊಂಡಿರುವುದಕ್ಕೆ  ಸಮ್ಮತಿ ಸೂಚಿಸಿದ್ದು  ಇನ್ನೂ 10 ದಿನಗಳ ಒಳಗಾಗಿ ತಾಲೂಕಿನಲ್ಲಿ ಹಾದುಹೋಗಿರುವ ಶಾಂತಿಗ್ರಾಮ ಉಡುಪಿ ನಡುವಿನ 400 ಕೆವಿ ವಿದ್ಯುತ್ ಮಾರ್ಗದಿಂದ (ಎಲ್ ಸಿ) ಮಾರ್ಗ   ಮುಕ್ತತೆ ನೀಡುವುದಾಗಿ ಭರವಸೆ ನೀಡಿದ್ದಾರೆ.

    ಮುಖ್ಯಮಂತ್ರಿಯಿಂದ ಒತ್ತಡ:

    ಕಾಮಗಾರಿ ಪೂರ್ಣತೆಯ ಬಗ್ಗೆ ಮಾಹಿತಿ ಪಡೆದಿರುವ ಮುಖ್ಯಮಂತ್ರಿ  ಉದ್ಘಾಟನೆಗೆ ದಿನಾಂಕ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು. ವಿದ್ಯುತ್ ಮಾರ್ಗಮುಕ್ತತೆ ದೊರೆತ ತಕ್ಷಣ ಉದ್ಘಾಟನೆ ದಿನಾಂಕ ನಿಗದಿಯಾಗಲಿದೆ.

    13 ಅಲ್ಲ 23:

    ಪಶ್ಚಿಮಘಟ್ಟದಲ್ಲಿ  ಹುಟ್ಟಿ ಪಶ್ಚಿಭಾಬಿಮುಖವಾಗಿ ಹರಿದು ಸಮುದ್ರ ಸೇರುವ ಎತ್ತಿನಹೊಳೆ, ಕಾಡುಮನೆ ಹೊಳೆ, ಹಿರದನಹಳ್ಳಿ ನದಿ ಸೇರಿದಂತೆ ಹತ್ತಾರು ಉಪನದಿಗಳಿಂದ        ಹರಿಯುವ ನೀರನ್ನು  ಮಳೆಗಾಲದಲ್ಲಿ  ಸಂಗ್ರಹಿಸಿ  ಬಯಲುನಾಡಿನ ಜನರ ಕುಡಿಯುವ ನೀರಿನ ಸಮಸ್ಯೆ ಈಡೇರಿಸಬೇಕೆಂಬ  ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಕನಸಿನ ಕೂಸು ಸಕಾರಗೊಳ್ಳಲು 8 ಸಾವಿರ ಕೋಟಿ ಬೇಕು ಎನ್ನಲಾಗಿತ್ತು.  2014 ರಲ್ಲಿ ಯೋಜನೆ ಆರಂಬಿಸುವ ವೇಳೆಗೆ ಇದರ ಮೊತ್ತ 13 ಸಾವಿರ ಕೋಟಿಗೆ ತಲುಪಿತ್ತು. ಯೋಜನೆ ಆರಂಭವಾದ 8 ವರ್ಷಗಳ ತರುವಾಯ ಯೋಜನೆಯ ಮೊತ್ತ 23 ಸಾವಿರ ಕೋಟಿ ತಲುಪಿದ್ದು ಸದ್ಯ ಯೋಜನೆ ಮೊತ್ತ ಮತ್ತಷ್ಟು ಏರಿಕೆ ಮುನ್ನ  ನೀರು ಹರಿಸುವ ಮಾತನಾಡುತ್ತಿರುವುದು ಬಯಲುನಾಡಿನ ಜನರ ಸಂತಸಕ್ಕೆ ಕಾರಣವಾಗಿದೆ. 

    ತಾಲೂಕಿನ ಎಲ್ಲ ಸಿವಿಲ್ ಕಾಮಗಾರಿಗಳು ಮುಕ್ತಾಯಗೊಂಡಿದೆ. ವಿದ್ಯುತ್ ಮಾರ್ಗಮುಕ್ತತೆಗಾಗಿ ಕಾಯಲಾಗುತ್ತಿದ್ದು ನಂತರ ಉದ್ಘಾಟನೆ ದಿನಾಂಕ ನಿಗದಿಯಾಗಲಿದೆ.

    – ಆನಂದ್  ಕುಮಾರ್, ಕಾರ್ಯಪಾಲಕ ಅಭಿಯಂತರ, ವಿಶ್ವೇಶ್ವರಯ್ಯ ಜಲನಿಗಮ. ವಿಭಾಗ 1 ,ಸಕಲೇಶಪುರ.

    ಯೋಜನೆ ಕಾರ್ಯಗತಗೊಳ್ಳುವ ಬಗ್ಗೆ ಅನುಮಾನವಿದ್ದ ವೇಳೆ ಉದ್ಘಾಟನೆ ಬಗ್ಗೆ ಮಾತನಾಡುತ್ತಿರುವುದು ಸಂತಸದ ವಿಷಯ. ಯೋಜನೆ ಅನುಷ್ಠಾನ ದ ಬಗ್ಗೆ ಅಧಿಕಾರಿಗಳಲ್ಲಿ  ಇರುವ ಬದ್ದತೆಯನ್ನು ಇದು ಎತ್ತಿತೊರುತ್ತಿದೆ.

    – ಸಂತೋಷ್, ಹಾನುಬಾಳ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts