More

    ಎಎಪಿ ಪಕ್ಷದಿಂದ ಕಸಬರಗಿ ಚಳುವಳಿ

    ಬಾಗಲಕೋಟೆ: ಬಾಗಲಕೋಟೆಗೆ 2014 ರಲ್ಲಿ ಘೋಷಣೆ ಮಾಡಿರುವ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಎಎಪಿ ಪಕ್ಷದ ಕಾರ್ಯಕರ್ತರು ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿದರು. ಕಸಬರಗಿ ಚಳುವಳಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
    ನಗರದ ಬಸವೇಶ್ವರ ವೃತ್ತದರಿಂದ ಆರಂಭವಾದ ಚಳುವಳಿ ಪ್ರಮುಖ ಬೀದಿಗಳಲ್ಲಿ ಸಾಗಿತು. ರಸ್ತೆಯುದ್ದಕ್ಕೂ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಘೋಷಣೆ ಕೂಗುತ್ತ ಕಸಗೂಡಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸರ್ಕಾರಿ ಮೆಡಿಕಲ್ ಸ್ಥಾಪನೆಗೆ ನಿರ್ಲಕ್ಷ್ಯ ಧೋರಣೆ ಸಲ್ಲ ಎಂದು ಕಿಡಿಕಾರಿದರು.
    ಎಎಪಿ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ 2014-15 ಸಾಲಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿತ್ತು. ಆದರೇ ಈ ವರೆಗೆ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸರ್ಕಾರ, ಸಮ್ಮಿಶ್ರ ಸರ್ಕಾರ, ಬಿಜೆಪಿ ಸರ್ಕಾರ ಆಸಕ್ತಿ ವಹಿಸಿಲ್ಲ. ಈ ವರೆಗೆ ಒಂದು ರೂ. ಅನುದಾನ ಬಿಡುಗಡೆಯಾಗಿಲ್ಲ. ಶಾಸಕ ವೀರಣ್ಣ ಚರಂತಿಮಠ ನಮ್ಮ ಹೋರಾಟಕ್ಕೆ ಮಣಿದು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದರು. ಆದರೇ ಕಾಲೇಜು ಸ್ಥಾಪನೆಗೆ ಸರ್ಕಾರ ಮುಂದೆ ಪಟ್ಟು ಹಿಡಿದಿಲ್ಲ. ಜಾಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರಾಜಕೀಯ ಪುನರ್ ಜನ್ಮ ಪಡೆದ ಸಿದ್ದರಾಮಯ್ಯ ಕೂಡಾ ಜಿಲ್ಲೆಯ ಬಗ್ಗೆ ಧ್ವನಿ ಎತ್ತಿಲ್ಲ. ಸಂಸದ ಪಿ.ಸಿ.ಗದ್ದಿಗೌಡರ ತಮಗೂ ಜಿಲ್ಲೆಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ದೆಹಲಿಯಲ್ಲಿ ಎಎಪಿ ಸರ್ಕಾರ ಸರ್ಕಾರಿ ಆಸ್ಪತ್ರೆ, ಶಾಲಾ-ಕಾಲೇಜು ಹೈಟೆಕ್ ಮಾದರಿಯಲ್ಲಿ ಸುಧಾರಣೆ ಮಾಡಿದೆ. ದೇಶದ ಇತಿಹಾಸದಲ್ಲಿ ಅರವಿಂದ ಕೇಜ್ರಿವಾಲ್ ಅಭಿವೃದ್ಧಿ ಕಾರ್ಯಗಳು ವಿಶ್ವಮಟ್ಟದಲ್ಲಿ ಚರ್ಚೆ ಯಾಗುತ್ತಿದೆ. ರಾಜ್ಯದಲ್ಲಿ ಅನೇಕ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಮ್ಮ ಸ್ವಂತ ಹಿತಾಸಕ್ತಿ ಇಟ್ಟುಕೊಂಡಿವೆ ಹೊರತು ಜನರ ಅಭಿವೃದ್ಧಿ, ವಿಕಾಸವಲ್ಲ. ಸರ್ಕಾರಿ ಮಡಿಕಲ್ ಕಾಲೇಜು ಇದಕ್ಕೆ ಉತ್ತಮ ಉದಾಹರಣೆ ಎಂದು ತಿಳಿಸಿದರು.
    ಎಎಪಿ ಮುಖಂಡರಾದ ಮುಖಂಡರಾದ ಭಾಗ್ಯಾ ಬೆಟಗೇರಿ, ಯುವರಾಜ ಬಂಡಿ, ಭೀಮನಗೌಡ ಬಜ್ಜನವರ, ಸಲ್ಮೀ ಜಮಾದಾರ, ಪೂರ್ಣಿಮಾ ಜುಮನಾಳ, ನವೀನ ಹುಂಡೇಕಾರ, ವೆಂಕಟೇಶ ದೇಶಪಾಂಡೆ, ವಿರೇಶ ಬಣಕಾರ, ತೌಸೀಫ ಪಟ್ಟದಕಲ್ಲು ಇತರರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts