More

    ಆನೇಕಲ್‌ನಲ್ಲಿ ವಿಜೃಂಭಣೆಯ ಅಂಬಾರಿ ಉತ್ಸವ, ವಿವಿಧ ಕಲಾ ತಂಡಗಳ ಪ್ರದರ್ಶನ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಭಾಗಿ

    ಆನೇಕಲ್: ಮೈಸೂರಿನ ದಸರಾ ಉತ್ಸವದ ಮಾದರಿಯಲ್ಲೇ ಆನೇಕಲ್ ಪಟ್ಟಣದ ತೊಗಟವೀರ ಜನಾಂಗದವರು ಆಚರಿಸುವ ಶ್ರೀ ಚೌಡೇಶ್ವರಿ ಅಮ್ಮನವರ ದಸರಾ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

    ಚೌಡೇಶ್ವರಿ ಅಮ್ಮನವರ ಅಂಬಾರಿ ಹೊತ್ತ ಆನೆ ಧ್ರುವ ಪಟ್ಟಣದ ಚೌಡೇಶ್ವರಿ ದೇವಾಲಯದ ಮುಂಭಾಗದಲ್ಲಿ ಹಾಕಿದ್ದ ವೇದಿಕೆ ಬಳಿ ಬಂದಾಗ ಗಣ್ಯರು ಪುಷ್ಪಾರ್ಚನೆ ಮಾಡಿದರು. ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬಾರಿ ಮೆರವಣಿಗೆ ನಡೆಯಿತು.

    ಅಂಬಾರಿ ಉತ್ಸವಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಹೆಲಿಕಾಪ್ಟರ್ ಹಾರಾಟ ನಡೆಸಿದರೂ, ಪುಷ್ಪಾರ್ಚನೆ ಮಾಡಲು ಸಾಧ್ಯವಾಗಲಿಲ್ಲ. ಡಿವೈಎಸ್‌ಪಿ ಮಲ್ಲೇಶ್ ಅವರು ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಿದ್ದರು.

    ನಾವೆಲ್ಲರೂ ಒಂದೇ ಎಂಬ ಭಾವನೆ ಅವಶ್ಯ: ಅಂಬಾರಿ ಉತ್ಸವಕ್ಕಾಗಿ ಆಗಮಿಸಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ವ್ಯಕ್ತಿಪೂಜೆಯಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಮುಂದೆ ಸಾಗಿದಾಗ ಬದಲಾವಣೆ ಸಾಧ್ಯವಾಗುತ್ತದೆ ಎಂದರು.

    ದೇವರನ್ನು ಆರಾಧಿಸುವುದು ಮಾತ್ರವಲ್ಲ, ನಮ್ಮಲ್ಲಿನ ದುಷ್ಟ ಶಕ್ತಿಯನ್ನು ದೂರಾಗಿಸಿಕೊಳ್ಳಬೇಕು. ನಾವು ಬದಲಾಗಿ, ದೇಶದಲ್ಲಿ ಶಾಂತಿ ನೆಲಸುವಂತೆ ಆಗಬೇಕು. ನಮ್ಮ ಸಂಸಾರಗಳು ಇತರರಿಗೆ ಮಾದರಿಯಾಗಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲರೂ ಆಲೋಚಿಸುತ್ತಾ ಬದಲಾವಣೆಯತ್ತ ಸಾಗಬೇಕು ಎಂದರು.

    ಆಚರಣೆಗಳು ಯಾವುದೇ ವ್ಯಕ್ತಿಯ ಕಾರ್ಯಕ್ರಮ ಆಗಬಾರದು. ದಸರಾ ಉತ್ಸವ ಊರಿನ ಜನರ ಕಾರ್ಯಕ್ರಮ ಆಗಬೇಕು ಎಂದು ಹೇಳಿದರು.

    ಅರಿಷಡ್ವರ್ಗಗಳನ್ನು ತ್ಯಜಿಸಿ: ವಿಜಯದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸುತ್ತಿದ್ದೇವೆ. ನಮ್ಮೊಳಗಿನ ಮೋಸ, ದ್ವೇಷಾಸೂಯೆ ಸೇರಿ ಅರಿಷಡ್ವರ್ಗಗಳ ಮೇಲೆ ವಿಜಯ ಸಾಧಿಸಬೇಕು ಎಂದು ಚಿಕ್ಕಬಳ್ಳಾಪುರದ ಶ್ರೀ ಪುಷ್ಪಾಂಡಜ ಗಿರಿ ಮಹಾಸ್ವಾಮೀಜಿ ಸಲಹೆ ನೀಡಿದರು.

    ಮಳೆ, ಬೆಳೆ ಸಮೃದ್ಧಿಯಾಗಲಿ: ಆನೇಕಲ್ ದಸರಾ ಉತ್ಸವ ಕಳೆದೆರಡು ವರ್ಷಗಳಿಂದ ಕರೊನಾ ಪಿಡುಗಿನಿಂದಾಗಿ ಕಳೆಗುಂದಿತ್ತು. ಆದರೆ, ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಚೌಡೇಶ್ವರಿ ಆಶೀರ್ವಾದದಿಂದ ಉತ್ತಮ ಮಳೆ, ಬೆಳೆಯಾಗಿ ದೇಶ ಸಮೃದ್ಧಿಯಾಗಲಿ ಎಂದು ಶಾಸಕ ಬಿ. ಶಿವಣ್ಣ ಹಾರೈಸಿದರು.

    ರಾಜಾಪುರ ಸಂಸ್ಥಾನಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಆನೇಕಲ್ ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ, ಶ್ರೀ ಚೌಡೇಶ್ವರಿ ಸೇವಾ ಸಮಿತಿ ಗೌರವಾಧ್ಯಕ್ಷ ನಾಗರಾಜು, ಅಧ್ಯಕ್ಷ ವೆಂಕಟಾಚಲಯ್ಯ, ಕಾರ್ಯದರ್ಶಿ ಆರ್.ಎಸ್. ರಾಜು, ಖಜಾಂಚಿ ಬಾಲಕೃಷ್ಣಪ್ಪ, ಮುಖಂಡರಾದ ಟಿ.ವಿ ಬಾಬು, ಜೆ. ನಾರಾಯಣಪ್ಪ, ಪುರಸಭೆ ಉಪಾಧ್ಯಕ್ಷೆ ಲಲಿತಾ, ಸದಸ್ಯರಾದ ಬಿ. ನಾಗರಾಜು, ಶ್ರೀನಿವಾಸ್, ಮುನಾವರ್, ಶ್ರೀಕಾಂತ್, ದೊರೆ, ಕೃಷ್ಣ, ಸುಧಾ, ನಾಮ ನಿರ್ದೇಶಿತ ಸದಸ್ಯ ಮಂಜುನಾಥ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts