More

    ಉದ್ಯಮ ಪಯಣದ ಅನುಭವ ವಿನಿಮಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಲ್ಯುಮ್ನಿ, ಬಿವಿಬಿಯಲ್ಲಿ ಹಳೇ ವಿದ್ಯಾರ್ಥಿಗಳಿಂದ ತಾಂತ್ರಿಕ ಸಮಾವೇಶ

    ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಬಿ.ವಿ. ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್​ನಲ್ಲಿ ಹಳೇ ವಿದ್ಯಾರ್ಥಿಗಳ ಕಲರವ. ಕಾಲೇಜಿನ ಅಮೃತ ಮಹೋತ್ಸವದ ಸಂಭ್ರಮ ಒಂದೆಡೆಯಾದರೆ, ಇಲ್ಲಿ ಕಲಿತು ದೇಶ ವಿದೇಶದಲ್ಲಿ ನೆಲೆ ಕಂಡುಕೊಂಡಿರುವ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ತಮ್ಮ ಬ್ಯಾಚ್, ಹಿರಿಯರು, ಪ್ರಾಧ್ಯಾಪಕರನ್ನು ಕಂಡು ಅತ್ಯಂತ ಸಂತೋಷದಿಂದ ಉಭಯ ಕುಶಲೋಪರಿ ವಿಚಾರಿಸಿದರು.

    ಅಂದಿನ ದಿನಗಳಲ್ಲಿ ಕ್ಯಾಂಪಸ್ ಹೇಗಿತ್ತು, ಈಗ ಹೇಗಾಗಿದೆ ಎಂದು ಅಚ್ಚರಿಯಿಂದ ವೀಕ್ಷಣೆ ಮಾಡಿದರು. ಪ್ರಾಧ್ಯಾಪಕರ ಪಾಠದ ವೈಖರಿ, ಸ್ನೇಹಿತರೊಂದಿಗೆ ಚೇಷ್ಟೆ, ಅಭ್ಯಾಸ ಇತ್ಯಾದಿಗಳ ಬಗ್ಗೆ ಸುದೀರ್ಘ ಮಾತುಕಥೆ ನಡೆದವು.

    ಬಿವಿಬಿಯಲ್ಲಿ ಕಲಿತು ವಿಶ್ವದ ವಿವಿಧ ಕಡೆಗಳಲ್ಲಿ ಉದ್ಯೋಗ ಕಂಡುಕೊಂಡವರು, ಸ್ವಂತ ಉದ್ಯೋಗ ಆರಂಭಿಸಿ ಯಶಸ್ವಿ ಉದ್ಯಮಿಯಾದವರು ತಮ್ಮ ಅನುಭವಗಳನ್ನು ಹಂಚಿಕೊಂಡು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಿದರು.

    ಗುಂಪು ಚರ್ಚೆ: ‘ಬಿಟುಬಿ ಅಪಾರ್ಚುನಿಟಿ ಇನ್ ಯುಎಸ್​ಎ ಫಾರ್ ಇಂಡಿಯನ್ ಎಂತ್ರಪ್ರೆನ್ಯುರ್ಸ್’ ಕುರಿತು ಗುಂಪು ಚರ್ಚೆ ನಡೆಯಿತು.

    ಜಕ್ಕಲಿ ಇಂಪ್ಯಾಕ್ಟಿವ್ ಟೆಕ್ನಾಲಜಿಸ್ ಸಂಸ್ಥಾಪಕ ಶಶಿಧರ ಜಕ್ಕಲಿ ಮಾತನಾಡಿ, ಬಿವಿಬಿ ಕ್ಯಾಂಪಸ್​ಗೆ ಬಹಳ ವರ್ಷಗಳ ನಂತರ ಬಂದಿದ್ದಕ್ಕೆ ಸಂತೋಷವಾಗಿದೆ. ಇದು ನನ್ನನ್ನು ಕೈಹಿಡಿದು ಬೆಳೆಸಿದ ತಾಯಿಯಾಗಿದೆ ಎಂದರು.

    ಉದ್ಯಮಿಯಾಗುವುದು ಎಂದರೆ ಓಟದ ಸ್ಪರ್ಧೆಯಲ್ಲಿ ನೂರು ಮೀಟರ್ ಓಡಿದಂತಲ್ಲ. ಇದೊಂದು ಆಧ್ಯಾತ್ಮಿಕ ಪಯಣವಾಗಿದೆ. ಪ್ರತಿ ದಿನ ಕಲಿಯುವುದು ಇರುತ್ತದೆ. ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದರು.

    ಅಮೆರಿಕದಲ್ಲಿ ಉದ್ಯಮ ನಡೆಸಬೇಕಾದರೆ ಅಲ್ಲೊಂದು ಕಚೇರಿ ಹೊಂದುವುದು ಕನಿಷ್ಠ ಅಗತ್ಯವಾಗಿದೆ. ಅಲ್ಲಿನ ಗ್ರಾಹಕರನ್ನು ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತದೆ. ಯಾವುದೇ ಸಮಸ್ಯೆಗೂ ಕೂಡಲೇ ಪರಿಹಾರ ಕಂಡುಕೊಳ್ಳಬಹುದು ಎಂದರು.

    ಸುನೀಲ ದೇಸಾಯಿ ಮಾತನಾಡಿ, ಅಮೆರಿಕದ ಮಾರ್ಕೆಟ್​ಗೆ ಹೋಗುವ ಮುನ್ನ ನಮ್ಮ ಸ್ಟಾರ್ಟಪ್ ಯಾವ ಹಂತದಲ್ಲಿದೆ ಎಂಬುದನ್ನು ಅರಿತುಕೊಳ್ಳಬೇಕು. ಎಲ್ಲ ಮೂಲ ಅಗತ್ಯಗಳನ್ನು ಪೂರೈಸಿಕೊಂಡು ಕಾಲಿಡಬೇಕು. ಸಮಸ್ಯೆಗಳನ್ನು ಎದುರಿಸುವ ಕಲೆಯ ಮೇಲೆ ಯಶಸ್ಸು ಅಡಗಿರುತ್ತದೆ ಎಂದರು.

    ಮಾರ್ಕೆಟಿಂಗ್ ತಜ್ಞರಾದ ಲಿಂಗರಾಜ ಪಿ. ಹಾಗೂ ರಾಮದಾಸ್ ಅವರು ವರ್ಚುವಲ್ ಮೂಲಕ ಚರ್ಚೆಯಲ್ಲಿ ಭಾಗಿಯಾದರು.

    ಉತ್ಪಾದಕತೆಗೆ ಆದ್ಯತೆ: ತಮ್ಮ ಉದ್ಯಮ ಅನುಭವಗಳೊಂದಿಗೆ ಭವಿಷ್ಯದ ಉತ್ಪಾದನೆಗಳ ಕುರಿತು ಮಾತನಾಡಿದ ಲೋಕೇಶ ಪಾಯಕ್ ಅವರು, ಇಂಜಿನಿಯರಿಂಗ್ ವಿಭಾಗದ ಎಲ್ಲ ಕೋರ್ಸ್​ಗಳು ಸದ್ಯ ಉತ್ಪಾದಕತೆಗೆ ಆದ್ಯತೆ ನೀಡುತ್ತಿವೆ. ಕೋವಿಡ್ ಸಾಂಕ್ರಾಮಿಕದ ನಂತರ ಹಲವು ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಇಂಜಿನಿಯರಿಂಗ್ ಮತ್ತಷ್ಟು ವಿಸ್ತಾರವಾಯಿತು. ಉದ್ಯಮ ವಲಯ ಹೆಚ್ಚು ಉತ್ಸಾಹ, ಹುಮ್ಮಸ್ಸು ಮೈಗೂಡಿಸಿಕೊಂಡಿದೆ ಎಂದರು.

    ಫಾರ್ವ, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಆಟೋಮೊಬೈಲ್ಸ್, ಸೆಮಿಕಂಡಕ್ಟರ್ ಮುಂತಾದವುಗಳು ಹೆಚ್ಚು ಉದ್ಯೋಗ ಸೃಷ್ಟಿ ಮಾಡಿವೆ. ಭಾರತವು ಜಗತ್ತಿನ ದೊಡ್ಡ ಆರ್ಥಿಕತೆಯ ಪಟ್ಟಿಯಲ್ಲಿ ಬಂದಿದೆ. ಆದರೆ, ವಿಶ್ವದ ಜಿಡಿಪಿಗೆ ಕೊಡುಗೆ ಕಡಿಮೆಯಾಗಿದೆ. ಈ ದಿಸೆಯಲ್ಲಿ ರಫ್ತು ಉದ್ಯಮಕ್ಕೆ ಅವಕಾಶಗಳಿವೆ. ವಿಶ್ವದ ಬೇಡಿಕೆ ದೊಡ್ಡದಿದೆ. ಇದನ್ನು ಬಳಸಿಕೊಳ್ಳಬೇಕು. 2028ರ ವರೆಗೆ ಇಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಬೇಡಿಕೆ ಇನ್ನೂ ಹೆಚ್ಚಲಿದೆ ಎಂದು ಹೇಳಿದರು.

    ಮೆಡಿಕೊಡಿಯೋ ಸಂಸ್ಥಾಪಕ ಉಮೇಶ ವೈದ್ಯಮಠ ಮಾತನಾಡಿ, ಉದ್ಯಮ ಆರಂಭಿಸುವಾಗ ಹಲವು ಸವಾಲುಗಳು ಎದುರಾಗುತ್ತವೆ. ಪ್ರಸ್ತುತ ಮಾರ್ಕೆಟ್ ಅನ್ನು ಎದುರಿಸುವ ಜತೆಗೆ ಹೊಸ ಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಮಾರ್ಕೆಟ್​ನಲ್ಲಿ ಹೊಸ ಪ್ರಯೋಗಗಳು ನಿರಂತರ ನಡೆಯುತ್ತಿರುತ್ತವೆ. ಹಾಗಾಗಿ ನಮ್ಮ ಗುರಿ ಸ್ಪಷ್ಟವಾಗಿರಬೇಕು. ನಾವು ಉತ್ಪಾದಿಸುವ ವಸ್ತುವಿನ ಸರಿಯಾದ ಮೌಲ್ಯ ನಿಗದಿಪಡಿಸಬೇಕು. ದೊಡ್ಡ ಕನಸನ್ನು ಕಾಣುವುದರೊಂದಿಗೆ ಅದನ್ನು ಈಡೇರಿಸಿಕೊಳ್ಳಲು ನಿರಂತರ ಪ್ರಯತ್ನ ಇರಬೇಕು ಎಂದರು.

    ಯುವ ಉದ್ಯಮಿ ಗಿರೀಶ ಶಿರಿಗನ್ನವರ, ತಮ್ಮ ಉದ್ಯಮ ಪಯಣದ ಅನುಭವ ಹಂಚಿಕೊಂಡರು.

    ಹಳೇ ವಿದ್ಯಾರ್ಥಿ ಸಂಘ: ಬಿವಿಬಿ ಕೆಎಲ್​ಇ ಟೆಕ್ ಅಲ್ಯುಮ್ನಿ ಅಸೋಸಿಯೇಶನ್ ಅಧ್ಯಕ್ಷ ಅಶೋಕ ತೋಳನವರ ಮಾತನಾಡಿ, ಬಿವಿಬಿಯಲ್ಲಿ ಕಲಿತ ಶೇ. 75ಕ್ಕೂ ಹೆಚ್ಚು ವಿದ್ಯಾರ್ಥಿಗಳು 4 ಲಕ್ಷ ರೂಪಾಯಿಯಿಂದ 25 ಲಕ್ಷ ರೂ.ವರೆಗಿನ ಸಂಬಳದ ಪ್ಯಾಕೇಜ್​ನೊಂದಿಗೆ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಆಯಾ ಪ್ರದೇಶದಲ್ಲಿರುವ ವಿದ್ಯಾರ್ಥಿಗಳು ಸಂಘಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಬಿವಿಬಿ ಹಳೇ ವಿದ್ಯಾರ್ಥಿಗಳ ಸಂಘಗಳು ಬೆಂಗಳೂರು, ಪುಣೆ ಅಲ್ಲದೆ, ವಿದೇಶದಲ್ಲಿಯೂ ಇವೆ. ಅಮೆರಿಕ, ಇಂಗ್ಲೆಂಡ್, ಸಿಂಗಾಪುರ, ಆಸ್ಟ್ರೇಲಿಯಾ ಸೇರಿ ಆರು ಕಡೆ ಇವೆ. ಅಮೃತ ಮಹೋತ್ಸವಕ್ಕೆ ಬಂದಿರುವ ಅನೇಕ ಹಳೇ ವಿದ್ಯಾರ್ಥಿಗಳು ವಿದ್ಯಾಸಂಸ್ಥೆಗೆ ದೇಣಿಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

    ಅಚ್ಚುಕಟ್ಟಾದ ವ್ಯವಸ್ಥೆ: ಬಿ.ವಿ. ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ಹಾಗೂ ಕೆಎಲ್​ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವ ಸಮಾರಂಭ ಎರಡನ್ನೂ ನಗರದಲ್ಲಿ ಸುವ್ಯವಸ್ಥಿತವಾಗಿ ಸಂಘಟಿಸುವಲ್ಲಿ ಕೆಎಲ್​ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹಾಗೂ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ಅಶೋಕ ಶೆಟ್ಟರ್ ಅವರ ನೇತೃತ್ವದ ತಂಡ ಯಶಸ್ವಿಯಾಗಿದೆ.

    ಮೂರು ದಿನ ವಿವಿಧ ಕಾರ್ಯಕ್ರಮಗಳು ಸುಗಮವಾಗಿ ನಡೆದವು. ಇದಕ್ಕಾಗಿ ಒಂದು ತಿಂಗಳಿಂದ ತಯಾರಿ ನಡೆಸಲಾಗಿತ್ತು. ಶಂಕ್ರಣ್ಣ ಮುನವಳ್ಳಿ ಅವರು ನಿರಂತರ ಸಭೆ ನಡೆಸಿ ಮಾರ್ಗದರ್ಶನ ಮಾಡಿದರು.

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದು, ಸಂಚಲನ ಮೂಡಿಸಿತ್ತು. ಯುವಕರ ಹುಮ್ಮಸ್ಸು ದುಪ್ಪಟ್ಟಾಗಿತ್ತು.

    ಬಿವಿಬಿ ಅಲ್ಲದೆ, ಕೆಎಲ್​ಇ ಅಂಗಸಂಸ್ಥೆಗಳ ಪ್ರಾಧ್ಯಾಪಕರು, ಉಪನ್ಯಾಸಕರು, ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಸ್ಮರಣೀಯವಾಗಿಸಿದರು. ದೇಶ, ವಿದೇಶದಿಂದ ಬಂದಿದ್ದ ಹಳೇ ವಿದ್ಯಾರ್ಥಿಗಳು ಅತ್ಯಂತ ಖುಷಿಯಿಂದ ಕ್ಯಾಂಪಸ್​ನಲ್ಲಿ ಕಾಲ ಕಳೆದರು. ಹಳೆಯ ನೆನಪುಗಳ ಬುತ್ತಿ ಬಿಚ್ಚಿದರು. ಅಂದಿನ ಕ್ಯಾಂಪಸ್ ದಿನಗಳನ್ನು ಸ್ಮರಿಸಿಕೊಂಡರು.

    ಡಾ. ಕೋರೆ ಸಂಭ್ರಮ: ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಡಾ. ಪ್ರಭಾಕರ ಕೋರೆ ಅವರು ಬಿವಿಬಿ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆತರು. ನೂತನವಾಗಿ ಆರಂಭಿಸಲಾದ ಸ್ಪೋರ್ಟ್ಸ್ ಅರೆನಾ ಎದುರು ವಿದ್ಯಾರ್ಥಿಗಳೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟರು. ದೇಶ ವಿದೇಶದಿಂದ ಆಗಮಿಸಿದ್ದ ಹಳೇ ವಿದ್ಯಾರ್ಥಿಗಳು ಸಹ ಅವರೊಂದಿಗೆ ಫೋಟೊಕ್ಕೆ ಫೋಸ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts