More

    ಇನ್ಮುಂದೆ ಹಾವೇರಿಯಲ್ಲೇ ಕೋವಿಡ್ ಟೆಸ್ಟ್

    ಹಾವೇರಿ: ಜಿಲ್ಲೆಯ ಜನರಿಗೆ 1 ತಿಂಗಳ ಹಿಂದೆ ಕೊಟ್ಟ ಭರವಸೆಯಂತೆ ಜಿಲ್ಲಾಸ್ಪತ್ರೆಯಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿಆರ್​ಡಿಎಲ್)ವನ್ನು ಆರಂಭಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ನಗರದ ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ನಿರ್ವಿುಸಿರುವ ವಿಆರ್​ಡಿಎಲ್ ಹಾಗೂ ಐಸಿಯು ವಾರ್ಡ್ ಅನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಉದ್ಘಾಟನೆಗೊಂಡಿರುವ ವಿಆರ್​ಡಿ ಲ್ಯಾಬ್​ನಲ್ಲಿ ಕರೊನಾ ಸೋಂಕಿಗೆ ಮಾತ್ರವಲ್ಲ, ಇತರೆ ಸೋಂಕುಗಳ ತಪಾಸಣೆಗೂ ಅನುಕೂಲಕರವಾಗಿದೆ. ಡೆಂಘೆ, ವೆಲಿಸಾ ಹಾಗೂ ಎಚ್​ವಿ ಸೋಂಕನ್ನು ತಪಾಸಣೆ ಮಾಡಬಹುದಾಗಿದೆ. ಒಂದು ಶಿಫ್ಟ್​ನಲ್ಲಿ 100 ಟೆಸ್ಟ್​ಗಳಂತೆ ದಿನಕ್ಕೆ 300 ಮಾದರಿಗಳನ್ನು ಪರೀಕ್ಷೆ ಮಾಡಬಹುದು. ಆರಂಭದಲ್ಲಿ 50ರಿಂದ 60 ಮಾದರಿಗಳನ್ನು ಪರೀಕ್ಷೆ ನಡೆಸಲಾಗುವುದು. ಮೈಕ್ರೋಬಯೋಲಾಜಿಸ್ಟ್, ಪ್ರಯೋಗಾಲಯ ತಂತ್ರಜ್ಞರ ಅನುಭವ ಮತ್ತು ಸಾಮರ್ಥ್ಯಕ್ಕನುಸಾರವಾಗಿ ಪರೀಕ್ಷೆಗಳ ಸಂಖ್ಯೆ ಹೆಚ್ಚಳವಾಗಲಿದೆ. ಮೊದಲ ದಿನವಾದ ಇಂದು ಪ್ರಾಯೋಗಿಕವಾಗಿ ಐದು ಪ್ರಕರಣಗಳ ಪರೀಕ್ಷೆ ನಡೆಸಲಾಗಿದೆ ಎಂದರು.

    ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 16 ವೆಂಟಿಲೇಟರ್​ನ ಐಸಿಯು ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ಐದು ವೆಂಟಿಲೇಟರ್ ಬೇಡಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಶೇಷವಾಗಿ ಕೋವಿಡ್ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಲ್ಲಿ 50 ಬೆಡ್, ಸವಣೂರಲ್ಲಿ 30 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ 10ರಿಂದ 15 ಬೆಡ್​ಗಳ ಸೇರ್ಪಡೆಗೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.

    ಸಂಸದ ಶಿವಕುಮಾರ ಉದಾಸಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ.ಜಿ. ದೇವರಾಜ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಎಸ್. ಹಾವನೂರ, ಡಾ. ಸುರೇಶ ಪೂಜಾರ, ಡಾ. ನಿರಂಜನ ಮಾನಿಬಣಕಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts