More

    ಸ್ತ್ರೀಯರು ಮನೆಗೆ ಮಾತ್ರ ಸೀಮಿತವಾಗಿರಬಾರದು

    ಶೃಂಗೇರಿ: ಸಮಾಜದಲ್ಲಿನ ಹಲವು ಕಟ್ಟುಪಾಡುಗಳು, ಆಚಾರ-ವಿಚಾರಗಳಿಂದ ಮಹಿಳೆಯರಿಗೆ ಅನಾನುಕೂಲ ಆಗಿರುವುದೇ ಹೆಚ್ಚು. ಮಹಿಳೆಯರು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮೆಣಸೆ ಸರ್ಕಾರಿ ಪ್ರಥಮ ಕಾಲೇಜಿನ ಪ್ರಾಚಾರ್ಯೆ ಭಾರತಿ ಹೇಳಿದರು.

    ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಚುಂಚಶೃಂಗ ತಾಲೂಕು ಒಕ್ಕಲಿಗರ ಮಹಿಳಾ ಸಂಘ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
    ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗಿರದೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಇತ್ಯಾದಿ ಸ್ತರಗಳಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ ಲಿಂಗ ಸಮಾನತೆಯ ವಿಷಯಕ್ಕೆ ಬಂದಾಗ ಹೆಣ್ಣಿಗೆ ಈಗಲೂ ಸೂಕ್ತ ಸ್ಥಾನಮಾನ ದೊರೆತ್ತಿಲ್ಲ. ಅಸಮಾನತೆ ಈಗಲೂ ಇದೆ. ಹೆಣ್ಣು ಹೆತ್ತರೆ ಸಂಕುಚಿತ ಭಾವದಿಂದ ಸ್ವೀಕರಿಸುವ ಮನೋಭಾವ ಇಂದಿಗೂ ಹಲವಾರು ಕುಟುಂಬಗಳಲ್ಲಿವೆ. ಮಹಿಳೆಯರು ಆತ್ಮವಿಶ್ವಾಸದಿಂದ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ ಎಂದರು.
    ಸಂಘದ ಅಧ್ಯಕ್ಷೆ ಶಾಮಿಲಿ ರಮೇಶ್ ಮಾತನಾಡಿ, ಮಹಿಳೆಯರು ತನ್ನ ಕೌಟುಂಬಿಕ ನಿರ್ವಹಣೆ ಜತೆಗೆ ಸಾಮಾಜಿಕ ಜವಾಬ್ದಾರಿ ಹೊತ್ತುಕೊಂಡು ಎಲ್ಲ ಕ್ಷೇತ್ರಗಳಲ್ಲೂ ಉನ್ನತವಾದ ಕೆಲಸ ನಿರ್ವಹಿಸುತ್ತಿದ್ದಾರೆ. ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಹಾಗೂ ವಿಚಾರ ವಿನಿಮಯಗಳ ಮೂಲಕ ದೇಶವನ್ನು ಕಟ್ಟುವ, ಸಂಸ್ಕೃತಿಯನ್ನು ಉಳಿಸುವ ಕಾರ್ಯಕ್ಕೆ ಮಹಿಳೆಯರು ಮುನ್ನಡೆಯಬೇಕು. ಮಹಿಳೆಯರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಆಕೆಯ ಅಂತರಂಗದ ಸಾಮರ್ಥ್ಯ ಹೆಚ್ಚುತ್ತದೆ. ಸಮಾಜದಲ್ಲಿ ನೊಂದ ಮಹಿಳೆಯರ ಬದುಕಿಗೆ ಬೆಳಕಾಗಿರುವುದೇ ದಿನಾಚರಣೆಯ ಪ್ರಮುಖ ಉದ್ದೇಶವಾಗಬೇಕು. ಮಹಿಳೆಯರ ಭಾವನೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಮೂರ್ತರೂಪ ನೀಡುವ ಕಾರ್ಯಕ್ಕೆ ನಾವು ಮುನ್ನುಡಿ ಬರೆಯಬೇಕು ಎಂದು ಹೇಳಿದರು.
    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಂದ ನೃತ್ಯ, ಗಾಯನ ನಡೆಯಿತು. ಸಂಘದ ಪದಾಧಿಕಾರಿಗಳಾದ ಭಾರ್ಗವಿ ವಿವೇಕ್, ಶಕುಂತಲಾ, ಪೂರ್ಣಿಮಾ, ಭಾಗ್ಯಾ, ಸುಗಂಧಿನಿ, ಗೀತಾ, ಸೌಜನ್ಯಾ, ಸುಧಾ, ಮಧುರಾ, ಭೂಮಿಕಾ, ರಕ್ಷಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts