More

    ಉತ್ತಮ ಸಮಾಜ ನಿರ್ಮಾಣದಲ್ಲಿ ಸ್ತ್ರೀ ಪಾತ್ರ ಹಿರಿದು

    ಬೀದರ್: ನಗರ ಸೇರಿ ಜಿಲ್ಲಾದ್ಯಂತ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಸ್ತ್ರೀ ಶಕ್ತಿ ಕುರಿತು ಅರ್ಥಪೂರ್ಣ ಚಿಂತನ-ಮಂಥನ, ಉಪನ್ಯಾಸ ಜರುಗಿದವು. ಮಹಿಳೆ ಇಲ್ಲದ ಸಮಾಜ ಶೂನ್ಯ. ಹೆಣ್ಣು ಕುಟುಂಬ, ಸಮಾಜದ ಕಣ್ಣು ಎಂಬ ಹೆಮ್ಮೆ ವ್ಯಕ್ತಪಡಿಸಿ ಸರ್ವ ರಂಗಗಳಲ್ಲೂ ಶಕ್ತಿ-ಸಾಮರ್ಥ್ಯ ಪ್ರದರ್ಶಿಸುತ್ತಿರುವ ನಾರಿ ಶಕ್ತಿಗೆ ಜೈಕಾರ ಹಾಕಿ, ಸೆಲ್ಯೂಟ್ ಹೊಡೆಯಲಾಯಿತು.

    ಪ್ರತಾಪನಗರದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಡಿಸಿಸಿ ಬ್ಯಾಂಕ್ ಶಾರದಾ ಆರ್ಸೆಟಿ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಎಜಿಎಂ ಉಮಾದೇವಿ, ಭಾರತೀಯ ಸಂಸ್ಕೃತಿ, ಪರಂಪರೆ ಜತೆಗೆ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಜವಾಬ್ದಾರಿ ತಾಯಂದಿರ ಮೇಲಿದೆ. ಉತ್ತಮ ಕುಟುಂಬ, ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಹಿರಿದು. ತಾಯಿ ತನ್ನ ಮಗುವಿಗೆ ಉತ್ತಮ ಸಂಸ್ಕಾರ ಕಲಿಸಿಕೊಟ್ಟಲ್ಲಿ ಮಾತ್ರ ಸುಂದರ ಸಮಾಜ ಸೃಷ್ಟಿಯಾಗಲಿದೆ ಎಂದು ಅಭಿಪ್ರಯ ವ್ಯಕ್ತಪಡಿಸಿದರು.

    ಹೆಣ್ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಆಗುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ಜತೆಗೆ ವೃತ್ತಿ ಸಂಬಂಧ ಜವಾಬ್ದಾರಿಗಳನ್ನೂ ನಿಭಾಯಿಸುತ್ತಿದ್ದಾರೆ. ಮಹಿಳೆಯನ್ನು ಅಬಲೆ ಎನ್ನುವ ಕಾಲ ಹೋಗಿದೆ. ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಾತ್ರ ಹೆಣ್ಣು ಮಕ್ಕಳ ಸಾಧನೆ ಕುರಿತು ಮಾತನಾಡುವಂತಾಗಿದೆ. ಕೌಟುಂಬಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುವ ಶಕ್ತಿ ಮಹಿಳೆಯರಿಗಿದೆ ಎಂದು ಹೇಳಿದರು.

    ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ ಮಾತನಾಡಿ, ಮಹಿಳೆಯರ ಅಭ್ಯುದಯಕ್ಕಾಗಿ ಇರುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ಸ್ವಯಂ ಉದ್ಯೋಗಕ್ಕೆ ನೆರವಾಗುವ ಹಲವು ಯೋಜನೆಗಳನ್ನು ಸರ್ಕಾರ ರೂಪಿಸಿದೆ ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಆಯುಕ್ತೆ ಪ್ರೊ.ಲೀಲಾವತಿ ಚಾಕೋತೆ ಮಾತನಾಡಿ, ಮಹಿಳೆಯರು ಶಿಕ್ಷಣ ಪಡೆದು ಸ್ವಾವಲಂಬಿ ಮತ್ತು ಸಶಕ್ತರಾಗುತ್ತಿದ್ದಾರೆ. ಕೊನೆಯುಸಿರು ಇರುವವರೆಗೆ ದುಡಿಯುವ ಮಹಿಳೆ, ತಾಳ್ಮೆಯ ಪ್ರತಿರೂಪ ಎಂದು ಶ್ಲಾಸಿದರು.

    ಸ್ಕೌಟ್ಸ್-ಗೈಡ್ಸ್​ನ ಕಲ್ಯಾಣರಾವ ಚಳಕಾಪುರೆ, ನಾಗರತ್ನ, ಸುಮನ್ ಸಿಂಧೆ, ಸಂಗಪ್ಪ ಹಿಪ್ಪಳಗಾಂವ ಇತರರಿದ್ದರು. ಶಾರದಾ ಆರ್ಸೆಟಿ ನಿರ್ದೇಶಕ ಬಿ.ಶಿವಪ್ರಸಾದ ಪ್ರಾಸ್ತಾವಿಕ ಮಾತನಾಡಿದರು. ಸ್ವಯಂ ಉದ್ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸಪ್ನಾ, ಮೀನಾಕ್ಷಿ ಮಜಕೂರಿ, ಸತ್ಯವತಿ ಜ್ಯಾಂತಿ, ಲಕ್ಷ್ಮೀ ಬಿರಾದಾರ, ರಜಿಯಾ ಬಳಬಟ್ಟಿ ಮೊದಲಾದವರನ್ನು ಸತ್ಕರಿಸಲಾಯಿತು.

    ರಾಂಪುರೆ ಶಾಲೆ: ಹಮಿಲಾಪುರ ಗ್ರಾಮದ ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆಯಲ್ಲಿ ಮಹಿಳಾ ದಿನ ಆಚರಿಸಲಾಯಿತು. ತಾಪಂ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಗೀತಾ ಗಡ್ಡಿ ಮಾತನಾಡಿ, ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮನಾಗಿ ನಿಲ್ಲುತ್ತಿದ್ದಾರೆ. ಮಹಿಳಾ ಶಿಕ್ಷಣದ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿದೆ. ಅದರ ಲವಾಗಿ ಹೆಣ್ಣುಮಕ್ಕಳು ಅಧಿಕ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕಾವೇರಿ ಸ್ವಾಮಿ ಮಾತನಾಡಿದರು. ಸ್ಕೂಲ್ ಅಧ್ಯಕ್ಷ ಮಹೇಶ ರಾಂಪುರೆ ಅಧ್ಯಕ್ಷತೆ ವಹಿಸಿದ್ದರು. ಸುಷ್ಮಿತಾ ಮೋರೆ, ಶಾರದಾಬಾಯಿ ರಾಂಪುರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts