More

    ಇವತ್ತಿಂದ್ಲೆ ಒಬ್ಬರಿಗೆ ಆರು ಕ್ವಾಟ್ರು… 4 ಬಿಯರ್…!

    ಶಿವಮೊಗ್ಗ: ಒಬ್ಬರಿಗೆ ಒಂದು ದಿನಕ್ಕೆ ಆರು ಕ್ವಾಟ್ರು ಲಿಕ್ಕರ್,(ಒಂದೂವರೆ ಫುಲ್ ಬಾಟೆಲ್), ನಾಲ್ಕು ಬಿಯರ್, ಆರು ಬಿಯರ್ ಟಿನ್(ಸಣ್ಣದು) ಮಾತ್ರ.. ಇನ್ನೂ ಹೆಚ್ಚು ಬೇಕಾದ್ರೆ ಮತ್ತೊಂದು ದಿನ ಕಾಯಬೇಕು..

    ಹಸಿರು ವಲಯದಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಸೋಮವಾರದಿಂದಲೇ ಲಿಕ್ಕರ್ ಶಾಪ್ ಆರಂಭವಾಗಲಿದೆ.

    ಸುದೀರ್ಘ ದಿನಗಳ ನಂತರ ವೈನ್ ಶಾಪ್ ಬಾಗಿಲು ತೆರೆಯುತ್ತಿರುವುದರಿಂದ ಅಬಕಾರಿ ಅಧಿಕಾರಿಗಳು ಭಾನುವಾರ ಸಭೆ ನಡೆಸಿ ಒಬ್ಬರಿಗೆ ಎಷ್ಟು ಕೊಡಬಹುದು ಎಂಬ ಬಗ್ಗೆ ನಿರ್ಧಾರ ಮಾಡಿದರು.

    ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಮತ್ತು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಮದ್ಯ ಪೂರೈಕೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

    ಕಳೆದ 40 ದಿನಗಳಿಂದ ಸ್ಥಗಿತಗೊಂಡಿದ್ದ ಮದ್ಯ ಪೂರೈಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಜಿಲ್ಲೆಯಾದ್ಯಂತ 130 ವೈನ್ ಶಾಪ್​ಗಳು ಹಾಗೂ 28 ಎಂಎಸ್​ಐಎಲ್​ಗಳಲ್ಲಿ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ವೈನ್​ಶಾಪ್, ಬಾರ್ ಆಂಡ್ ರೆಸ್ಟೋರೆಂಟ್​ಗಳು, ಎಂಎಸ್​ಐಎಲ್​ಗಳಲ್ಲಿ ಮದ್ಯದ ಸ್ಟಾಕ್ ಚೆಕ್ ಕೂಡ ಮಾಡಿದ್ದು, ಷರತ್ತಿನ ಆಧಾರದ ಮೇಲೆ ಮದ್ಯ ಪೂರೈಕೆ ಮಾಡಲಿವೆ.

    ಮದ್ಯ ಖರೀದಿಗೆ ಷರತ್ತು ಅನ್ವಯ: ಒಬ್ಬ ವ್ಯಕ್ತಿಗೆ ನಿಗದಿತ ಪ್ರಮಾಣದಲ್ಲಿ ಮಾತ್ರ ಮದ್ಯ ನೀಡಲು ಅವಕಾಶವಿದ್ದು, ಅದಕ್ಕಿಂತ ಹೆಚ್ಚು ಖರೀದಿಸುವಂತಿಲ್ಲ. ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಅಂಗಡಿ ತೆರೆಯಬೇಕು. ಶಾಪ್​ಗಳಲ್ಲಿ ಮ್ಯಾನೇಜರ್, ಇಬ್ಬರು ಮಾರಾಟಗಾರರು ಇರಬೇಕು. ಮೂವರೂ ಹ್ಯಾಂಡ್​ಗ್ಲೌಸ್ ಹಾಗೂ ಮಾಸ್ಕ್ ಧರಿಸಬೇಕು. ಶಾಪ್ ಮುಂದೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಬೇಕು. ನೂಕುನುಗ್ಗಲು ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ನಿರ್ವಿುಸಬೇಕು. ಇಬ್ಬರು ಭದ್ರತಾ ಸಿಬ್ಬಂದಿ ನಿಯೋಜಿಸಬೇಕು ಹಾಗೂ ಪ್ರತಿ ಶಾಪ್​ಗೆ ಒಬ್ಬ ಪೊಲೀಸರನ್ನು ನೇಮಿಸಿಕೊಳ್ಳುವುದು ಕಡ್ಡಾಯವಾಗಿದೆ.

    ಮದ್ಯ ಬಿಟ್ಟು ಬೇರೇನು ಮಾರುವಂತಿಲ್ಲ: ಮದ್ಯ ಹೊರತುಪಡಿಸಿ ನೀರಿನ ಬಾಟಲ್, ಪ್ಲಾಸ್ಟಿಕ್ ಗ್ಲಾಸ್, ಚಿಪ್ಸ್ ಸೇರಿ ಬೇರೆ ಯಾವುದೇ ತರಹದ ವಸ್ತುಗಳನ್ನು ವೈನ್​ಶಾಪ್ ಹಾಗೂ ಎಂಎಸ್​ಐಎಲ್​ಗಳಲ್ಲಿ ಮಾರಾಟ ಮಾಡುವಂತಿಲ್ಲ. ವೈನ್​ಶಾಪ್ ಮತ್ತು ಎಂಎಸ್​ಐಎಲ್​ಗಳ ಹತ್ತರ ಗೂಡಂಗಡಿಗಳಲ್ಲಿ ಲೋಟ, ಚಿಪ್ಸ್ ತೆರೆಯಲು ಸಹ ಅವಕಾಶವಿಲ್ಲ. ಮದ್ಯ ಪಾರ್ಸಲ್​ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅಬಕಾರಿ ಡಿಸಿ ಕ್ಯಾ.ಅಜಿತ್​ಕುಮಾರ್ ತಿಳಿಸಿದ್ದಾರೆ.

    ಮುಂಜಾಗ್ರತೆ ಇಲ್ಲದಿದ್ರೆ ಶಾಪ್ ಬಂದ್: ಡಿಎಆರ್ ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ಹಲವು ಮಾರ್ಗಸೂಚಿ ಪಾಲಿಸಲು ಸೂಚಿಸಿದ್ದು, ಮದ್ಯ ಮಾರಾಟಕ್ಕೆ ಪರೀಕ್ಷಾರ್ಥವಾಗಿ ಅವಕಾಶ ನೀಡಲಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಉಳಿದ ಪರವಾನಗಿ ಹೊಂದಿರುವ ಮದ್ಯದಂಗಡಿ ತೆರೆಯಲಾಗುವುದು. ಈಗಾಗಲೇ ಮದ್ಯದಂಗಡಿಗಳಿಗೆ ತಿಳಿವಳಿಕೆ ಪತ್ರ ಕಳುಹಿಸಲಾಗಿದೆ. ಅದರಂತೆ ಮುಂಜಾಗ್ರತ ಕ್ರಮ ಅನುಸರಿಸದೆ ಇದ್ದರೆ ಶಾಪ್ ಬಾಗಿಲು ತೆಗೆಯಲು ಬಿಡುವುದಿಲ್ಲ ಎಂದು ಅಬಕಾರಿ ಡಿಸಿ ಕ್ಯಾ. ಅಜಿತ್​ಕುಮಾರ್ ಎಚ್ಚರಿಕೆ ನೀಡಿದರು.

    ಸೋಮವಾರ ಬೆಳಗ್ಗೆ 7ರಿಂದ ಮತ್ತೊಂದು ಸುತ್ತು ಪರಿಶೀಲನೆ ನಡೆಯಲಿದೆ. ಅಹಿತಕರ ಘಟನೆಗಳು ಸಂಭವಿಸಿದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗುತ್ತದೆ. ಇದರಿಂದ ಈಗ ನೀಡಿರುವ ಕಾಲವಕಾಶ ಕಡಿತಗೊಳ್ಳಬಹುದು. ರಾಜ್ಯ ಸರ್ಕಾರ ಏ.1ರಿಂದ ಹೊಸ ದರ ನಿಗದಿಪಡಿಸಿದೆ. ಅದರಂತೆ ಮದ್ಯ ಮಾರಾಟ ಮಾಡಬೇಕು ಎಂದು ಸೂಚಿಸಿದರು.

    ಯಾರಿಗೆಷ್ಟು ಮದ್ಯ? ಒಬ್ಬರಿಗೆ ಆರು ಕ್ವಾರ್ಟರ್ ಅಥವಾ 90 ಎಂಎಲ್​ನ ಹತ್ತು ಪೌಚ್ ಅಥವಾ ಒಂದೂವರೆ ಫುಲ್ ಬಾಟಲ್ ಮಾರಾಟ ಮಾಡಬಹುದು. ಬಿಯರ್ ಪ್ರಿಯರಿಗಾದರೆ ನಾಲ್ಕು ಫುಲ್ ಬಾಟಲ್ ಬಿಯರ್ ಅಥವಾ 6 ಪಿಂಟ್ ಮಾರಾಟ ಮಾಡಬಹುದು. ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ಮದ್ಯ ಮಾರಾಟ ನಿಷೇಧವಿದೆ. ಕೌಂಟರ್ ಸೇಲ್ ಮಾಡಬಹುದು. ಇದರ ಹೊರತು ಹಳ್ಳಿಗಳಿಗೆ ಮಾರಾಟ ಮಾಡಲು, ಮಿಲಿಟರಿ ಹೊಟೇಲ್​ಗಳಿಗೆ ಪೂರೈಸಲು ಅವಕಾಶವಿಲ್ಲ.

    ಗೂಡಂಗಡಿಗಳಲ್ಲಿ ಮಾರುವಂತಿಲ್ಲ: ಅಂಗಡಿಯಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಆನ್ ಇರಬೇಕು. ಕೆಲವು ಅಂಗಡಿಗಳಿಗೆ ಬಾಗಿಲವರೆಗೆ ಫೋಕಸ್ ಆಗುವಂತೆ ಸಿಸಿ ಕ್ಯಾಮರಾ ಇದೆ. ಸೋಮವಾರದಿಂದ ಹೊರಗೆ ನಿಂತ ಕ್ಯೂ ಕಾಣುವಂತೆ ಫೋಕಸ್ ಆಗಬೇಕು. ಮದ್ಯದಂಗಡಿ ಪಕ್ಕದಲ್ಲಿ ಕೆಲವರು ಗೂಡಂಗಡಿಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಇಂತಹ ಗೂಡಂಗಡಿಗಳನ್ನು ತೆರೆಯುವಂತಿಲ್ಲ. ಮಾರಾಟ ಮಾಡುವ ಸಿಬ್ಬಂದಿಗೆ ಹ್ಯಾಂಡ್ ಗ್ಲೌಸ್ ಕಡ್ಡಾಯವಾಗಿದೆ. ಮಿಲಿಟರಿ ಹೊಟೇಲ್, ಡಾಬಾಗಳಲ್ಲಿ ಸಿಕ್ಕಬಿದ್ದರೆ ವಿಚಾರಣೆ ಬಳಿಕ ಬ್ಯಾಚ್ ನಂಬರ್ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಪಿಐ ವಸಂತ್​ಕುಮಾರ್ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts