More

    ಎಟಿಎಂ ಕಾರ್ಡ್ ವಂಚಕನ ಬಂಧನ

    ಮುಂಡಗೋಡ: ಪಟ್ಟಣದ ಕಂಬಾರಗಟ್ಟಿ ಬಡಾವಣೆಯ ವ್ಯಕ್ತಿಗೆ ಎಟಿಎಂನಲ್ಲಿ ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ ಹಣ ದೋಚಿದ ಅಂತರ್​ಜಿಲ್ಲಾ ವಂಚಕನನ್ನು ಇಲ್ಲಿನ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಹಿರೇಮೊರಬ ಗ್ರಾಮದ ಗಿರೀಶ ಮುನಿಯಪ್ಪನವರ ಬಂಧಿತ ವ್ಯಕ್ತಿ. ಹನುಮಂತ ತಳವಾರ ವಂಚನೆಗೊಳಗಾದವರು. 2020ರ ನ. 2ರಂದು ಹನುಮಂತ ಇಲ್ಲಿನ ಎಸ್​ಬಿಐ ಬ್ಯಾಂಕ್​ನ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ಆರೋಪಿಯು, ‘ಹಣ ಡ್ರಾ ಮಾಡಿ ಕೊಡುತ್ತೇನೆ’ ಎಂದು ಹೇಳಿ ಪಾಸ್​ವರ್ಡ್ ಪಡೆದು ಹನುಮಂತ ಅವರ ಎಟಿಎಂ ಕಾರ್ಡ್ ಬದಲಿಗೆ ಇನ್ನೊಂದು ಕಾರ್ಡ್ ನೀಡಿದ್ದ. ಬಳಿಕ ಅವರ ಕಾರ್ಡ್​ನಿಂದ ಹಾನಗಲ್ಲ ಎಟಿಎಂನಿಂದ 20 ಸಾವಿರ ರೂ. ಡ್ರಾ ಮಾಡಿದ್ದ. ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪ್ರಕರಣದ ತನಿಖೆಗೆ ಎಸ್​ಪಿ ಶಿವಪ್ರಕಾಶ ದೇವರಾಜು, ಎಎಸ್​ಪಿ ಎಸ್. ಬದರಿನಾಥ, ಡಿವೈಸ್​ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಪ್ರಭುಗೌಡ ಡಿ.ಕೆ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

    ಆರೋಪಿ ಗಿರೀಶನು ಹನುಮಂತ ಅವರಿಗೆ ಕೊಟ್ಟ ಎಟಿಎಂ ಕಾರ್ಡ್ ಬಂಕಾಪುರದ ಮಹಿಳೆಗೆ ಸೇರಿದೆ. ಈತ ಅವಳಿಗೂ ಮೋಸ ಮಾಡಿದ್ದಾನೆ. ಅದೇ ರೀತಿ ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಇಬ್ಬರಿಗೆ ವಂಚನೆ ಮಾಡಿದ ಬಗ್ಗೆ ತಿಳಿದು ಬಂದಿದೆ.

    ಆರೋಪಿಯು ಕೃತ್ಯಕ್ಕೆ ಬಳಸಿದ ಬೈಕ್ ಬಗ್ಗೆ ಪರಿಶೀಲಿಸಿದಾಗ ಅದು ದಾವಣಗೆರೆ ಜಿಲ್ಲೆ ಮಾಯಕೊಂಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವಾದ ಬೈಕ್ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಮುಂಡಗೋಡ 1, ಹಾವೇರಿ ಜಿಲ್ಲೆ ಬಂಕಾಪುರದಲ್ಲಿ 1, ಬ್ಯಾಡಗಿಯಲ್ಲಿ 2 ಹೀಗೆ ಒಟ್ಟು 4 ಎಟಿಎಂ ಕಾರ್ಡ್​ಗಳನ್ನು ಬಳಸಿದ್ದಾನೆ. ಬಂಧಿತನಿಂದ 47,500 ರೂ. ನಗದು, ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಯು ಕಳೆದ ವರ್ಷ ಮಂಡ್ಯ ಮತ್ತು ತುಮಕೂರ ಜಿಲ್ಲೆಯಲ್ಲಿ 8 ಜನರಿಗೆ ಎಟಿಎಂನಲ್ಲಿ ಹಣ ತೆಗೆದುಕೊಡುವ ನೆಪದಲ್ಲಿ ಮೋಸ ಮಾಡಿ ಬಂಧನಕ್ಕೊಳಗಾಗಿದ್ದ. ಸದ್ಯ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.

    ಸಿಪಿಐ ಪ್ರಭುಗೌಡ ಡಿ.ಕೆ., ಪಿಎಸ್​ಐ ಬಸವರಾಜ ಮಬನೂರ, ಪ್ರೊಬೆಷನರಿ ಪಿಎಸ್​ಐ ಬಾಬುದ್ದೀನ್, ಎಎಸ್​ಐ ಅಶೋಕ ರಾಠೋಡ, ಕೆ.ಎನ್. ಘಟಕಾಂಬಳೆ, ಸಿಬ್ಬಂದಿ ವಿನೋದಕುಮಾರ. ಜಿ.ಬಿ., ಅರುಣಕುಮಾರ ಬಾಗೇವಾಡಿ, ಭಗವಾನ ಗಾಂವಕರ, ರಾಘವೇಂದ್ರ ನಾಯ್ಕ, ತಿರುಪತಿ ಚೌಡಣ್ಣನವರ, ರಾಘವೇಂದ್ರ ಪಟಗಾರ, ಸುಧೀರ ಮಡಿವಾಳ, ಅಣ್ಣಪ್ಪ ಬಡಿಗೇರ ಅವರ ಕಾರ್ಯಕ್ಕೆ ಎಸ್​ಪಿ ಶಿವಪ್ರಕಾಶ ದೇವರಾಜು ಬಹುಮಾನ ಘೊಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts