More

    ಕರಿ ಎಲೆ ದುಬಾರಿ

    ‘ದುಡಿಯೋ ಮಂದಿಗೆ ಎಲಿ ಅಂದ್ರ ಎನರ್ಜಿ ಇದ್ದಂಗ. ಹಾಕ್ಕೊಂಡಿಲ್ಲಂದ್ರ ಬಾಯಿ ಚುಟು ಚುಟು ಅಂತೈತಿ. ಆವಾಗವಾಗ ರೇಟು ಹೆಚ್ಚೂ ಕಮ್ಮಿ ಆಗ್ತಾವ. ಏನೇ ಆಗಲಿ, ಒಪ್ಪತ್ತು ಊಟ ಬಿಟ್ಟೇವು, ಎಲಿ-ಅಡಕೆ ಜಗಿಯೋದು ಬಿಡೋದಿಲ್ಲ. ಎಲೆ ಮಾರುಕಟ್ಟೆಯನ್ನುವ್ಯವಸ್ಥಿತವಾಗಿ ನಿರ್ವಹಿಸಿದರೆ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಬಹುದು’ ಎಂಬುದು ಬಹುತೇಕ ಎಲೆ ಪ್ರಿಯರ ಅನಿಸಿಕೆ.

    ವೀರೇಶ ಸೌದ್ರಿ ಹುಬ್ಬಳ್ಳಿ
    ಮಾರುಕಟ್ಟೆಯಲ್ಲಿ ಕರಿ ಎಲೆ ದುಬಾರಿಯಾಗಿದ್ದು, ಮೆಲ್ಲುವವರ ಬಾಯಿಗೆ ಬೀಗ ಹಾಕಿದಂತಾಗಿದೆ. ಅನಿವಾರ್ಯವಾಗಿ ಕೆಲವರು ಕರಿ ಎಲೆ ಬದಲು ಬಿಳಿ ಎಲೆಗೆ ಮೊರೆ ಹೋಗಿದ್ದಾರೆ.

    ಆವಕದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರಿಂದ ದಿನೇ ದಿನೆ ಕರಿ ಎಲೆ ದರ ಗಗನಕ್ಕೇರುತ್ತಿದೆ. ಆದರೆ, ಬಿಳಿ ಎಲೆ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ಕೈಗೆಟಕುವಂತಿದೆ. ಇದರಿಂದಾಗಿ ಬಿಳಿ ಎಲೆ ಬಳಸುವವರು ಹಾಗೂ ಬೀಡಾ ಅಂಗಡಿಯವರು ಕೊಂಚ ನಿರುಮ್ಮಳರಾಗಿದ್ದಾರೆ.

    ಮಾರುಕಟ್ಟೆ ದರ

    ಸದ್ಯ ಮಾರುಕಟ್ಟೆಯಲ್ಲಿ ಗುಣಮಟ್ಟ ಆಧರಿಸಿ ಕರಿ ಎಲೆ ಒಂದು ಪೆಂಡಿಗೆ (12,000 ಎಲೆ) 8 ರಿಂದ 14 ಸಾವಿರ ರೂ., ಬಿಳಿ ಎಲೆ 3ರಿಂದ 5ಸಾವಿರ ರೂ. ಧಾರಣೆ ಇದೆ. ಚಿಲ್ಲರೆ ಅಂಗಡಿಯಲ್ಲಿ ಕೆಲವೆಡೆ 2 ರೂಪಾಯಿಗೆ ಒಂದು, ಕೆಲವೆಡೆ 5 ರೂಪಾಯಿಗೆ ಮೂರು ಎಲೆಗಳನ್ನು ಕೊಡುತ್ತಿದ್ದಾರೆ.

    ಧಾರವಾಡ ಜಿಲ್ಲೆಯಲ್ಲಿ ಎಲೆ ತೋಟಗಳಿಲ್ಲ. ವಿಶೇಷವೆಂದರೆ, ಉತ್ತರ ಕರ್ನಾಟಕ ಭಾಗದಲ್ಲಿ ಧಾರವಾಡ ಜಿಲ್ಲೆಯಲ್ಲೇ ಕರಿ ಎಲೆಗೆ ಅತಿ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಅನ್ಯ ಜಿಲ್ಲೆಯವರನ್ನೇ ಅವಲಂಬಿಸಬೇಕಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಹಾವೇರಿ ಜಿಲ್ಲೆಯ ಸವಣೂರ, ಕಾರಡಗಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ರಾಣೆಬೆನ್ನೂರ ಹಾಗೂ ಗದಗ ಜಿಲ್ಲೆಯ ಗಜೇಂದ್ರಗಡದಿಂದಲೂ ಅಲ್ಪ ಪ್ರಮಾಣದಲ್ಲಿ ಎಲೆ ಆವಕವಾಗುತ್ತದೆ.

    ಬೆಳಗಾವಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಂದ ಹಾಗೂ ಹೈದರಾಬಾದ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಎಲೆ ಆವಕವಾಗುತ್ತಿದೆ. ಹೀಗಾಗಿ ಧಾರಣೆಯಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸ ಕಂಡು ಬರುತ್ತಿಲ್ಲ. ಚಳಿಗಾಲ ಹಾಗೂ ಶೀತ ಗಾಳಿಯಿಂದ ಸವಣೂರ ಮತ್ತು ರಾಣೆಬೆನ್ನೂರ ಭಾಗದಲ್ಲಿ ಎಲೆ ಇಳುವರಿ ಕುಸಿದಿದೆ. ಅಲ್ಲದೆ, ಸವಣೂರ ಎಲೆಗೆ ಗೋವಾ ಮತ್ತಿತರೆಡೆ ಬಹು ಬೇಡಿಕೆ ಇದ್ದು, ಅತ್ತ ಸಾಗಣೆಯಾಗುತ್ತಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಬೇಡಿಕೆಯಷ್ಟು ಎಲೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಎಲೆ ದರ ಏರಿಕೆಯಾಗಿದೆ ಎಂಬುದು ವ್ಯಾಪಾರಿಗಳ ಅನಿಸಿಕೆ.

    ಕಳೆದ ನಾಲ್ಕೈದು ತಿಂಗಳ ಹಿಂದೆ ಇದೇ ರೀತಿ ಎಲೆ ದರ ದುಬಾರಿಯಾಗಿತ್ತು. ಆ ಸಂದರ್ಭದಲ್ಲಿ ಬಹಳಷ್ಟು ರೈತರು ಹೆಚ್ಚೆಚ್ಚು ಎಲೆಗಳನ್ನು ಕೀಳಿಸಿ ಮಾರುಕಟ್ಟೆಗೆ ತಂದರು. ಪೂರೈಕೆ ಹೆಚ್ಚುತ್ತಿದ್ದಂತೆ ಸಹಜವಾಗಿ ದರ ಕುಸಿದಿದ್ದರಿಂದ ರೈತರಿಗೆ ಬೇಸರವಾಗಿತ್ತು. ಈಗ ರೈತರು ಜಾಣರಾಗಿದ್ದಾರೆ. ತೋಟದಲ್ಲಿ ಸಾಕಷ್ಟು ಎಲೆ ಇದ್ದರೂ ನಿತ್ಯ ಅಗತ್ಯಕ್ಕೆ ತಕ್ಕಷ್ಟು ಎಲೆ ಕೀಳಿಸಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಇದರಿಂದ ಉತ್ತಮ ದರವೂ ಲಭಿಸುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಎಲೆ ಆವಕವಾಗುತ್ತಿಲ್ಲ ಎಂದು ವ್ಯಾಪಾರಿಯೊಬ್ಬರು ಹೇಳುತ್ತಾರೆ.

    ರೈತರು ಮೊದಲಿನಂತೆ ಒಂದೇ ಮಾರುಕಟ್ಟೆಯನ್ನು ಅವಲಂಬಿಸಿಲ್ಲ. ಧಾರವಾಡ, ಹಾವೇರಿ, ದಾವಣಗೆರೆ ಜಿಲ್ಲೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಎಲೆ ತೋಟಗಳಿರುವ ತಾಲೂಕುಗಳಲ್ಲಿ ವಾರಕ್ಕೆರಡು ಅಥವಾ ಮೂರು ಬಾರಿ ಮಾರುಕಟ್ಟೆಯಾಗುತ್ತದೆ. ಉತ್ತಮ ದರವಿರುವ ಹಾಗೂ ಸನಿಹದ ಮಾರುಕಟ್ಟೆಗಳಿಗೆ ರೈತರು ಎಲೆ ಸಾಗಿಸುತ್ತಾರೆ. ಇದರಿಂದ ಬೇಡಿಕೆ ಇರುವೆಡೆ ಪೂರೈಕೆ ಇಲ್ಲದಿದ್ದರೆ ಸಹಜವಾಗಿ ಧಾರಣೆಯಲ್ಲಿ ವ್ಯತ್ಯಾಸವಾಗುತ್ತದೆ. ಅಂದಾಜು ಇನ್ನೊಂದು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯಬಹುದು.
    I ಮರುಗೇಶ ಬಳ್ಳಾರಿ, ರೈತ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts