More

    ಎಡೆ ಹೊಡೆಯಲು ನೊಗಕ್ಕೆ ಹೆಗಲು ಕೊಟ್ಟ ರೈತ!

    ಸಂಶಿ: ಕರೊನಾದಿಂದ ಇಡೀ ದೇಶದ ಆರ್ಥಿಕತೆಯೇ ನೆಲಕಚ್ಚಿದೆ. ಇದಕ್ಕೆ ಕೃಷಿ ಕ್ಷೇತ್ರವೂ ಹೊರತಾಗಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆಯಷ್ಟೇ ಅಲ್ಲದೆ, ಜೋಡೆತ್ತುಗಳ ಬೆಲೆಯೂ ಗಗನಕ್ಕೇರಿದೆ. ಇದರ ಪರಿಣಾಮ ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ರೈತ ಹೇಮನಗೌಡ ಫಕೀರಗೌಡ್ರ ಅವರು ತಮ್ಮ ಮಗನ ಸಹಾಯದಿಂದ ಶೇಂಗಾ ಬೆಳೆಯಲ್ಲಿ ಎಡೆ ಹೊಡೆಯಲು ನೊಗಕ್ಕೆ ಹೆಗಲು ಕೊಟ್ಟಿದ್ದಾರೆ.

    ರೈತ ಹೇಮನಗೌಡ ತನ್ನ ಜಮೀನಿನಲ್ಲಿ ಬೆಳೆದ ಬೆಳೆಗಳಲ್ಲಿ ಯಾವುದೇ ಎತ್ತುಗಳ ಸಹಾಯವಿಲ್ಲದೆ ಬೆಳೆಯಲ್ಲಿ ಎಡೆ ಹೊಡೆಯುವ ಕಾಯಕದಲ್ಲಿ ನಿರತರಾಗಿದ್ದಾನೆ. ಸ್ವಂತ 4 ಎಕರೆ 32 ಗುಂಟೆ ಹೊಲದಲ್ಲಿ ಹತ್ತಿ, ಹೆಸರು ಹಾಗೂ ಶೇಂಗಾ ಬೆಳೆದಿದ್ದಾರೆ. ಬೆಳೆಯೂ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳನ್ನು ಸಹ ಕುಟುಂಬದ ಸದಸ್ಯರಿಂದಲೇ ನಿರ್ವಹಿಸುತ್ತಿದ್ದಾರೆ.

    ದುಬಾರಿಯಾದ ಜೋಡೆತ್ತು ಬಾಡಿಗೆ: ಹೊಲಗಳಲ್ಲಿ ಬೆಳೆಗಳ ಮಧ್ಯೆ ಎಡೆ ಹೊಡೆಯಲು (ಪ್ರತಿ ನಾಲ್ಕು ಎಕರೆ) ದಿನಕ್ಕೆ 1800-2000 ರೂಪಾಯಿ ಬಾಡಿಗೆ ಆಗಿವೆ. ಅಷ್ಟೊಂದು ಹಣ ನೀಡಿದರೂ ಸಮಯಕ್ಕೆ ಸರಿಯಾಗಿ ಜೋಡೆತ್ತು ಬಾಡಿಗೆ ಸಿಗುತ್ತಿಲ್ಲ. ಇದರಿಂದ ಹತಾಶರಾದ ಬಹುತೇಕ ರೈತರು ಕುಟುಂಬ ಸದಸ್ಯರ ಸಹಾಯ ಪಡೆದು, ತಾವೇ ನೊಗಕ್ಕೆ ಹೆಗಲು ಕೊಟ್ಟ ದೃಶ್ಯಗಳು ಇದೀಗ

    ಸಾಮಾನ್ಯವಾಗಿವೆ.

    ಮೊದಲೆಲ್ಲ ಎತ್ತುಗಳ ಬೆಲೆ 50-70 ಸಾವಿರ ರೂಪಾಯಿಗಳವರೆಗೆ ಇರುತ್ತಿತ್ತು. ಆದರೀಗ ಜೋಡೆತ್ತೀಗೆ 1ರಿಂದ 1.50 ಲಕ್ಷ ರೂಪಾಯಿಗಳ ಗಡಿ ದಾಟಿವೆ. ಹೀಗಾಗಿ ಜೋಡೆತ್ತುಗಳ ಗಳೆ ಬಾಡಿಗೆಯಲ್ಲಿ ಹೆಚ್ಚಳ ಮಾಡಲಾಗಿದೆ ಎನ್ನುತ್ತಾರೆ ಎತ್ತುಗಳ ಮಾಲೀಕರು.

    ಆರ್ಥಿಕವಾಗಿ ದುರ್ಬಲರಾದ ರೈತರಿಗೆ ವ್ಯವಸಾಯ ಮಾಡುವುದೆಂದರೆ ಅಷ್ಟೊಂದು ಸುಲಭವಲ್ಲ. ಕೃಷಿಯಲ್ಲಿ ವ್ಯಯಿಸಿದ ಹಣ ಮರಳಿ ಬರುತ್ತದೆ ಎಂಬ ಭರವಸೆಯೂ ಈ ದಿನಗಳಲ್ಲಿಲ್ಲ. ಅತಿವೃಷ್ಟಿ, ಅನಾವೃಷ್ಟಿ, ಬೆಲೆಯಲ್ಲಿ ಕುಸಿತ ಹೀಗೆ ಹಲವು ಸಮಸ್ಯೆ ಹೊತ್ತು ಜೀವನ ನಡೆಸುವುದು ರೈತರಿಗೆ ಕಷ್ಟದ ಕೆಲಸವಾಗಿದೆ.

    ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿ. ಹೀಗಿರುವಾಗ ಕಡಿಮೆ ಜಮೀನಿದ್ದು, ಜಾನುವಾರುಗಳನ್ನು ಕಟ್ಟಿಕೊಂಡು ವ್ಯವಸಾಯ ಮಾಡುವುದು ಕಷ್ಟದ ಕೆಲಸವಾಗಿದೆ.

    ಇಂದಿನ ಕಾಲಮಾನದಲ್ಲಿ ಜಾನುವಾರುಗಳ ಬೆಲೆ ಗಗನಕ್ಕೇರಿದ್ದು, ಖರೀದಿಸುವುದು ಬಡವರ ಪಾಲಿಗೆ ಅಸಾಧ್ಯ. ಯಂತ್ರೋಪಕರಣಗಳನ್ನು ಪಡೆಯಬೇಕೆಂದರೆ ಅದೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಯಾವುದೇ ಸಹಾಯವಿಲ್ಲದೆ ನಮ್ಮಲ್ಲೇ ಕುಟುಂಬದ ಸದಸ್ಯರು ಸೇರಿ ವ್ಯವಸಾಯದಲ್ಲಿ ತೊಡಗಿಸಿಕೊಳ್ಳುತ್ತೇವೆ.

    | ಹೇಮನಗೌಡ ಫಕೀರಗೌಡ್ರ ಶಿರೂರ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts