More

    ಇನ್ನೂ ಕಾರ್ಯಾರಂಭಿಸದ ಹೆರಿಗೆ ಆಸ್ಪತ್ರೆ!

    ಬೆಳಗಾವಿ: ಗ್ರಾಮೀಣ ಬಡ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಕಂಪನಿಯಿಂದ ವಡಗಾವಿಯ ತಾಲೂಕು ವೈದ್ಯಾಧಿಕಾರಿ ಕಚೇರಿ ಪಕ್ಕದಲ್ಲಿ ನಿರ್ಮಿಸಿರುವ ಹೆರಿಗೆ ಆಸ್ಪತ್ರೆಯು ಮೂರು ವರ್ಷ ಗತಿಸಿದರೂ ಕಾರ್ಯಾರಂಭವಾಗಿಲ್ಲ. ಕೋಟ್ಯಂತರ ರೂ. ವ್ಯಯಿಸಿ ಆಸ್ಪತ್ರೆ ನಿರ್ಮಿಸಿದರೂ ಜನರಿಗೆ ಉಪಯೋಗವಾಗುತ್ತಿಲ್ಲ.

    ಆಸ್ಪತ್ರೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಸುಣ್ಣ, ಬಣ್ಣ ಹಚ್ಚಿ ಅಂದ ಗೊಳಿಸಿ ಕಟ್ಟಡ ಉದ್ಘಾಟಿಸಲಾಗಿತ್ತು. ಆದರೆ, ವರ್ಷಗಳು ಉರುಳಿದರೂ ಆಸ್ಪತ್ರೆ ಕಾರ್ಯಾ ರಂಭಿಸಿಲ್ಲ. ಆಸ್ಪತ್ರೆ ಆವರಣದಲ್ಲಿ ಕಸ ಬೆಳೆದಿದ್ದು, ಆಸ್ಪತ್ರೆ ಧೂಳು ತಿನ್ನುತ್ತಿದೆ. ಈ ಆಸ್ಪತ್ರೆ ನಿರ್ಮಾಣವಾದರೆ ಜಿಲ್ಲಾಸ್ಪತ್ರೆ ಮೇಲಿನ ಹೆಚ್ಚಿನ ಹೊರೆ ತಪ್ಪಿಸಬಹುದಿತ್ತು. ಆ ಭಾಗದ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ, ಜನಪ್ರತಿನಿಧಿಗಳು ಹೆಸರಿಗಷ್ಟೇ ಆಸ್ಪತ್ರೆ ಉದ್ಘಾಟಿಸಿ, ಆಸ್ಪತ್ರೆ ಕಾರ್ಯಾರಂಭಿಸುವುದನ್ನು ಮರೆತಿದ್ದರಿಂದ ನಾಗರಿಕರು ಅಸಮಾಧಾನ ವ್ಯಕ್ತಪಡಿ ಸುತ್ತಿದ್ದಾರೆ. ಸ್ಮಾರ್ಟ್‌ಸಿಟಿಯಿಂದ ಆಸ್ಪತ್ರೆ ಕಟ್ಟಡ ನಿರ್ಮಿಸಿ ಮೂರು ವರ್ಷವಾಗಿದ್ದರೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಇದೇ ತಿಂಗಳು ಫೆ. 2ರಂದು ಹಸ್ತಾಂತರ ಮಾಡಿದ್ದು, ಅಧಿಕಾರಿ ನಿಷ್ಕಾಳಜಿ ಎದ್ದು ಕಾಣುತ್ತದೆ. ಹೀಗಾಗಿ ಆಸ್ಪತ್ರೆಯ ಕಾರ್ಯಾರಂಭಕ್ಕೆ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ, ಇತರ ಸಿಬ್ಬಂದಿ ನೇಮಕಾತಿಯೇ ಆಗಿಲ್ಲ. ಇನ್ನು ಮುಂದೆ ಜಿಲ್ಲಾ ಆರೋಗ್ಯಾಧಿಕಾರಿ ಅವರ ಕಚೇರಿಯಿಂದ ಸರ್ಕಾರಕ್ಕೆ ಪತ್ರ ಬರೆದು ಆಸ್ಪತ್ರೆ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿ, ಸಿಬ್ಬಂದಿ ನೇಮಕಾತಿ ಬಗ್ಗೆ ಸರ್ಕಾರದಿಂದ ಒಪ್ಪಿಗೆ ಪಡೆಯಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.

    ಸುಸಜ್ಜಿತ ಆಸ್ಪತ್ರೆ ಕಟ್ಟಡ: ನೂತನವಾಗಿ ನಿರ್ಮಿಸಿದ ಆಸ್ಪತ್ರೆಯ ಕಟ್ಟಡದಲ್ಲಿ ನವಜಾತ ಶಿಶು ಆರೈಕೆ ಕೇಂದ್ರ, ತೀವ್ರ ನಿಘಾ ಘಟಕ, ಶಸ್ತ್ರ ಚಿಕಿತ್ಸಾ ಘಟಕ, ಹೆರಿಗೆ ತಜ್ಞರ ಕೊಠಡಿ, ಶಿಶು ವೈದ್ಯರ ಕೊಠಡಿ ಹಾಗೂ ಪ್ರಯೋಗಾಲಯದ ವಿಭಾಗ ಇದೆ. ನಗರ ಪ್ರದೇಶದಲ್ಲಿ ಹೆರಿಗೆಗೆ ದಾಖಲಾಗುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಾಗೂ ಬಡ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದಕ್ಕೆ ಈ ಆಸ್ಪತ್ರೆ ಅನುಕೂಲಕರವಾಗಲಿ ಎಂದು ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿತ್ತು.

    ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ: ಜಿಲ್ಲೆಯ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ಸಿಬ್ಬಂದಿ ನಿಯೋಜನೆ ಮಾಡುತ್ತಿಲ್ಲ ಎಂಬ ಆರೋಪಗಳಿದ್ದವು. ಆದರೆ, ನಗರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಹೆರಿಗೆ ಆಸ್ಪತ್ರೆ ವಿಷಯದಲ್ಲೂ ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಹೊಸ ಹೆರಿಗೆ ಆಸ್ಪತ್ರೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಆಸ್ಪತ್ರೆಯ ಎಲ್ಲ ಕಾರ್ಯಚಟುವಟಿಕೆಗಳ ಉಸ್ತುವಾರಿಯನ್ನು ಆರೋಗ್ಯ ಇಲಾಖೆಯೇ ನೋಡಿಕೊಳ್ಳಲಿದೆ.

    2.5 ಕೋಟಿ ರೂ. ವೆಚ್ಚ

    ಸ್ಮಾರ್ಟ್‌ಸಿಟಿ ಕಂಪನಿ ವತಿಯಿಂದ ವಂಟಮೂರಿ ಆರೋಗ್ಯ ಕೇಂದ್ರದ ಆವರಣದಲ್ಲಿ 2.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೆರಿಗೆ ಆಸ್ಪತ್ರೆಯು ತಡವಾಗಿಯಾದರೂ ಕಾರ್ಯಾರಂಭವಾಯಿತು. ಆದರೆ, ವಡಗಾವಿಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೆರಿಗೆ ಆಸ್ಪತ್ರೆ ಆರಂಭಿಸುವುದಕ್ಕೆ ಅಧಿಕಾರಿಗಳು ಏಕೆ ನಿಷ್ಕಾಳಜಿ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

    ವಡಗಾವಿಯಲ್ಲಿ ಸ್ಮಾರ್ಟ್‌ಸಿಟಿ ಕಂಪನಿಯಿಂದ ನಿರ್ಮಿಸಿದ ಹೆರಿಗೆ ಆಸ್ಪತ್ರೆಯನ್ನು ಈಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆಸ್ಪತ್ರೆ ಕಾರ್ಯಾರಂಭಿಸುವುದಕ್ಕೆ ಅಗತ್ಯವಿರುವ ಸಿಬ್ಬಂದಿ ನೇಮಕ, ಅನುದಾನದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ.
    | ಡಾ. ಮಹೇಶ ಕೋಣಿ, ಜಿಲ್ಲಾ ಆರೋಗ್ಯಾಧಿಕಾರಿ ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts