More

    ಆನವಟ್ಟಿಯಲ್ಲಿ ಅನಧಿಕೃತ ಮನೆಗಳ ತೆರವು

    ಆನವಟ್ಟಿ: ಪಟ್ಟಣ ಪಂಚಾಯಿತಿ ಅಧಿಕಾರಿಗಳು ಶನಿವಾರ ಆನವಟ್ಟಿ-ಹಾನಗಲ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದ್ದ ಮನೆಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಜೆಸಿಬಿ ಮುಖಾಂತರ ತೆರವುಗೊಳಿಸಿದರು.
    ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ 3 ಎಕರೆ ಜಾಗವನ್ನು ನಿಗದಿಪಡಿಸಿದ್ದು ಸದರಿ ಜಾಗದಲ್ಲಿ ಕಾಮಗಾರಿಯೂ ನಡೆಯುತ್ತಿದೆ. ಆದರೆ ಅದರಲ್ಲಿ 10 ಗುಂಟೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ 10ಕ್ಕೂ ಹೆಚ್ಚು ಮನೆಗಳನ್ನು ಕಂದಾಯ ಇಲಾಖೆ, ಪಿಡಬ್ಲುೃಡಿ ಅಧಿಕಾರಿಗಳ ಜತೆಗೂಡಿ ಪೊಲೀಸ್ ಇಲಾಖೆಯ ನೆರವನ್ನು ಪಡೆದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮನೆಗಳನ್ನು ತೆರವುಗೊಳಿಸಿದರು.
    ತೆರವು ಮಾಡಲಾದ ಮನೆಗಳಲ್ಲಿ ವೃದ್ಧರು, ಮಕ್ಕಳು ಸೇರಿದಂತೆ ಕುಟುಂಬದವರೆಲ್ಲರೂ ಬೀದಿಗೆ ಬಿದ್ದಿದ್ದಾರೆ. ನಮಗೆ ಸೂಕ್ತ ವ್ಯವಸ್ಥೆಯನ್ನು ಮಾಡಿ ನಂತರದಲ್ಲಿ ಈ ಕಾರ್ಯಾಚರಣೆ ಮಾಡಬಹುದಿತ್ತು, ನಮಗೆ ಈಗ ಉಳಿದುಕೊಳ್ಳಲು ಒಂದು ಸೂರು ಸಹ ಇಲ್ಲದಂತಾಯಿತು. ಹೆಂಡತಿ ಮಕ್ಕಳೊಡನೆ ಹೇಗೆ ಬದುಕಬೇಕು ಎಂದು ಮನೆ ಕಳೆದುಕೊಂಡ ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡರು.
    ಬಸ್ ನಿಲ್ದಾಣಕ್ಕೆ ಮಂಜೂರಾದ ಜಾಗದಲ್ಲಿ ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದ್ದರಿಂದ ಅವುಗಳನ್ನು ತೆರವುಗೊಳಿಸಲಾಗಿದೆ. ಮನೆ ಕಳೆದುಕೊಂಡ ಮಾಲೀಕರಿಗೆ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರುವ ವಿಠ್ಠಲಾಪುರ ಗ್ರಾಮದಲ್ಲಿ ನಿವೇಶನ ಸಹಿತ ಪಂಚಾಯಿತಿಯಿಂದ ಮಂಜೂರಾದ ಮನೆಗಳನ್ನು ಕೊಡಲಾಗುವುದು ಎಂದು ಮುಖ್ಯಾಧಿಕಾರಿ ಎಚ್.ಅಕ್ಷತಾ ತಿಳಿಸಿದರು. ತೆರವುಗೊಂಡ ಮನೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅಕ್ರಮವಾಗಿ ಅಡಗಿಸಿಟ್ಟ ಮರ ಮುಟ್ಟುಗಳನ್ನು ಜಪ್ತಿಮಾಡಿಕೊಂಡು ಹೋದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts