More

    ಆರೋಗ್ಯ ಸಹಾಯಕನಿಂದ ದಂಡ ವಸೂಲಿ

    ಹಾವೇರಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ಭಾರಿ ಬಂದೋಬಸ್ತ್ ಒದಗಿಸಿದ್ದಾರೆ. ಆದರೆ, ಇದೇ ಸಮಯವನ್ನು ಬಂಡವಾಳ ಮಾಡಿಕೊಂಡ ಕೆಲ ಪೊಲೀಸರು ಆರೋಗ್ಯ ಇಲಾಖೆ ನೌಕರ ಎಂಬುದನ್ನೂ ಲೆಕ್ಕಿಸದೆ ದುಡ್ಡು ವಸೂಲಿ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

    ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಹಾಯಕರು ಹಾಗೂ ಮೇಲ್ವಿಚಾರಕರು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.

    ಸೋಮವಾರ ಸಂಜೆ 5.45ಕ್ಕೆ ಹಿರಿಯ ಆರೋಗ್ಯ ಸಹಾಯಕ ಮಂಜುನಾಥ ಹೊನ್ನಾರಗಾರ ಎಂಬುವವರು ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಹಾವೇರಿ ಚನ್ನಮ್ಮ ವೃತ್ತದಲ್ಲಿ ಅವರ ವಾಹನ ತಡೆದ ಎಎಸ್​ಐ ಒಬ್ಬರು, ಆತ ಆರೋಗ್ಯ ಇಲಾಖೆ ನೌಕರ ಎಂದು ಹೇಳಿದರೂ ಅವಾಚ್ಯ ಶಬ್ಧಗಳಿಂದ ಬೈದು, ಅವರಿಂದ 1,000 ರೂ. ದುಡ್ಡು ತೆಗೆದುಕೊಂಡು ಕೇವಲ 500 ರೂ. ದಂಡದ ರಸೀದಿ ನೀಡಿದ್ದಾರೆ. ಅಲ್ಲದೆ, ಇದನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಆರೋಗ್ಯ ಇಲಾಖೆ ನೌಕರರು ಕರೊನಾ ಭೀತಿ ನಡುವೆಯೇ ಸಾರ್ವಜನಿಕರ ಅನುಕೂಲಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಪೊಲೀಸರು ಅಂತವರಿಂದಲೇ ದುಡ್ಡು ವಸೂಲಿ ಮಾಡಿ, ಬೆದರಿಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡಲೆ ದುಡ್ಡು ವಸೂಲಿ ಮಾಡಿದ ಹಾಗೂ ಅವಾಚ್ಯವಾಗಿ ನಿಂದನೆ ಮಾಡಿದ ಎಎಸ್​ಐ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

    ರಾಜ್ಯ ಸರ್ಕಾರಿ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಪ್ರಮುಖರಾದ ರವಿ ಬಣಕಾರ, ಮಲ್ಲಿಕಾರ್ಜುನ ಮಡಿವಾಳರ, ಸಿ.ಎಫ್. ಹೆಡಿಯಾಲ, ಎಂ.ಎನ್. ಕಂಬಳಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts