More

    ಇಷ್ಟಾರ್ಥ ಈಡೇರಿಸುವ ಹುಲಿಕಲ್ ಕಲ್ಲೇಶ್ವರ; ಬೇಲೂರು, ಹಳೇಬೀಡು ಮಾದರಿಯ ದೇಗುಲ

    ತುರುವೇಕೆರೆ: ಹುಲಿಕಲ್ ಕಲ್ಲೇಶ್ವರಸ್ವಾಮಿ ದೇವಾಲಯ ಬಹಳ ಪ್ರಾಚೀನವಾಗಿದ್ದು, ಭಕ್ತರ ಇಷ್ಟಾರ್ಥ ನೆರವೇರಿಸುವ ದೇವರೆಂಬ ಖ್ಯಾತಿ ಪಡೆದಿದೆ.ಹೊಯ್ಸಳ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯ ಹಲವು ಇತಿಹಾಸ ಹೊಂದಿದ್ದು, ಇಲ್ಲಿನ ವಾಸ್ತುಶಿಲ್ಪ, ಕೆತ್ತನೆ ಮನಮೋಹಕವಾಗಿದೆ. ದೇವಾಲಯದ ಒಳಗೆ 4 ಕೆತ್ತನೆಯ ಕಂಬಗಳು ಹೊರಗೆ 2 ಕೆತ್ತನೆಯ ಕಂಬಗಳ ಆಧಾರದಲ್ಲಿ ಕಲ್ಲಿನಿಂದಲೇ ನಿರ್ಮಾಣವಾಗಿರುವ ಈ ದೇವಾಲಯ ಇತ್ತೀಚೆಗೆ ಪುರಾತತ್ವ ಇಲಾಖೆಯಿಂದ ಜೀರ್ಣೋದ್ಧಾರವಾಗಿದೆ.ವಿಶಾಲ ಪ್ರದೇಶದಲ್ಲಿ ಚಿಕ್ಕದಾಗಿರುವ ದೇವಾಲಯದ ಗರ್ಭಗುಡಿಯಲ್ಲಿ ಕಲ್ಲಿನ ಮೂಲಲಿಂಗ ಕಲ್ಲೇಶ್ವರಸ್ವಾಮಿ ರೂಪದಲ್ಲಿದೆ. ಲಿಂಗದ ಮುಂದೆ ಕಲ್ಲಿನ ನಂದಿ ವಿಗ್ರಹವಿದ್ದು, ದೇವಾಲಯದ ಒಳಗಡೆ ಮೇಲ್ಛಾವಣಿಯಲ್ಲಿ ವಿಶೇಷವಾಗಿರುವ ಕಲಾಕೃತಿಗಳು ಕಾಣಸಿಗುತ್ತವೆ.

    ದೇವಾಲಯದ ಮುಂಭಾಗದಲ್ಲಿ ಶಿವನಮೂರ್ತಿ, ಅಕ್ಕಪಕ್ಕ ನಂದಿ ವಿಗ್ರಹ ನಿರ್ಮಿಸಿ ಬಹಳ ಸುಂದರವಾಗಿ ಕಾಣುವಂತಿದ್ದು, ಪ್ರವಾಸಿಗರ ಆಕರ್ಷಣೆಯಾಗಿದೆ. ದೇವಾಲಯದ ಮುಂದೆ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯವರು ಸುರಕ್ಷಿತ ಪ್ರಾಚೀನ ಸ್ಮಾರಕ ಎಂಬ ನಾಮಲಕ ಹಾಕಿದ್ದಾರೆ. ದೇವಾಲಯವು ಭೂಮಿ ಮಟ್ಟದಿಂದ ಕೆಳಭಾಗದಲ್ಲಿರುವುದರಿಂದ ಮಳೆಗಾಲದಲ್ಲಿ ದೇವಾಲಯದ ಸುತ್ತ ಹಾಗೂ ಒಳಗೆ ನೀರು ತುಂಬುತ್ತದೆ. ಬೇಸಿಗೆಯಲ್ಲಿ ಖಾಲಿಯಾಗಿ ದರ್ಶನಕ್ಕೆ ಅವಕಾಶ ದೊರೆಯುತ್ತದೆ.

    ದೇವಸ್ಥಾನದ ಮುಂದೆ ಶಾಸನದ ಕಲ್ಲುಗಳಿದ್ದು, ಸಂಸ್ಕೃತ ಲಿಪಿಯಲ್ಲಿ ಹಲವು ವಿಷಯಗಳನ್ನು ಕೆತ್ತಲಾಗಿದೆ. ಇದನ್ನು ಪುರಾತತ್ವ ಇಲಾಖೆ ಸಂರಕ್ಷಿಸಿದ್ದು ಹೆಚ್ಚಿನ ಅಧ್ಯಯನ ನಡೆಸಿದೆ. ಬೇಲೂರು, ಹಳೇಬೀಡು ಮಾದರಿಯಲ್ಲಿರುವ ಹೊಯ್ಸಳ ದ್ರಾವಿಡ ಕಾಲದ ದೇವಾಲಯಗಳನ್ನು ನೋಡಲು ಭಕ್ತರು ಆಗಮಿಸುತ್ತಾರೆ.
    ಮಂಜಣ್ಣ, ಗ್ರಾಮಸ್ಥ
    *********
    ಕಲ್ಲೇಶ್ವರ ರೂಪದಲ್ಲಿರುವ ಶಿವಲಿಂಗ ಹಾಗೂ ನಂದಿಗೆ ಪ್ರತಿ ದಿನ ಬೆಳಗಿನ ಪೂಜೆ ನಡೆಯುತ್ತಿದೆ. ಶಿವರಾತ್ರಿ, ಕಾರ್ತಿಕ ಮಾಸದಲ್ಲಿ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಷ್ಟಾರ್ಥ ಸಿದ್ದಿಗಾಗಿ ಹರಕೆ ಮಾಡಿಕೊಂಡು ಪೂಜೆ ಸಲ್ಲಿಸುವ ಪದ್ಧತಿ ಇದೆ. ವಕ್ಕಲು ಗ್ರಾಮಗಳಾದ ಚಿಕ್ಕಗೊರಾಘಟ್ಟ, ಲಾಳನಕೆರೆ, ಮುದ್ದಪುರಾ, ಬೈರಾಪುರದ ಜನರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
    ಕಲ್ಲಯ್ಯ, ಪ್ರಧಾನ ಅರ್ಚಕ
    ********
    ದೇವಸ್ಥಾನದ ಪಕ್ಕದಲ್ಲಿರುವ ಕಟ್ಟೆ ಅಯ್ಯನಬಾವಿ ಎಂದು ಪ್ರಖ್ಯಾತಿ ಪಡೆದಿದ್ದು. ಈಗ ಮಣ್ಣು ತೆಗೆದು ಆಳ ಮಾಡಿ ಕಟ್ಟೆಯಾಗಿ ಮಾರ್ಪಟ್ಟಿದೆ. ಈ ಬಾವಿಯಲ್ಲಿ ನೀರು ಬತ್ತಿದ ದಿನವನ್ನೇ ನೋಡಿಲ್ಲ. ಬೇಸಿಗೆಯಲ್ಲಿಯೂ ನೀರು ಇರುತ್ತದೆ. ಅಯ್ಯನಬಾವಿ ಅಯ್ಯನಕಟ್ಟೆ ಎಂಬ ಹೆಸರಿನಲ್ಲಿ ಕರೆಯುತ್ತಿದ್ದೇವೆ. ಆದ್ದರಿಂದ ಕಲ್ಲೇಶ್ವರ ಸ್ವಾಮಿಯನ್ನು ಅಯ್ಯನದೇವರು ಅಂತಲೂ ಕರೆಯಲಾಗುತ್ತದೆ.
    ಬಸವರಾಜು, ಗ್ರಾಮಸ್ಥ

    ತಲುಪುವುದು ಹೇಗೆ? ತುರುವೇಕೆರೆ ಪಟ್ಟಣದಿಂದ ಹುಲಿಕಲ್‌ಗೆ 15 ಕಿಮೀ ದೂರ. ತುರುವೇಕೆರೆಯಿಂದ ಕೊಡಗಿಹಳ್ಳಿ ಮಾರ್ಗವಾಗಿ ಹುಲಿಕಲ್ ತಲುಪಬಹುದು. ತಿಪಟೂರಿನಿಂದ ತಂಡಗ ಗ್ರಾಮದ ಮೂಲಕವೂ ಇಲ್ಲಿಗೆ ತಲುಪಬಹುದು.

    ಸೂರ್ಯನ ಕಿರಣ ಸ್ವಾಮಿಗೆ ಸ್ಪರ್ಶ: ಕಲ್ಲೇಶ್ವರ ಸ್ವಾಮಿ ದೇವಾಲಯದ ಬಾಗಿಲು ಪೂರ್ವಾಭಿಮುಖವಾಗಿದ್ದು ಪ್ರತಿ ದಿನ ಬೆಳಗಿನ ಪೂಜೆ ಸಮಯದಲ್ಲಿ ಬಾಗಿಲು ತೆರೆದಾಗ ಸೂರ್ಯ ಉದಯದ ಸಂದರ್ಭದಲ್ಲಿ ಸೂರ್ಯನ ಕಿರಣ ನಂದಿ ಹಾಗೂ ಶಿವಲಿಂಗದ ಮೇಲೆ ಸ್ಪರ್ಶಿಸಲಿದೆ. ಸೂರ್ಯನ ಬೆಳಕಿನಲ್ಲಿಯೇ ದೇವಾಲಯ ದರ್ಶನ ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts